ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪಾಂಡಿತ್ಯದ ಪರಂಪರೆ ಸೊರಗುತ್ತಿದೆ ಎನ್ನುವ ಸಂದರ್ಭದಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಲೇಖಕರು ಕೃಷಿ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ಪ್ರಶಂಸೆ ವ್ಯಕ್ತಪಡಿಸಿದರು.ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಮಾನಸ ಗಂಗೋತ್ರಿ ಬಿಎಂಶ್ರೀ ಸಭಾಂಗಣದಲ್ಲಿ ಡಾ.ಎನ್.ಎಂ. ಗಿರಿಜಾಪತಿ ಅವರ ಷಡಕ್ಷರ ಕವಿಯ ಶಬರ ಶಂಕರವಿಳಾಸಂ ವ್ಯಾಖ್ಯಾನ ಮತ್ತು ರಾಮಧಾನ್ಯ ನಾಟಕ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಇಂದು ಪಾಂಡಿತ್ಯ ಸೊರಗುತ್ತಿದೆ ಎಂಬುದು ಸಾಮಾನ್ಯ ಅಭಿಪ್ರಾಯ. ಇದು ಸಂಪೂರ್ಣ ನಿಜವೂ ಅಲ್ಲ, ಸುಳ್ಳೂ ಅಲ್ಲ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗದ್ಯ ಅನುವಾದವನ್ನು ಹೊರ ತಂದಿತ್ತು. ಆ ಬಳಿಕ ಡಾ.ಎಲ್. ಬಸವರಾಜು ಅವರು ಸಾಮಾನ್ಯ ಜನರಿಗೆ ಪಂಪನನ್ನು ತಲುಪಿಸಲು ಭಿನ್ನ ದಾರಿ ಹಿಡಿದರು. ಆದಿ ಪಂಪ, ಆದಿ ಪುರಾಣ ಸೇರಿದಂತೆ ಪ್ರಾಚೀನ ಸಾಹಿತ್ಯವನ್ನು ಸರಳೀಕರಣ ಗೊಳಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಇದನ್ನು ಸಂಪ್ರದಾಯದ ಲೇಖಕರು ಖಂಡಿಸಿದರು. ಆದರೂ ತಲೆಕೆಡಿಸಿಕೊಳ್ಳದೆ ಬಸವರಾಜು ಅವರು ಮನಸ್ಸು ಕಟ್ಟುವ ಕೆಲಸ ಮಾಡಿದ್ದಾಗಿ ಅವರು ಹೇಳಿದರು.ಕನ್ನಡ ಕಷ್ಟ ಎನ್ನುವುದು ಬಾಲಿಶಾ ತನ. ಈ ರೀತಿ ಹೇಳಿಕೆ ಕೊಡುವುದು ಅಪಾಯ.. ಸ್ವತಃ ಕನ್ನಡಿಗರಿಗೆ ಕನ್ನಡ ಕಷ್ಟ ಅಂದರೆ ಮತ್ತೆ ಅನ್ಯಭಾಷಿಕರಿಗೆ ಸುಲಭವೇ? ಎಂದು ಅವರು ಪ್ರಶ್ನಿಸಿದರು.ಡಾ.ಎನ್.ಎಂ. ಗಿರಿಜಾಪತಿ ಅವರು ಸಾವ್ಯ ಸಾಚಿ ಇದ್ದಂತೆ. ಅವರು ಪ್ರಾಚೀನ, ಆಧುನಿಕ ಕನ್ನಡ ಎರಡರಲ್ಲೂ ಕೃಷಿ ಮಾಡಬಲ್ಲರು. ಸದ್ದು ಗದ್ದಲವಿಲ್ಲದೆ 70 ಕೃತಿಗಳನ್ನು ರಚಿಸಿದ್ದಾರೆ. ಇದು ದೊಡ್ಡ ಸಾಧನೆ. ಕನ್ನಡ ಕಷ್ಟ ಎನ್ನುವವರು ಗಿರಿಜಾಪತಿ ಅವರನ್ನು ನೋಡಬೇಕು ಎಂದರು.ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಬಿ.ವಿ. ವಸಂತಕುಮಾರ್ ಹಾಗೂ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಕೃತಿಗಳ ಕುರಿತು ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಕೆ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ.ಎನ್.ಎಂ. ಗಿರಿಜಾಪತಿ ಮೊದಲಾದವರು ಇದ್ದರು.