ಸಾರಾಂಶ
ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಲು ಚಿಂತನೆ ನಡೆಸಬೇಕು. ಅವರುಗಳು ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ಪ್ರೇರೇಪಿಸಬೇಕು. ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉನ್ನತ ಮಟ್ಟನೆ ಸಾಧನೆ ಮಾಡಲು ಸಹಕಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಬೆಸಗರಹಳ್ಳಿ ಮಾನಸ ಸಮೂಹ ಶಿಕ್ಷಣ ಸಂಸ್ಥೆಗಳ ಮಾನಸೋತ್ಸವ ಅಂಗವಾಗಿ ನಡೆದ ಸಮಾರಂಭದಲ್ಲಿ ಖ್ಯಾತ ಸಾಹಿತಿ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಮಣ್ಯ ಹಾಗೂ ಸಂಗೀತ ನಿರ್ದೇಶಕ, ಹಾಸ್ಯ ನಟ ಡಾ.ಸಾಧುಕೋಕಿಲ ಅವರುಗಳಿಗೆ ಸ್ವಾತಂತ್ರ ಹೋರಾಟಗಾರ ಡಿ. ಕರಡಿ ಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಗ್ರಾಮದ ಹೊಂಬಾಳಮ್ಮ ಡಿ.ಕರಡಿಗೌಡ ವೇದಿಕೆಯಲ್ಲಿ ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಡಿ.ಕರಡಿಗೌಡ ಸಾಹಿತ್ಯ ವಿಮರ್ಶಕ ರತ್ನ ಮತ್ತು ಡಾ.ಸಾಧುಕೋಕಿಲ ಅವರಿಗೆ ಕಲಾ ಕೌಸ್ತುಭ ಪ್ರಶಸ್ತಿಯೊಂದಿಗೆ ತಲಾ 50 ಸಾವಿರ ರು. ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಇದೇ ವೇಳೆ ಮಾನಸ ಶಾಲೆಯಲ್ಲಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಣ ಸಂಸ್ಥೆಯಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.ಅಭಿನಂದಿತರ ಪರವಾಗಿ ಮಾತನಾಡಿದ ಡಾ.ಸಾಧು ಕೋಕಿಲ, ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಲು ಚಿಂತನೆ ನಡೆಸಬೇಕು. ಅವರುಗಳು ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಕೆ.ಎಂ.ಉದಯ ಮಾತನಾಡಿ, ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಉನ್ನತ ಮಟ್ಟನೆ ಸಾಧನೆ ಮಾಡಲು ಸಹಕಾರ ನೀಡಬೇಕು ಎಂದರು.ಪ್ರಶಸ್ತಿ ಪ್ರಧಾನ ಮಾಡಿದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಕಲಿಕೆ ಹಂತದಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರವಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ರಾಜ್ಯ ವಕೀಲರ ಪರಿಷತ್ ಸದಸ್ಯ ಬಸವರಾಜು, ಮಾನಸ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವಿ.ಕೆ. ಜಗದೀಶ್, ಕಾರ್ಯದರ್ಶಿ ಎಚ್.ಪಿ. ನಾಗರಾಜು, ಖಜಾಂಚಿ ಸನತ್ ಕುಮಾರ್, ಶೈಕ್ಷಣಿಕ ಸಲಹೆಗಾರ ನಿಂಗರಾಜು, ಪ್ರಾಂಶುಪಾಲರುಗಳಾದ ಪ್ರವೀಣ್ ಕುಮಾರ್, ಮಮತಾ, ಮುಖ್ಯ ಶಿಕ್ಷಕಿ ಕಲಾವತಿ, ಡಿ ಕರಡಿ ಗೌಡ ಪ್ರತಿಷ್ಠಾನದ ಕಾರ್ಯದರ್ಶಿ ಚೈತ್ರ ಬಾಣಸವಾಡಿ ಹಾಗೂ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.