ಸಾರಾಂಶ
ಸಾಗರ: ಮಂಗಳೂರಿನಲ್ಲಿ ಭಾನುವಾರ ನಿಧನರಾದ ಹಿರಿಯ ಸಾಹಿತಿ ಡಾ.ನಾ.ಡಿಸೋಜ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ಪಟ್ಟಣದ ನೆಹರೂ ನಗರದಲ್ಲಿರುವ ಅವರ ಸ್ವಗೃಹಕ್ಕೆ ತರಲಾಯಿತು.
ಸಾಗರ: ಮಂಗಳೂರಿನಲ್ಲಿ ಭಾನುವಾರ ನಿಧನರಾದ ಹಿರಿಯ ಸಾಹಿತಿ ಡಾ.ನಾ.ಡಿಸೋಜ ಅವರ ಪಾರ್ಥಿವ ಶರೀರವನ್ನು ಸೋಮವಾರ ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ಪಟ್ಟಣದ ನೆಹರೂ ನಗರದಲ್ಲಿರುವ ಅವರ ಸ್ವಗೃಹಕ್ಕೆ ತರಲಾಯಿತು.
ತಾಲೂಕು ಆಡಳಿತದ ಪರವಾಗಿ ಉಪವಿಭಾಗಾಧಿಕಾರಿ ಯತೀಶ್.ಆರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ಇನ್ನಿತರ ಅಧಿಕಾರಿಗಳು ಅಂತಿಮ ದರ್ಶನ ಪಡೆದು, ತಾಲೂಕು ಆಡಳಿತದಿಂದ ಗೌರವ ಸಲ್ಲಿಸಿದರು.ಮಂಗಳವಾರ ಪಟ್ಟಣದ ಗಾಂಧಿ ಮೈದಾನದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ೪ ಗಂಟೆಯ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ.
ಶಾಸಕ ಗೋಪಾಲಕೃಷ್ಣ ಬೇಳೂರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಬೇರೆಬೇರೆ ಸಂಘಸಂಸ್ಥೆ ಪ್ರಮುಖರು, ಸಾರ್ವಜನಿಕರು, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ನಾ.ಡಿಸೋಜ ಅವರ ಅಂತಿಮ ದರ್ಶನ ಪಡೆದರು.ನಾ.ಡಿಸೋಜ ನಿಧನ ದಿಗ್ಭ್ರಮೆ ಉಂಟುಮಾಡಿದೆ:ನಾ.ಡಿಸೋಜ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮಾತನಾಡಿದ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಸಾಹಿತಿ ನಾ.ಡಿಸೋಜ ನಿಧನ ಎಲ್ಲರಿಗೂ ದಿಗ್ಭ್ರಮೆ ಉಂಟುಮಾಡಿದೆ. ಇವರ ನಿಧನದಿಂದ ರಾಜ್ಯವು ಓರ್ವ ಶ್ರೇಷ್ಠಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದರು.
ಸಾಗರದ ಕೀರ್ತಿಯನ್ನು ಜಗದಗಲ ಪ್ರಸರಿಸಿದ ಹೆಗ್ಗಳಿಕೆ ನಾ.ಡಿಸೋಜ ಅವರಿಗೆ ಸಲ್ಲುತ್ತದೆ. ಇವರ ಶ್ರೇಷ್ಠ ಬರವಣಿಗೆಯಿಂದ, ಇವರಿಗೆ ಸಂದ ಪ್ರಶಸ್ತಿ ಪುರಸ್ಕಾರ, ಮಾನ್ಯತೆಯಿಂದ ಸಾಗರದ ಕೀರ್ತಿ ಹೆಚ್ಚಿದೆ. ಪರಿಸರವಾದಿಯಾಗಿ, ಸಾಮಾಜಿಕ ಹೋರಾಟಗಾರರಾಗಿ ಇವರು ನೀಡಿದ ಕೊಡುಗೆ ಅನನ್ಯವಾದುದು ಎಂದು ಕಂಬನಿ ಮಿಡಿದರು.ಡಿಸೋಜ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವದೊಂದಿಗೆ ನೆರವೇರಿಸಲು ಸರ್ಕಾರ ಆದೇಶ ಹೊರಡಿಸಿದೆ. ಮಂಗಳವಾರ ಅವರ ಅಂತಿಮ ದರ್ಶನಕ್ಕೆ ಅಗತ್ಯ ಸಿದ್ಧತೆಯನ್ನು ನಡೆಸಲಾಗಿದೆ. ಮಕ್ಕಳ ಮೇಲೆ ನಾಡಿಯವರಿಗೆ ವಿಶೇಷ ಪ್ರೀತಿ ಇರುವುದರಿಂದ ಮಂಗಳವಾರ ಪಟ್ಟಣ ವ್ಯಾಪ್ತಿ ಶಾಲೆಗಳಿಗೆ ರಜೆ ಘೋಷಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನಾ.ಡಿಸೋಜ ನನ್ನ ಹಿರಿಯ ಸ್ನೇಹಿತರು. ಅವರ ನಿಧನ ಅತ್ಯಂತ ಬೇಸರ ತರಿಸಿದೆ. ಸಾಗರಕ್ಕೆ ಅವರು ಸಾಹಿತ್ಯದ ಮೂಲಕ ಹೋರಾಟದ ಮೂಲಕ ನೀಡಿದ ಕೊಡುಗೆ ಅಪರೂಪದ್ದಾಗಿದೆ. ರಾಜ್ಯ ಓರ್ವ ಉತ್ತಮ ಬರಹಗಾರರನ್ನು ಕಳೆದುಕೊಂಡಂತಾಗಿದೆ ಎಂದರು.ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ರಾಜ್ಯದ ಶ್ರೇಷ್ಠ ಸಾಹಿತಿ ನಾ.ಡಿಸೋಜ ಅವರ ನಿಧನ ಅತ್ಯಂತ ದುಃಖವನ್ನು ತಂದಿದೆ. ಉಪವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ಅವರ ಅಂತಿಮ ದರ್ಶನಕ್ಕೆ ನಗರಸಭೆ ರಂಗಮಂದಿರದಲ್ಲಿ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಸಂಬಂಧ ಶಾಸಕರು ಹಾಗೂ ಉಪವಿಭಾಗಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.