ಸಮ ಸಮಾಜದ ಕನಸುಗಾರ ಡಿ. ದೇವರಾಜ ಅರಸು

| Published : Aug 23 2024, 01:10 AM IST / Updated: Aug 23 2024, 01:11 AM IST

ಸಾರಾಂಶ

ಹಿಂದುಳಿದ ಜನಾಂಗದ ಮಹಾತ್ಮ, ವಿದ್ಯಾರ್ಥಿ ವರ್ಗಕ್ಕೆ ಅರಿವಿನ ಬೆಳಕು ಚೆಲ್ಲಿದ ಅರಿವಿನ ಗುರು, ಜಾತಿ ವರ್ಗದ ಕಂದಕವನ್ನು ತೊಡೆದುಹಾಕಲು ಶ್ರಮಪಟ್ಟವರು.

ಕನ್ನಡಪ್ರಭ ವಾರ್ತೆ ಹುಣಸೂರು

ಡಿ. ದೇವರಾಜ ಅರಸು ಸಮ ಸಮಾಜದ ಕನಸು ಕಂಡ ಕನಸುಗಾರ ಎಂದು ಡಾ. ನಂಜುಂಡಸ್ವಾಮಿ ಹರದನಹಳ್ಳಿ ಅಭಿಪ್ರಾಯಪಟ್ಟರು.

ಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಡಿ. ದೇವರಾಜ ಅರಸು ಅವರ 109ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ಹಿಂದುಳಿದ ಜನಾಂಗದ ಮಹಾತ್ಮ, ವಿದ್ಯಾರ್ಥಿ ವರ್ಗಕ್ಕೆ ಅರಿವಿನ ಬೆಳಕು ಚೆಲ್ಲಿದ ಅರಿವಿನ ಗುರು, ಜಾತಿ ವರ್ಗದ ಕಂದಕವನ್ನು ತೊಡೆದುಹಾಕಲು ಶ್ರಮಪಟ್ಟವರು. ಚೀನಾ ಭಾರತದ ಯುದ್ಧ ವಿರೋಧಿಯ ಸಂದರ್ಭದಲ್ಲಿ ಟಿಬೆಟ್ ನಿರಾಶ್ರಿತರಿಗೆ ಕರ್ನಾಟಕ ವಡ್ಡರ ಪಾಳ್ಯ ಮತ್ತು ಬೈಲುಕುಪ್ಪೆಯಲ್ಲಿ ಸಾವಿರಾರು ಎಕರೆ ಜಾಗ ನೀಡಿದ ಆಶ್ರಯದಾತ ಎಂದರು.

ಮುಖ್ಯಮಂತ್ರಿಯಾಗಿದ್ದರು ರೈತರಂತೆ ಬದುಕಿದ ನಿಜ ರೈತ ದೇವರಾಜ ಅರಸು. ಕರ್ನಾಟಕದಲ್ಲಿ ಭೂಸುಧಾರಣೆಯನ್ನು ಜಾರಿಗೆ ತಂದಾಗ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ದಲಿತ ಚೆಲುವಯ್ಯನಿಗೆ ಆರು ಎಕರೆ ಜಮೀನನ್ನು ನೀಡಿದ ಸಮಾಜ ಸುಧಾರಕ. ಹಾವನೂರು ಆಯೋಗ ರಚಿಸಿ ನ್ಯಾಯ ನೀಡಿದ ನ್ಯಾಯವಾದಿ. ರಾಜಕಾರಣದಲ್ಲಿ ಛಲಗಾರ, ಚತುರರು ಆಗಿದ್ದಾಗಿ ಅವರು ಹೇಳಿದರು.

ಮಾರ್ಕ್ಸ್ ವಾದ, ತತ್ತ್ವಶಾಸ್ತ್ರ, ಗಾಂಧಿವಾದ, ಪೆರಿಯಾರ್ ವಿಚಾರ, ಮಹಾಭಾರತ, ರಾಮಾಯಣ, ಬಿ.ಆರ್. ಅಂಬೇಡ್ಕರ್, ಬೌದ್ಧ ಸಾಹಿತ್ಯ ಹಾಗೂ ಅಗಾಧವಾದ ಸಾಹಿತ್ಯದ ವಿದ್ವತ್ತು ಅವರಲ್ಲಿತ್ತು. 64 ಸಾವಿರ ಜೀತದಾಳನ್ನು ಜೀತದಿಂದ ಮುಕ್ತಿಗೊಳಿಸುವ ಮೂಲಕ ಕರ್ನಾಟಕ ರಾಜಕಾರಣದಲ್ಲಿ ದೊಡ್ಡ ಸಾಧನೆ ಮಾಡಿದ ಅಪರೂಪದ ಮಾಜಿ ಮುಖ್ಯಮಂತ್ರಿ ಎಂದು ಅವರು ಕೊಂಡಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪುಟ್ಟಶೆಟ್ಟಿ ಮಾತನಾಡಿ, ಹುಣಸೂರಿನ ಕೀರ್ತಿಯನ್ನು ಭಾರತದ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ದೇವರಾಜ ಅರಸು ಅವರು ಇಂದಿಗೂ ಅಜರಾಮರವಾಗಿ ಉಳಿದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ ಅವರು, ಸರಳವಾಗಿ ಬದುಕಿದರು. ಎಲ್ಲಾ ಸಮುದಾಯದ ಹಿತಚಿಂತಕರಾಗಿದ್ದರು, ಶೈಕ್ಷಣಿಕವಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾಗಿ ಹೇಳಿದರು.

ಪ್ರಾಧ್ಯಾಪಕ ಡಾ.ಎಚ್.ಆರ್. ವಿಶ್ವನಾಥ್, ಹನುಮಂತಪ್ಪ, ಲಕ್ಷ್ಮಯ್ಯ, ಕೇಸರ್ ಕರ್ ಇದ್ದರು. ನೂರ್ ಉನ್ನಿಸಾ ಪ್ರಾರ್ಥಿಸಿದರು.