ಈ ನಾಡಿನಲ್ಲಿ ಬಸವ ತತ್ವವನ್ನು ಉಸಿರು ಎಂದು ಕಾರ್ಯ ಮಾಡಿದವರು ಇಳಕಲ್ಲಿನ ಡಾ.ಮಹಾಂತ ಶ್ರೀಗಳು ಎಂದು ಬೀದರ ವಚನ ಟಿವಿ ನಿರ್ದೇಶಕ ಸಿದ್ದು ಯಾಪಲಪರ್ವಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಈ ನಾಡಿನಲ್ಲಿ ಬಸವ ತತ್ವವನ್ನು ಉಸಿರು ಎಂದು ಕಾರ್ಯ ಮಾಡಿದವರು ಇಳಕಲ್ಲಿನ ಡಾ.ಮಹಾಂತ ಶ್ರೀಗಳು ಎಂದು ಬೀದರ ವಚನ ಟಿವಿ ನಿರ್ದೇಶಕ ಸಿದ್ದು ಯಾಪಲಪರ್ವಿ ಹೇಳಿದರು.ಇಳಕಲ್ಲಿನ ವಿಜಯ ಮಹಾಂತೇಶ್ವರ ಶ್ರೀಮಠದ ಆವರಣದಲ್ಲಿ ವಿಜಯ ಮಹಾಂತೇಶ್ವರ ಶ್ರೀಮಠ ಹಾಗೂ ಬಸವ ಕೇಂದ್ರದವರು ಆಯೋಜಿಸಿದ್ದ ಶರಣ ಶಿದ್ಧಾಂತ ವಿದ್ಯಾಪೀಠದ ೫೫ನೇ ಶಿವಾನುಭವ ತರಬೇತಿ ಶಿಬಿರ ಹಾಗೂ ಡಾ.ಮಹಾಂತಪ್ಪನವರ ೮ನೇ ಶರಣೋತ್ಸವ ಸಮಾರಂಭದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಡಾ.ಮಹಾಂತಪ್ಪನವರು ಬಸವ ತತ್ವಗಳ ಪಾಲನೆಗೆ ಜೀವನವನ್ನೇ ಮೀಸಲಾಗಿಟ್ಟಿದ್ದರು. ಮಾತೃಸ್ವರೂಪಿಗಳಾದ ಡಾ.ಮಹಾಂತಪ್ಪನವರು ಜಗತ್ತಿನ ೪೮ ದೇಶಗಳಲ್ಲಿ ಬಸವ ತತ್ವ ಪ್ರಸಾರ ಮಾಡಿದ ಮಹಾನ್ ಶರಣರು. ಇಂಥ ಮಹಾನ್ ಶರಣರು ಚಿತ್ತರಗಿ ಇಳಕಲ್ಲ ಶ್ರೀಮಠದ ೧೯ನೇ ಪಿಠಾಧಿಪತಿಗಳಾಗಿ ಆಗಮಿಸಿ ೪೮ ವರ್ಷ ಶ್ರೀಮಠದ ೬೮ ಶಾಖಾ ಮಠಗಳ ಅಭಿವೃದ್ಧಿ ಮಾಡಿದ್ದಲ್ಲದೆ ಸರ್ವ ಧರ್ಮಗಳ ಸಮಾಜ ಭಾಂದವರನ್ನು ಪ್ರೀತಿಯಿಂದ ಕಂಡರು.

ಬಸವಕಲ್ಯಾಣದಲ್ಲಿ ನಡೆದ ಸಮಾರಂಭದಲ್ಲಿ ಒಬ್ಬರು ಜಂಗಮರನ್ನಲ್ಲದೆ ಬೇರೆ ಜಾತಿಯ ವಟುಗಳನ್ನು ಮಠಗಳ ಪೀಠಾಧಿಪತಿಗಳನ್ನಾಗಿ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ತಮ್ಮ ನಾಲ್ಕು ಮಠಗಳಿಗೆ ಬೇರೆ ಜಾತಿಯ ವಟುಗಳನ್ನು ಸ್ವಾಮಿಗಳನ್ನಾಗಿ ಮಾಡಿದರು. ಜಗತ್ತಿನಲ್ಲಿಯೇ ಜನರಿಂದ ಧನ, ಕನಕ ಕೇಳುವ ಸ್ವಾಮಿಗಳನ್ನು ನಾವು ನೊಡಿದ್ದೇವೆ. ಆದರೆ ಡಾ.ಮಹಾಂತ ಶ್ರೀಗಳು ಸಮಾಜ ಸುಧಾರಣೆಗಾಗಿ ಜೋಳಿಗೆ ಹಿಡಿದು ಜನರಲ್ಲಿರುವ ದುಶ್ವಟಗಳ ಭಿಕ್ಷೆ ಬೇಡಿದ ಜಗತ್ತಿನ ಏಕೈಕ ಶ್ರೀಗಳು. ಈ ಕಾರ್ಯಗಳಿಂದ ಲಕ್ಷಾಂತರ ಜನರು ದುಶ್ವಟಗಳನ್ನು ಶ್ರೀಗಳ ಜೋಳಿಗೆಗೆ ಹಾಕಿ ಸಂತಸದ ಜೀವನ ನಡೆಸುತ್ತಿದ್ದಾರೆ. ಇವರ ತತ್ವಾದರ್ಶಗಳನ್ನು ಇಂದಿನ ಡಾ.ಗುರುಮಹಾಂತ ಶ್ರೀಗಳು ಪಾಲನೆ ಮಾಡಿ ಈ ಮಠವನ್ನು ನಾಡಿನ ಶ್ರೇಷ್ಠ ಮಠ ಮಾಡಿದ್ದಾರೆ ಎಂದು ತಿಳಿಸಿದರು.

ಬಾಲ್ಕಿಯ ಡಾ.ಬಸವಲಿಂಗ ಶ್ರಿಗಳು, ಗುರುಬಸವ ಪಟ್ಟದ ದೇವರು, ಡಾ.ಗುರುಮಹಾಂತ ಶ್ರೀಗಳು, ಅಮಿನಗಡದ ಶಂಕರರಾಜೇಂದ್ರ ಶ್ರೀಗಳು, ತಂಗಡಗಿಯ ಅನ್ನದಾನಿ ಅಪ್ಪಣ್ಣ ಶ್ರೀಗಳು, ಮರೆಗುದ್ದಿಯ ಸಿದ್ದರಾಮ ಶ್ರೀಗಳು ಹಾಗೂ ಮಹಾಂತಮ್ಮ ತಾಯಿಯವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ನಾಡಿನ ಖ್ಯಾತ ಅನುಭವಿಗಳಾದ ಸಿದ್ದಣ್ಣ ಲಂಗೋಟಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಂಗಣ್ಣ ಗದ್ದಿ ನಿರೂಪಿಸಿದರು.