ಶರಣರ ಆಶಯದಂತೆ ಬದುಕಿದ ಡಾ. ಮುದ್ನಾಳ್‌ : ಖಾಸಾಮಠದ ಶ್ರೀ

| Published : Jul 29 2024, 12:47 AM IST

ಸಾರಾಂಶ

ಸಾರ್ವಜನಿಕ ಜೀವನದಲ್ಲಿ ಸರಳತೆ, ಸೌಜನ್ಯತೆಯಿಂದ ಇದ್ದು, ರಾಜಕಾರಣಿಯಾಗಿ ವೈದ್ಯರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಬಸವಾದಿ ಶರಣರ ಆಶಯದಂತೆ ಮಾದರಿಯ ಬದುಕು ನಡೆಸಿದರು ಎಂದು ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.

ಸಾರ್ವಜನಿಕ ಜೀವನದಲ್ಲಿ ಸರಳತೆ, ಸೌಜನ್ಯತೆಯಿಂದ ಇದ್ದು, ರಾಜಕಾರಣಿಯಾಗಿ ವೈದ್ಯರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಬಸವಾದಿ ಶರಣರ ಆಶಯದಂತೆ ಮಾದರಿಯ ಬದುಕು ನಡೆಸಿದರು ಎಂದು ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ ನುಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ನಗರ ವೀರಶೈವ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ಮಾಜಿ ಶಾಸಕ, ಖ್ಯಾತ ವೈದ್ಯರಾದ ದಿವಂಗತ ಡಾ. ವೀರ ಬಸವಂತರೆಡ್ಡಿ ಮುದ್ನಾಳ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಡಾ. ವೀರಬಸವಂತರೆಡ್ಡಿ ಮುದ್ನಾಳ ಅವರು ಯಾವತ್ತೂ ಮಿತಭಾಷಿಗಳಾಗಿ ಸರಳತೆ, ಸೌಜನ್ಯತೆಗೆ ಹೆಸರಾಗಿದ್ದರು. ಯಾದಗಿರಿ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಯಾದಗಿರಿ ಜಿಲ್ಲಾ ಕೇಂದ್ರವಾಗಲು ಶ್ರಮಿಸಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಆಗುವಂತೆ ಮಾಡಿದ್ದರು ಎಂದು ಸ್ಮರಿಸಿದರು.

ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಡಾ. ಮುದ್ನಾಳ್ ಆದರ್ಶ ಜೀವನ ನಡೆಸಿದರು. ಸಮಯಪ್ರಜ್ಞೆ ರೂಢಿಸಿಕೊಂಡಿದ್ದರು.ಸಿದ್ಧಹಸ್ತದ ವೈದ್ಯರಾಗಿ, ಶುದ್ಧಹಸ್ತದ ರಾಜಕಾರಣಿಯಾಗಿ, ಸರಳತೆಯ ಸಾಕಾರಮೂರ್ತಿಗಳಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿಕಟಪೂರ್ವ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರ್ ಮಾತನಾಡಿ, ಅವರ ಅಗಲಿಕೆಯಿಂದ ವೀರಶೈವ ಸಮಾಜವು ಹಿರಿಯ ಮುಖಂಡ, ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡು ಬಡವಾಗಿದೆ ಎಂದರು.

ಶರಣಪ್ಪಗೌಡ ಮಲ್ಹಾರ, ರಾಚಣಗೌಡ ಮುದ್ನಾಳ, ಚನ್ನಬಸವರೆಡ್ಡಿ ಮುದ್ನಾಳ, ಶರಣಗೌಡ ಮುದ್ನಾಳ, ಅಯ್ಯಣ್ಣ ಹುಂಡೇಕಾರ್, ಗುಂಡಪ್ಪ ಕಲಬುರಗಿ, ಡಾ. ವೀರೇಶ್ ಜಾಕಾ, ಅಮೋಘ್ ನರಸಣಿಗಿ, ಡಾ. ಕ್ಷಿತಿಜ್ ನರಸಣಿಗಿ, ಡಾ. ಸುಭಾಷ್ ಕರಣಿಗಿ, ರಾಜಶೇಖರ್ ಆನಂಪಲ್ಲಿ, ಶಾಂತಗೌಡ ಪಗಲಾಪೂರ, ರುದ್ರಗೌಡ ಪಾಟೀಲ್, ವಿಶ್ವನಾಥರೆಡ್ಡಿ ಜೋಳದಡಗಿ, ಬಸಣಗೌಡ ಕನ್ನೆಕೊಳೂರು, ಮಹಿಪಾಲರೆಡ್ಡಿ, ಶರಣು ಈಡ್ಲೂರು ಸೇರಿದಂತೆ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಡಾ. ಮುದ್ನಾಳರ ಅಭಿಮಾನಿಗಳು, ಒಡನಾಡಿಗಳು ಸೇರಿದಂತೆ ಅನೇಕರು ಇದ್ದರು.