ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ಡಾ. ಆರ್.ಎಂ. ಕುಬೇರಪ್ಪ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಗಂಭೀರ ಚಿಂತನೆ ನಡೆಸಿದ್ದಾರೆ.
ರಾಣಿಬೆನ್ನೂರು: ಪಶ್ಚಿಮ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ಡಾ. ಆರ್.ಎಂ. ಕುಬೇರಪ್ಪ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಗಂಭೀರ ಚಿಂತನೆ ನಡೆಸಿದ್ದಾರೆ.
ಈ ಕುರಿತು ಪ್ರಕಟಣೆ ನಿಡಿರುವ ಅವರು, ಕ್ಷೇತ್ರ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳ ಬೆಂಬಲಿಗರ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಾಗ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರರ ಘಟಕದ ರಾಜ್ಯಾಧ್ಯಕ್ಷನಾಗಿ ಇಡೀ ರಾಜ್ಯದ ತುಂಬೆಲ್ಲಾ ಪ್ರವಾಸ ಮಾಡಿ ಸಂಘಟನೆ ಮಾಡಿರುವ ನನಗೆ ಈ ಬಾರಿ ಟಿಕೆಟ್ ನಿರಾಕರಿಸಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಡಾ.ಕುಬೇರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಭಾರತ್ ಜೋಡೋ, ಮನೆಮನೆಗೆ ಕಾಂಗ್ರೆಸ್, ಸ್ವಾತಂತ್ರ್ಯ ನಡಿಗೆ, ಅಭಿಯಾನಗಳು ಮುಂತಾದವುಗಳಲ್ಲಿ ಸಾಕಷ್ಟು ಸಮಯ ಹಾಗೂ ಹಣ ಖರ್ಚು ಮಾಡಿ ಸಂಘಟನೆಯಲ್ಲಿ ದುಡಿದಿದ್ದೇನೆ. 2020ರ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದಂತಹ ಸಮಯದಲ್ಲಿ ಪಕ್ಷದ ಆದೇಶದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷಕ್ಕೆ ಗೌರವ ತಂದುಕೊಟ್ಟಿದ್ದೇನೆ. 28 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 03 ಜನ ಕಾಂಗ್ರೆಸ್ ಶಾಸಕರುಗಳಿದ್ದಾಗ ಹಾಗೂ ಮೋದಿ ಹವಾ ಜೋರು ಇದ್ದಾಗ ಪಕ್ಷ ಸಂಘಟಿಸಿದ ನನ್ನನ್ನು ಈಗ ಕಡೆಗಣಿಸಿರುವುದು ಭಾರೀ ಅನ್ಯಾಯ ಎಂದು ಕಿಡಿಕಾರಿದ್ದಾರೆ.
ಅಹಿಂದಗೆ ಅನ್ಯಾಯ?:ನಾಲ್ಕು ಮತ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಪಕ್ಷ ಯಾವ ಮಾನದಂಡ ಅನುಸರಿಸಿದೆ ಎಂಬುದೇ ತಿಳಿಯುತ್ತಿಲ್ಲ. 4 ಅಭ್ಯರ್ಥಿಗಳಲ್ಲಿ ಒಬ್ಬರು ರಾಜ್ಯಾಧ್ಯಕ್ಷರ ಜಾತಿಯವರು (ಒಕ್ಕಲಿಗ). ಇನ್ನುಳಿದ 3 ಅಭ್ಯರ್ಥಿಗಳು ಲಿಂಗಾಯತ ಸಮಾಜಕ್ಕೆ ಸೇರಿದವರು. ಮಾತೆತ್ತಿದರೆ ಅಹಿಂದ ಜಪಿಸುವ ಕಾಂಗ್ರೆಸ್ ನಾಯಕರಿಗೆ ಸಾಮಾಜಿಕ ನ್ಯಾಯ ನೆನಪಾಗಲಿಲ್ಲವೆ? ನಾನು ರಾಜ್ಯದಲ್ಲಿ ಅಹಿಂದ ಸಂಸ್ಥಾಪಕನಾಗಿದ್ದು, ಬೆವರು ಸುರಿಸಿ ಗಳಿಸಿದ ಹಣ ಖರ್ಚು ಮಾಡಿ ಅಹಿಂದ ಕಟ್ಟಿ ಬೆಳೆಸಿದವನು ಎಂದು ತಮ್ಮ ಶ್ರಮವನ್ನು ಕಾಂಗ್ರೆಸ್ಸಿಗೆ ನೆನಪು ಮಾಡಿದ್ದಾರೆ.ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಕೂಡಾ ಪರಿಚಯವಿಲ್ಲದ ಹಾಗೂ ಯಾವ ಕಾರ್ಯಕರ್ತರಿಗೂ ಪರಿಚಯವಿಲ್ಲದ ಮೋಹನ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಿದರೆ, ಸಣ್ಣ ಪುಟ್ಟ ಜಾತಿಯ ನನ್ನಂತಹ ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಜೊತೆಗೆ ಹೇಗೆ ಬರಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.ಕಳೆದ 40 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೃಷಿ ಮಾಡಿರುವ ನನಗೆ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಬಲಿಗರು ನನ್ನ ಸಾರ್ವಜನಿಕ ಜೀವನಕ್ಕೆ ತ್ಯಾಗಮಾಡಿದ್ದಾರೆ. ನಾಲ್ಕೂ ಜಿಲ್ಲೆಗಳಲ್ಲಿ ನನ್ನ ಬೆಂಬಲಿಗರ ಜೊತೆ ಸಭೆ ಮಾಡಿ ಅವರ ತೀರ್ಮಾನದಂತೆ ನನ್ನ ಮುಂದಿನ ರಾಜಕೀಯ ನಡೆ ನಿರ್ಧರಿಸುವುದಾಗು ಡಾ. ಕುಬೇರಪ್ಪ ಸ್ಪಷ್ಟಪಡಿಸಿದ್ದಾರೆ.