ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಶಾಸಕರ ಅನುದಾನದಲ್ಲಿ ನವೀಕರಣಗೊಂಡ ಸಭಾಂಗಣವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.

ಮಡಿಕೇರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಶಾಸಕರ ಅನುದಾನದಲ್ಲಿ ನವೀಕರಣಗೊಂಡ ಸಭಾಂಗಣವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಇದೇ ಸಂದರ್ಭ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್, ಗೈಡ್ಸ್ ಭವನದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆ, ವಿಶ್ವ ಚಿಂತನಾ, ವಿಶ್ವ ಭ್ರಾತೃತ್ವ ದಿನಾಚರಣೆ ಹಾಗೂ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಸಂಸ್ಥೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.ನಾನು ಬಾಲಕನಾಗಿದ್ದಾಗ ಕಬ್ ಆಗಿದ್ದು, ಈ ಸಂಸ್ಥೆಯು ಶಿಸ್ತು ಮತ್ತು ಪ್ರಮಾಣಿಕತೆಗೆ ಮಾದರಿಯಾದ ಸಂಸ್ಥೆಯಾಗಿದೆ. ಸೇವಾ ಮನೋಭಾವನೆ ಇದರ ಆದರ್ಶವಾಗಿದ್ದು, 2018ರಲ್ಲಿ ನಡೆದ ಪ್ರಕೃತಿ ವಿಕೋಪದ ಸಂದರ್ಭ ಕೂಡ ಈ ಸಂಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಸೇವಾ ಮನೋಭಾವ ಹೊಂದಿರುವ ಈ ಸಂಸ್ಥೆಯ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಎಂದರು. ಜಿಲ್ಲಾ ಉಪವಿಭಾಗಧಿಕಾರಿ ನಿತಿನ್ ಚೆಕ್ಕಿ ಅವರು ಜಿಲ್ಲಾ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿ ನನಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೇಲೆ ತುಂಬಾ ಅಭಿಮಾನವಿದೆ, ನಾನು ಕೂಡ ಸ್ಕೌಟ್ ಆಗಿದ್ದೆ, ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪತ್ರ ಪಡೆಯುತ್ತಿರುವ ತಾವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಂಯೋಜಕ ಕೃಷ್ಣಪ್ಪ ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಪ್ರಮಾಣಿಕತೆ ಬೆಳೆಸುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಗುಣ ನಡತೆ ಬೆಳೆಸಿಕೊಂಡು ಉತ್ತಮ ನಾಗರೀಕರಾಗಿ ಬೆಳೆಯಲು ಈ ಸಂಸ್ಥೆ ದಾರಿದೀಪವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಅವರು ಇಂಗ್ಲೆಂಡ್ ನಲ್ಲಿ 1907 ರಲ್ಲಿ ರಾಬರ್ಟ್ ಬೇಡನ್ ಪೊವೆಲ್ ಅವರಿಂದ 20 ಮಕ್ಕಳೊಂದಿಗೆ ಪ್ರಾಯೋಗಿಕವಾಗಿ ಪ್ರಾರಂಭಗೊಂಡ ಸ್ಕೌಟ್ಸ್ ಸಂಸ್ಥೆಯು ಇಂದು 216 ದೇಶಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಫೆ.22 ರಾಬರ್ಟ್ ಬೇಡನ್ ಪೊವೆಲ್ ಅವರ ಜನ್ಮದಿನವಾಗಿದ್ದು, ಅವರ ಮಾರ್ಗದರ್ಶನ ಇಂದಿಗೂ ಮಾದರಿಯಾಗಿದೆ ಎಂದರು.ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ 5 ಲಕ್ಷ ರು.ಗಳನ್ನು ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಸಕ ಡಾ.ಮಂತರ್ ಗೌಡ ಅವರನ್ನು ಕೆ.ಟಿ.ಬೇಬಿ ಮ್ಯಾಥ್ಯು ಗೌರವಿಸಿದರು. ಸುಮಾರು 28 ವರ್ಷಗಳ ಕಾಲ ಗೈಡ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ಅಮ್ಮತ್ತಿಯ ಗುಡ್ ಶಫರ್ಡ್ ಶಾಲೆಯ ನಿವೃತ್ತ ಶಿಕ್ಷಕಿ ಮೇರಿ ಅವರನ್ನು ಸನ್ಮಾನಿಸಲಾಯಿತು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪಕರಾದ ರಾಬರ್ಟ್ ಬೇಡನ್ ಪೊವೆಲ್ ಹಾಗೂ ಸೈಂಟ್ ಆಲೀವ್ ಕೇರ್ ಸೋಮ್ಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಬಿ.ವೈ, ಪ್ರಾಧಿಕಾರದ ಸದಸ್ಯ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ., ಜಿಲ್ಲಾ ಗೈಡ್ ಆಯುಕ್ತ ರಾಣಿ ಮಾಚಯ್ಯ, ಜಿಲ್ಲಾ ಗೈಡ್ ತರಬೇತಿ ಆಯುಕ್ತರಾದ ಮೈಥಿಲಿ ರಾವ್, ಗೈಡ್ಸ್ ಸಹಾಯಕ ಆಯುಕ್ತರಾದ ಸುಲೋಚನ ಸಿ.ಎಂ, ಸಹಾಯಕ ಸ್ಕೌಟ್ಸ್ ಆಯುಕ್ತ ಕೆ.ಬಿ.ಗಣೇಶ್, ವಿರಾಜಪೇಟೆ ಸ್ಥಳೀಯ ಸಂಸ್ಥೆಯ ಸಹ ಕಾರ್ಯದರ್ಶಿ ಜಾಜಿ, ಜಿಲ್ಲಾ ಸಹಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಕ್ಯಾಪ್ಟನ್ ಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವಸಂತಿ ಸ್ವಾಗತಿಸಿ ವಂದಿಸಿದರು. ಜಿಲ್ಲಾ ತರಬೇತಿ ಆಯುಕ್ತ ಕೆ.ಯು.ರಂಜಿತ್ ನಿರೂಪಿಸಿದರು.