ನಂಜುಂಡಪ್ಪ ವರದಿ ಪ್ರಕಾರ ಅಭಿವೃದ್ಧಿ ನಡೆಯಬೇಕು. ಅದರಂತೆ ಅಭಿವೃದ್ಧಿ ವೇಗ ಹೆಚ್ಚಾಗಬೇಕು. ಕನ್ನಡ ನಾಡಿಗೆ ಮೈಸೂರು ಒಡೆಯರ್ ಕೊಡುಗೆ ಅಪಾರ.

ನರಗುಂದ: ಉತ್ತರ ಕರ್ನಾಟಕ ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಆದ್ದರಿಂದ ಡಾ. ನಂಜುಂಡಪ್ಪ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಲು ಕಾಳಜಿ ಅಗತ್ಯವಿದೆ ಎಂದು ಭೈರನಹಟ್ಟಿಯ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ತಿಳಿಸಿದರು.ಪಟ್ಟಣದ ಲಯನ್ಸ್‌ ಸ್ವತಂತ್ರ ಪಪೂ ಕಾಲೇಜಿನಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಕನ್ನಡ ತಿಂಗಳು ಅಂಗವಾಗಿ ಕನ್ನಡ ರಾಜರು ಉಪನ್ಯಾಸ ಮಾಲಿಕೆ- 4ರ ಕಾರ್ಯಕ್ರಮದಲ್ಲಿ ಮಾತನಾಡಿದರು.ನಂಜುಂಡಪ್ಪ ವರದಿ ಪ್ರಕಾರ ಅಭಿವೃದ್ಧಿ ನಡೆಯಬೇಕು. ಅದರಂತೆ ಅಭಿವೃದ್ಧಿ ವೇಗ ಹೆಚ್ಚಾಗಬೇಕು. ಕನ್ನಡ ನಾಡಿಗೆ ಮೈಸೂರು ಒಡೆಯರ್ ಕೊಡುಗೆ ಅಪಾರ. ನರಗುಂದದ ನಾದಬ್ರಹ್ಮಾನಂದ ಶ್ರೀಗಳು ಮೈಸೂರು ಒಡೆಯರ್‌ ಕಾಲದ ಮೈಸೂರಿನ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾಗಿದ್ದು, ಅವರ ನರಗುಂದದ ನಂಟು ತಿಳಿಸಿಕೊಡುತ್ತದೆ ಎಂದರು. ಉತ್ತರ ಕರ್ನಾಟಕದ ಮುಳಗುಂದದ ಗವಿಮಠ ನಿರ್ಮಾಣ, ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಕಟ್ಟಡ ನಿರ್ಮಾಣ ಆಗುವಲ್ಲಿ ಮೈಸೂರು ಒಡೆಯರ್ ಸಂಸ್ಥಾನದ ಕೊಡುಗೆ ಅಪಾರವಾಗಿದೆ. ಪ್ರತಿಯೊಬ್ಬರೂ ಕನ್ನಡ ನಾಡು, ನುಡಿ ರಕ್ಷಿಸಿ ಬೆಳೆಸಿದ ರಾಜರ ಚರಿತ್ರೆ ಅರಿಯಬೇಕು ಎಂದರು.ಲಯನ್ಸ್‌ ಶಿಕ್ಷಣ ಸಂಸ್ಥೆ ವೈಸ್ ಚೇರ್ಮನ್ ಉಮೇಶಗೌಡ ಪಾಟೀಲ ಮಾತನಾಡಿ, ಕನ್ನಡ ನಾಡು, ನುಡಿ, ಜಲಕ್ಕೆ ಧಕ್ಕೆ ಉಂಟಾದಾಗ ಅದಕ್ಕೆ ತಕ್ಕ ಉತ್ತರ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ನಾಡಿನ ಏಕೈಕ ಶ್ರೀಗಳಿದ್ದರೆ ಅವರು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳೆಂದರೆ ಅತಿಶಯೋಕ್ತಿಯಲ್ಲ. ಅವರ ಕನ್ನಡ ಕಾಳಜಿ ಎಲ್ಲರಲ್ಲೂ ಮೂಡಬೇಕಿದೆ. ಕನ್ನಡ ಕಾರ್ಯಕ್ರಮ ನವೆಂಬರ್‌ಗೆ ಮೀಸಲಾಗದೇ ಇಡೀ ವರ್ಷ ನಡೆಯುವುದು ದೊರೆಸ್ವಾಮಿ ವಿರಕ್ತಮಠದಲ್ಲಿ ಮಾತ್ರ. ಈಗ ಕನ್ನಡ ರಾಜರು ಕುರಿತು ಗದಗ ಹಾಗೂ ನಾಡಿನ ವಿವಿಧೆಡೆ ನಡೆಯುತ್ತಿವೆ. ಇದರ ಲಾಭವನ್ನು ಪ್ರತಿಯೊಬ್ಬ ಕನ್ನಡಿಗರು ಪಡೆಯಬೇಕೆಂದರು.

ಮೈಸೂರು ಅರಸರ ಕೊಡುಗೆ ಕುರಿತು ಸಿದ್ಧೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಮು ಎಂ.ಎಸ್. ಮಾತನಾಡಿ, 5 ಶತಮಾನಗಳ ಕಾಲ ಆಡಳಿತ ನಡೆಸಿದ ಮೈಸೂರು ಒಡೆಯರ್ ಮೈಸೂರು ರಾಜ್ಯ, ಕರ್ನಾಟಕ ರಾಜ್ಯ ಬೆಳೆಯುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.

ಚಾಮುಂಡಿ ದೇವಸ್ಥಾನ, ನಂದಿ ವಿಗ್ರಹ, ಕನ್ನಂಬಾಡಿ ಅಣೆಕಟ್ಟು, ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣ ಸೇರಿದಂತೆ ಕನ್ನಡ ನಾಡಿನ ಅಭಿವೃದ್ಧಿಯಲ್ಲಿ ಅವರದು ಸಿಂಹಪಾಲು ಇದೆ. ಸಿಂಗರಾರ್ಯ, ಸಂಚಿ ಹೊನ್ನಮ್ಮನಂತಹ ಸಾಹಿತಿಗಳು ಇಲ್ಲಿಯೇ ಆಶ್ರಯ ಪಡೆದು ಕನ್ನಡ ಸಾಹಿತ್ಯ ಬೆಳಗಿದರು. ಯುವಪೀಳಿಗೆ ಕನ್ನಡ ಸಾಹಿತ್ಯ, ಇತಿಹಾಸ ಅರಿಯಬೇಕು ಎಂದರು.ಲಯನ್ಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಸಿ.ಎಸ್. ಸಾಲೂಟಗಿಮಠ ಮಾತನಾಡಿದರು. ದೊರೆಸ್ವಾಮಿ ವಿರಕ್ತಮಠದಿಂದ ಲಯನ್ಸ್‌ ಶಿಕ್ಷಣ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ವೈಸ್ ಚೇರ್ಮನ್ ಉಮೇಶ್ ಗೌಡ ಪಾಟೀಲ, ಕಾರ್ಯದರ್ಶಿ ಡಾ. ಪ್ರಭು ಎಂ. ನಂದಿ, ಜಂಟಿ ಕಾರ್ಯದರ್ಶಿ ವಿಜಯಕುಮಾರ ಬೇಲೇರಿ ಹಾಗೂ ಉಪನ್ಯಾಸ ನೀಡಿದ ಡಾ. ರಾಮು ಅವರನ್ನು ಸನ್ಮಾನಿಸಲಾಯಿತು.ನಿರ್ದೇಶಕ ಎಸ್.ಎಸ್. ಪಾಟೀಲ, ಎಸ್.ಬಿ. ಭಜಂತ್ರಿ, ಮಹಾಂತೇಶ ಹಿರೇಮಠ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ಪ್ರಾ. ಎಸ್.ಜಿ. ಜಕ್ಕಲಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ. ಬಸವರಾಜ ಹಲಕುರ್ಕಿ ನಿರೂಪಿಸಿದರು. ಎಚ್.ವೈ. ಜೊತೆನ್ನವರ ವಂದಿಸಿದರು.