ಸಾರಾಂಶ
ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ರೈತರಿಗೆ ಸಂಬಂಧಿಸಿದ 65,000 ಕೋಟಿ ರೂ. ಸಾಲ ಮನ್ನಾ ಮಾಡಿ ಕೃಷಿ ಕ್ಷೇತ್ರದ ಸುಧಾರಣೆ ಮಾಡಿದರು. 2005ರಲ್ಲಿ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ದಿತ ತೆರಿಗೆ ತಂದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸಿದರು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಗಳಲ್ಲಿ ಭಾರತ ಗುರುತಿಸಲು ಡಾ.ಮನಮೋಹನ್ ಸಿಂಗ್ ಅವರು ಕಾರಣ. ಅವರ ದೂರದೃಷ್ಟಿಯ ಯೋಜನೆಗಳು, ಸಮರ್ಥ ನಾಯಕತ್ವ ವಿಶ್ವಕ್ಕೆ ಮಾದರಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿದೇಶಿ ನೇರ ಬಂಡವಾಳ ನೀತಿ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿ ದೇಶದ ಬಡವರು, ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವಲ್ಲಿ ಯಶಸ್ವಿಯಾದರು. ಅವರ ಕಾಲಾವಧಿಯಲ್ಲಿ ದೇಶದ ಬ್ಯಾಂಕ್‌ಗಳು ದಿವಾಳಿಯಾಗದೇ ಉಳಿದಿರುವುದು ಅವರ ದೂರದೃಷ್ಟಿಯೇ ಕಾರಣ ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ರೈತರಿಗೆ ಸಂಬಂಧಿಸಿದ 65,000 ಕೋಟಿ ರೂ. ಸಾಲ ಮನ್ನಾ ಮಾಡಿ ಕೃಷಿ ಕ್ಷೇತ್ರದ ಸುಧಾರಣೆ ಮಾಡಿದರು. 2005ರಲ್ಲಿ ಸಂಕೀರ್ಣ ಮಾರಾಟ ತೆರಿಗೆಯ ಬದಲು ಮೌಲ್ಯ ವರ್ದಿತ ತೆರಿಗೆ ತಂದು ದೇಶದ ಅರ್ಥ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೊ, ಲೋಕಸಭಾ ಅಭ್ಯರ್ಥಿ ಪದ್ಮರಾಜ್.ಆರ್., ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಗುರುನಾಮ್ ಸಿಂಗ್ ವಿಕ್ಕಿ ನುಡಿನಮನ ಸಲ್ಲಿಸಿದರು.ಕೆ.ಕೆ.ಶಾಹುಲ್ ಹಮೀದ್ ಅವರು ಮನಮೋಹನ್ ಸಿಂಗ್ ಕುರಿತ ಕವನ ವಾಚಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು. ನಝೀರ್ ಬಜಾಲ್ ನಿರೂಪಿಸಿದರು.