ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ಡಾ। ಸಿ.ಎನ್.ಮಂಜುನಾಥ್ ಅವರಿಗೆ ರಾಜಕೀಯ ಬರುವುದಿಲ್ಲ. ಬಿಜೆಪಿ ಅವರನ್ನು ಚುನಾವಣೆಗೆ ನಿಲ್ಲಿಸುವ ಬದಲು ರಾಜ್ಯಸಭೆಗೆ ಆಯ್ಕೆ ಮಾಡಿ ಉನ್ನತ ಸ್ಥಾನ ನೀಡಬಹುದಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಜುನಾಥ್ ಅವರು, ಅವರು ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಪಡೆದಿದ್ದಾರೆ, ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಬೆಳೆಸಿದ್ದಾರೆ. ಈ ವಿಷಯದಲ್ಲಿ ಎರಡು ಮಾತಿಲ್ಲ. ಆದರೆ ಜನರು ಮತ ಹಾಕಲು ಬೇರೆ ಬೇರೆ ಕಾರಣಗಳು ಇರುತ್ತದೆ. ಹಾಲಿ ಸಂಸದರಾಗಿರುವ ಡಿ.ಕೆ.ಸುರೇಶ್ ಅವರು ರಾಜ್ಯದ 28 ಸಂಸದರ ಪೈಕಿ ಅತ್ಯಂತ ಹೆಚ್ಚು ಕೆಲಸವನ್ನು ಕ್ಷೇತ್ರದಲ್ಲಿ ಮಾಡಿದ್ದಾರೆ ಎಂದರು.
ಡಾ। ಮಂಜುನಾಥ್ ಅವರ ಕುರಿತು ವೈಯಕ್ತಿಕ ಗೌರವ ಇದ್ದೇ ಇರುತ್ತದೆ. ಆದರೆ ಚುನಾವಣೆ ವೇಳೆ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸೌಮ್ಯಾರೆಡ್ಡಿ ಸ್ಪರ್ಧೆಗೆ ಒಲವು:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸೌಮ್ಯಾರೆಡ್ಡಿ ಅವರನ್ನು ಕಣಕ್ಕಿಳಿಸಬೇಕೆಂದು ಆರು ವಿಧಾನಸಭಾ ಕ್ಷೇತ್ರಗಳ ಮುಖಂಡರು ಮನವಿ ಮಾಡಿದ್ದಾರೆ. ವಿಜಯನಗರ ಹಾಗೂ ಗೋವಿಂದರಾಜ ನಗರ ಕ್ಷೇತ್ರದ ಮುಖಂಡರ ಜೊತೆ ಚರ್ಚಿಸಬೇಕಾಗಿದೆ. ಸೌಮ್ಯಾರೆಡ್ಡಿ ಅವರನ್ನು ಕಣಕ್ಕಿಳಿಸಬೇಕೆಂದು ಸುರ್ಜೇವಾಲ ಅವರು ಮನವಿ ಮಾಡಿದಾಗ, ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಕುರಿತಂತೆ ತಕರಾರು ಅರ್ಜಿ ಕೋರ್ಟ್‌ನಲ್ಲಿದೆ. ನಮ್ಮ ಪರವಾಗಿ ನ್ಯಾಯ ಸಿಗುವ ಭರವಸೆ ಇದೆ. ಹಾಗಾಗಿ ಚುನಾವಣೆಗೆ ಸೌಮ್ಯಾರೆಡ್ಡಿ ಅವರನ್ನು ಕಣಕ್ಕಿಳಿಸುವುದು ಬೇಡ ಎಂದು ಹೇಳಿದ್ದೆ. ಆದರೆ ಶಾಸಕ ಸ್ಥಾನಕ್ಕಿಂತ ಸಂಸದ ಸ್ಥಾನ ದೊಡ್ಡದು ಎಂದಿದ್ದಾರೆ. ಸೌಮ್ಯಾರೆಡ್ಡಿ ಅವರು ಕಣಕ್ಕೆ ಇಳಿಯಲು ಸದಾ ಸಿದ್ದರಾಗಿದ್ದಾರೆ. ಅಧಿಕೃತವಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಿಸಬೇಕಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.‘ವಿ.ಪಕ್ಷ ನಾಯಕರಾಗಲು ಉಳಿದವರು ಅಸಮರ್ಥರಾ’
ರಾಜ್ಯ ಸರ್ಕಾರದ ವಕ್ತಾರರನ್ನಾಗಿ ಐವರು ಸಚಿವರನ್ನು ನೇಮಕ ಮಾಡಿದೆ, ಉಳಿದವರು ಅಸಮರ್ಥರಾ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಎಲ್ಲರೂ ವಕ್ತಾರರಾರಾಗಲು ಸಾಧ್ಯವಿಲ್ಲ. ಆರ್. ಅಶೋಕ್ ಒಬ್ಬರೇ ಪ್ರತಿಪಕ್ಷದ ನಾಯಕರಾಗಿದ್ದಾರೆ. ಹಾಗಾದರೆ ಉಳಿದವರು ಅಸಮರ್ಥರಾ ಎಂದು ಕೇಳಬೇಕಾಗುತ್ತದೆ ಎಂದರು.