ನಾಳೆಯಿಂದ ಡಾ.ಮುರುಘರಾಜೇಂದ್ರ ಶ್ರೀ ಗುರುವಂದನೆ

| Published : Nov 29 2024, 01:00 AM IST

ಸಾರಾಂಶ

ರಾಯಬಾಗ ತಾಲೂಕಿನ ಮುಗಳಖೋಡ ಜಿಡಗಾ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿಯವರ 40ನೇ ಗುರುವಂದನ ಮಹೋತ್ಸವ ಸಮಾರಂಭ ಮುಗಳಖೋಡದ ಶ್ರೀಮಠದಲ್ಲಿ ಡಿ.2 ರಂದು ಹಮ್ಮಿಕೊಳ್ಳಲಾಗಿದೆ ಎಂದು ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಯಬಾಗ ತಾಲೂಕಿನ ಮುಗಳಖೋಡ ಜಿಡಗಾ ಮಠದ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿಯವರ 40ನೇ ಗುರುವಂದನ ಮಹೋತ್ಸವ ಸಮಾರಂಭ ಮುಗಳಖೋಡದ ಶ್ರೀಮಠದಲ್ಲಿ ಡಿ.2 ರಂದು ಹಮ್ಮಿಕೊಳ್ಳಲಾಗಿದೆ ಎಂದು ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳ ಗುರುವಂದನೆ ಮಹೋತ್ಸವದ ಹಿನ್ನೆಲೆಯಲ್ಲಿ ನ.21 ರಿಂದ 29 ರವರೆಗೆ ಪ್ರವಚನ, ಸತ್ಸಂಗ, ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗುತ್ತಿವೆ. ಶ್ರೀಗಳ ಸಂಕಲ್ಪದಂತೆ ಜೈ ಜವಾನ್‌, ಜೈ ಕಿಸಾನ್‌, ಜೈ ವಿಜ್ಞಾನ, ಜೈ ಶಿಕ್ಷಣ ಎಂಬ ಘೋಷವಾಕ್ಯದಡಿಯಲ್ಲಿ ನ.30 ರಿಂದ ಡಿ.2 ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ರೈತರ ಅನುಕೂಲಕ್ಕಾಗಿ ಕೃಷಿ ಮೇಳ ನಡೆಯಲಿದೆ ಎಂದರು.ಜೈ ಜವಾನ ಘೋಷವಾಕ್ಯದಡಿ ನ.30 ರಂದು ಮಧ್ಯಾಹ್ನ 12.30ರಿಂದ ಸಂಜೆ 5 ಗಂಟೆಯವರೆಗೆ ದೇಶದ ಬೆನ್ನೆಲುಬು ರೈತರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಒಂದೇ ವೇದಿಕೆಯಲ್ಲಿ 30 ಸಾವಿರ ರೈತರನ್ನು ಒಂದುಗೂಡಿಸಿ ತ್ರಿವರ್ಣ ಗಾಂಧಿ ಟೋಪಿ ಧಾರಣ ಮಾಡಿಸಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸಲ್ಲಿಸುವ ನೇಗಿಲಯೋಗಿ ಮಹೋತ್ಸವ ಎಂಬ ವಿಶೇಷ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ 1 ಗಂಟೆಯಿಂದ 3 ಗಂಟೆಯವರೆ ಸುನೀತಾ ಜೋಗಿ ಮತ್ತು ದಿಯಾ ಹೆಗಡೆ ಅವರಿಂದ ಸಂಗೀತ ಮನರಂಜನೆ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.ಜೈ ವಿಜ್ಞಾನ ಘೋಷವಾಕ್ಯದಡಿಯಲ್ಲಿ ಪ್ರತಿ ವರ್ಷ ಗುರುವಂದನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ರಾಷ್ಟ್ರಮಟ್ಟದ ಸಿದ್ಧಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡುತ್ತ ಬಂದಿದ್ದೇವೆ‌‌. ಈ ಪ್ರಶಸ್ತಿ ₹1 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಈ ವರ್ಷದ ಪ್ರಶಸ್ತಿಯನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಧನೆ ಮಾಡಿರುವ ಇಸ್ರೋ ಸಂಸ್ಥೆಗೆ ಪ್ರದಾನ ಮಾಡಲಾಗುವುದು ಎಂದರು.ಡಿ.2ರಂದು ಸಂಜೆ 5 ಗಂಟೆಯಿಂದ ಕಾಶಿ ಕ್ಷೇತ್ರದ ಶ್ರೀ ವಿಶ್ವನಾಥನಿಗೆ ತನಾರತಿ ಮಾಡುವ ಬಳಗದಿಂದ ಸದ್ಗುರು ಯಲ್ಲಾಲಿಂಗ ಮಹಾಪ್ರಭುಗಳವರಿಗೆ ತನಾರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಖ್ಯಾತ‌ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಮತ್ತು ತಂಡದಿಂದ ಸ್ವರ ಸಂಗೀತ ಸಂಭ್ರಮ‌ ಜರುಗಲಿದೆ. ಬಳಿಕ ವಿವಿಧ ಕಲಾ ತಂಡಗಳಿಂದ ಭರತ ನೃತ್ಯ, ಚಂಡಿ ವಾದ್ಯ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳಿಂದ ಸುಮಾರು 1 ಲಕ್ಷ ಜನರು ಈ ಮಹೋತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಸವರಾಜ ಜೋಪಾಟೆ, ಸಿ.ಎ.ನಾಡಗೌಡ ಮತ್ತಿತರರು ಉಪಸ್ಥಿತರಿದ್ದರು.

ಡಿ.1ರಂದು ಬಡ ಮಕ್ಕಳ ಶಿಕ್ಷಣಕ್ಕಾಗಿ 400 ಭಕ್ತರು ನಾಣ್ಯಗಳಿಂದ ಶ್ರೀಗಳ ತುಲಾಭಾರ ನಡೆಸುವರು. ತುಲಾಭಾರದಿಂದ ಬಂದ ಹಣವನ್ನು ಶ್ರೀಗಳು ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಲು ಸಂಕಲ್ಪ ಮಾಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನೇಗಿಲಯೋಗಿ ಮಹೋತ್ಸವ ನಡೆಯಲಿದ್ದು, ವಿವಿಧ ಮಠಾಧೀಶರು, ಸಚಿವರು, ರಾಜಕೀಯ ಧುರೀಣರು ಪಾಲ್ಗೊಳ್ಳುವರು.

-ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ.