ಮಂಗಳೂರು: ನಗರದ ಭಾರತೀಯ ವೈದ್ಯಕೀಯ ಸಂಘ ಮತ್ತು ಕೆನರಾ ಮೂಳೆ ಶಾಸ್ತ್ರ ತಜ್ಞರ ಸಂಘದ ಜಂಟಿ ಆಶ್ರಯದಲ್ಲಿ ನಗರದ ಖ್ಯಾತ ಹಿರಿಯ ಕೀಲು, ಮೂಳೆ ಶಾಸ್ತ್ರ ತಜ್ಞ ಡಾ.ಪ್ರೊ.ಎಂ.ಸುಧಾಕರ ಶೆಟ್ಟಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಗುರುವಾರ ನಗರದ ಐ.ಎಂ.ಎ. ಡಾ.ಎ.ವಿ. ರಾವ್ ಸಭಾಂಗಣದಲ್ಲಿ ನಡೆಯಿತು.

ನಗರದ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರೊ.ಸಂದೀಪ್ ರೈ ಮಾತನಾಡಿ, ದಿ.ಡಾ.ಎಂ.ಸುಧಾಕರ ಶೆಟ್ಟಿ ಅವರ ವಿಶೇಷ ಸೇವಾ ಮನೋಭಾವ ಗೌರವಾನ್ವಿತ ವ್ಯಕ್ತಿತ್ವ ಕರ್ತವ್ಯ ನಿಷ್ಠೆ ಸಮಯ ಪ್ರಜ್ಞೆ, ಶಿಸ್ತು ಬದ್ಧತೆ, ವಿದ್ಯಾರ್ಥಿಗಳಿಗೆ ಧಾರೆ ಎರೆದ ಮೌಲ್ಯಧಾರಿತ ಶಿಕ್ಷಣದ ಮೂಲಕ ರೋಗಿಗಳ ಮತ್ತು ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು ಎಂದರು. ಭಾರತೀಯ ವೈದಕೀಯ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಕಾಮತ್‌ ಅವರು ದಿ.ಡಾ. ಶೆಟ್ಟಿ ಸಲ್ಲಿಸಿದ ನಿಸ್ವಾರ್ಥ ಮತ್ತುಪ್ರಾಮಾಣಿಕ ಸುಧೀರ್ಘ ವೈದ್ಯಕೀಯ ಮತ್ತು ಶೈಕ್ಷಣಿಕ ಸೇವೆ ಮತ್ತು ಸಾಧನೆ ಮತ್ತು ಪಡೆದ ಪ್ರಶಸ್ತಿಗಳ ಬಗ್ಗೆ ಮಾಹಿತಿ ನೀಡಿದರು.ಮಂಗಳೂರು ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಶಸ್ತ್ರ ಚಿಕಿತ್ಸಾ ತಜ್ಞ ಡಾ.ರಾಜೇಶ್ ಬಲ್ಲಾಳ್ ಸಂಪನ್ಮೂಲ ವ್ಯಕ್ತಿಯಾಗಿಭಾಗವಹಿಸಿ, ‘ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಇತ್ತೀಚಿಗಿನ ಬೆಳವಣಿಗೆ’ ದತ್ತಿ ಉಪನ್ಯಾಸ ನೀಡಿದರು. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಸದಾನಂದ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಂದೀಪ್ ರೈ, ಭಾರತೀಯ ವೈದಕೀಯ ಸಂಘದ ಮಾಜಿ ಅಧ್ಯಕ್ಷ ಕೆ.ಆರ್.ಕಾಮತ್‌, ಸಂಘದ ಕೋಶಾಧಿಕಾರಿ ಡಾ.ಜುಲಿಯಾನ ಸಲ್ದಾನ, ಕೆನರಾ ಮೂಳೆ ತಜ್ಞರ ಸಂಘದ ಉಪಾಧ್ಯಕ್ಷ ಡಾ.ವಿಕ್ರಂ ಭಟ್ ಇದ್ದರು.ಸಂಘದ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿ, ಪ್ರಕಾಶ್ ಹರಿಶ್ಚಂದ್ರ ವಂದಿಸಿದರು. ಸಂಸ್ಥೆಯ ಚುನಾಯಿತ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ನಿರೂಪಿಸಿದರು.