ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಕಬರ್ ಅಲಿ ಅವರ ಆಸೆಯಂತೆ ಅವರ ನಿವಾಸದ ಮುಂಭಾಗದ ಉದ್ಯಾನ ಅಭಿವೃದ್ಧಿಪಡಿಸಿ, ಅವರ ಹಿತೈಷಿಗಳ ಆಸೆಯಂತೆ ಆ ಉದ್ಯಾನವನಕ್ಕೆ ಅಕಬರ್ ಅಲಿ ಉದ್ಯಾನ ಎಂದು ನಾಮಕರಣ ಮಾಡುವುದಾಗಿ ಶಾಸಕ ತನ್ವೀರ್ ಸೇಠ್ ಭರವಸೆ ನೀಡಿದರು.ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಸಾಪ ಮಹಿಳಾ ಘಟಕ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚುಟುಕು ರತ್ನ ಡಾ.ಎಂ. ಅಕಬರ್ ಅಲಿ ಅವರ ಶತಮಾನೋತ್ಸವ ಸವಿನೆನಪು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಚುಟುಕು ಸಾಹಿತ್ಯ ಇರುವ ಪುಸ್ತಕ ಖರೀದಿಸಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹಾಗಾಗಿ ಶಿಕ್ಷಣ ಸಚಿವರಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಶೀಘ್ರದಲ್ಲೇ ಪತ್ರ ಬರೆದು ಚುಟುಕು ಸಾಹಿತ್ಯ ಪುಸ್ತಕ ಖರೀದಿಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.ಅಕಬರ್ ಅಲಿ ಅವರ ಜನ್ಮ ಭೂಮಿ ಉತ್ತರ ಕರ್ನಾಟಕವಾದರೆ, ಕರ್ಮಭೂಮಿ ದಕ್ಷಿಣ ಕರ್ನಾಟಕ. ಅಕಬರ್ ಅಲಿ ಅವರು ರಾಜಕಾರಣಿಯಾಗಿ, ಸಾಹಿತಿಯಾಗಿ ಅರ್ಥಪೂರ್ಣ ಕೆಲಸ ಮಾಡಿದ್ದಾರೆ. ನಮಗೆಲ್ಲಾ ಅವರ ಬದುಕು ಆದರ್ಶ, ಅವುಗಳನ್ನು ನಾವು ಸ್ವೀಕರಿಸಿ ನಮ್ಮೊಳಗೂ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಇವುಗಳ ಕಾರಣದಿಂದ ಎಲ್ಲರನ್ನೂ ಒಂದಾಗಲೂ ಬಿಡುತ್ತಿಲ್ಲ. ಇದನ್ನೆಲ್ಲಾ ತಿದ್ದಬೇಕಾದರೆ, ಒಳ್ಳೆಯ ದಾರಿಯಲ್ಲಿ ಸಮಾಜ ನಡೆಸಬೇಕಾದರೆ ಚುಟುಕು, ಹಾಸ್ಯ ಸಾಹಿತ್ಯ ಬೇಕೆಬೇಕು. ಸ್ವಾರ್ಥವಿಲ್ಲದೆ ಸಮಾಜಮುಖಿ ಕೆಲಸ ಮಾಡುವ ಕವಿಗಳು, ಸಾಹಿತಿ ಪ್ರಸ್ತುತ ಎದುರಾಗಿರುವ ಸಮಸ್ಯೆಗೆ ತಮ್ಮ ಬರಹಗಳ ಮೂಲಕ ಪರಿಹಾರ ನೀಡಬೇಕು ಎಂದು ಅವರು ಆಶಿಸಿದರು.ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮಾತನಾಡಿ, ಇಂದು ಎಲ್ಲಿ ನೋಡಿದರೂ ಜಾತಿ, ಮತೀಯ ಸಂಘರ್ಷಗಳು ತಲೆ ಎತ್ತಿವೆ. ಕೋಮು ವೈಷಮ್ಯ ಕಾಣಸಿಗುತ್ತಿವೆ. ಅಕಬರ್ ಅಲಿಯವರ ಸಾಹಿತ್ಯ ಇವೆಲ್ಲ ಮತೀಯ ವೈಷಮ್ಯಕ್ಕೆ ಪರಿಹಾರ ಒದಗಿಸುತ್ತದೆ. ಅಲಿಯವರು ಸಮಗ್ರ ಕರ್ನಾಟಕದವರು, ಎಲ್ಲರಿಗೂ ಸಲ್ಲುವವರು. ಜಾತಿ ಮತಗಳನ್ನು ಮೀರಿದ ಸತ್ವಪೂರ್ಣ ಕವಿ ಎಂದು ಶ್ಲಾಘಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಪತ್ರಕರ್ತ ಚೀ.ಜ. ರಾಜೀವ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಡಾ. ರತ್ನ ಹಾಲಪ್ಪಗೌಡ, ಕೇಂದ್ರ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್ ಅರಸ್, ಅಕಬರ್ ಅಲಿ ಅವರ ಪುತ್ರ ಮಹಮದ್ ಉಲ್ಲಾ, ರಾಮನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಅಂಬರೀಶ್, ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಬಾನಂ ಲೋಕೇಶ್, ಕೊಡಗು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಎಂ. ಪೂವಯ್ಯ, ಚಾಮರಾಜನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಧುಸೂಧನ್, ಮರಿಮಲ್ಲಪ್ಪ ಕಾಲೇಜು ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ಇದ್ದರು.