ಡಾ. ಪರಮೇಶ್ವರ ಸಿಎಂ ಆಗಲಿ: ಸಿದ್ಧರಬೆಟ್ಟ ಸ್ವಾಮೀಜಿ

| Published : Aug 14 2024, 12:57 AM IST / Updated: Aug 14 2024, 12:58 AM IST

ಸಾರಾಂಶ

ಡಾ. ಪರಮೇಶ್ವರ ಸಿಎಂ ಆಗಲಿ: ಸಿದ್ಧರಬೆಟ್ಟ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗೃಹ ಸಚಿವ ಡಾ.ಜಿ.ಪರಮೇಶ್ವರ ರಾಜ್ಯದ ಮುಖ್ಯಮಂತ್ರಿಯಾದರೆ ತಮಕೂರು ಜಿಲ್ಲೆ ಜನರ ಹಲವು ದಶಕಗಳ ಕನಸು ನೆರವೇರುತ್ತದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿದರು.

ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾಮದ ಮಹಾಲಕ್ಷ್ಮೀ ದೇವಾಲಯದ ನೂತನ ಗೋಪುರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯದಲ್ಲಿ ಹಲವು ಜಿಲ್ಲೆಗಳ ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ ಆದರೆ ತುಮಕೂರು ಜಿಲ್ಲೆಗೆ ಭಾಗ್ಯವೇ ಬಂದಿಲ್ಲ. ತುಮಕೂರು ಜಿಲ್ಲೆಯವರು ಯಾರಾದರೂ ಸರಿ ಮುಖ್ಯಮಂತ್ರಿಯಾಗಲಿ ಎನ್ನುವುದು ಜಿಲ್ಲೆಯ ಜನರ ಕನಸಾಗಿದೆ, ಆದರೆ ಜಿಲ್ಲೆಯ ಯಾವೊಬ್ಬ ನಾಯಕರು ಸ್ಥಾನದ ಹತ್ತಿರ ಹೋಗಲು ಸಾಧ್ಯವಾಗಿಲ್ಲ .ಆದರೆ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಪೂರ್ಣ ಅರ್ಹರಿದ್ದಾರೆ. ಅವರಲ್ಲಿ ಸಜ್ಜನಿಕೆ ಒಳ್ಳೆಯ ಗುಣ ವಿದ್ಯಾರ್ಹತೆ ಇದೆ. ಅವರು ಮುಖ್ಯಮಂತ್ರಿಯಾದರೆ ತುಮಕೂರು ಜಿಲ್ಲೆಯ ಜನರ ಹಲವು ವರ್ಷಗಳ ಕನಸು ಹಂಬಲ ಈಡೇರಿದಂತೆ ಆಗುತ್ತದೆ ಎಂದರು. ಗೃಹ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ ಸಮಾಜದಲ್ಲಿ ಜನರ ಮನಸ್ಸು ಪರಿಶುದ್ದವಾಗಿರಬೇಕಾದರೆ, ಸಮಾಜವು ಶಾಂತಿಯಿಂದ ಇರಬೇಕಾದರೆ, ಮುಂದಿನ ಪೀಳಿಗೆ ಸಮಾಜದಲ್ಲಿ ಶಿಸ್ತಿನಿಂದ ಇರಬೇಕಾದರೆ ನಾವುಗಳು ಗುರುಗಳ ಮೊರೆ ಹೋಗಬೇಕು. ಗ್ರಾಮೀಣ ಭಾಗದ ಜನರು ದೇವರ ಮೇಲೆ ನಂಬಿಕೆ ಭಯದಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಇದು ಸಮಾಜದಲ್ಲಿ ಒಳ್ಳೆಯ ಪರಿಸರ ಉಂಟುಮಾಡಲಿದೆ ಎಂದ ಅವರು ಬಯಲು ಸೀಮೆಯ ನಮ್ಮ ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆಯಿಂದ ೬೯ ಕೆರೆಗಳಿಗೆ ನೀರು ಹರಿಯತ್ತದೆ ಅದರಲ್ಲಿ ಬೈಚಾಪುರ ಗ್ರಾಮದ ಕರೆಯೂ ಸೇರಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಡ್ಲಹಳ್ಳಿ ಅಶ್ವಥನಾರಾಯಣ, ಅರಕರೆ ಶಂಕರ್, ವೆಂಕಟಪ್ಪ, ಗ್ರಾಪಂ ಸದಸ್ಯ ವೆಂಕಟರೆಡ್ಡಿ, ನಾಗರಾಜ್, ವೆಂಕಟೇಶ್, ರವಿಕುಮಾರ್, ಮಂಜುನಾಥ್, ಹನುಮಂತರಾಯಪ್ಪ, ನರಸಿಂಹಮೂರ್ತಿ, ಸಿದ್ದಪ್ಪ ಸೇರಿದಂತೆ ಇತರರು ಹಾಜರಿದ್ದರು.