- ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಹೆಣ್ಣುಮಕ್ಕಳ ಸುರಕ್ಷೆಗೆ ಒತ್ತು ನೀಡಲು ಆದೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯ ಕೆಲ ಜಿಮ್ ಮತ್ತು ಫಿಟ್ನೆಸ್ ಕ್ಲಬ್‌ಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಬಗ್ಗೆ ವರದಿಯಾಗುತ್ತಿವೆ. ಈ ಹಿನ್ನೆಲೆ ಮಹಿಳೆಯರ ಸುರಕ್ಷತೆಗೆ ತಕ್ಷಣದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡುವ ಮೂಲಕ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಹಿಳೆಯರಿಗೆ ಅಭಯ ನೀಡಿದ್ದಾರೆ.

ನಗರದ ತಮ್ಮ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಶನಿವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶೇಖರ್ ಎಚ್. ತೆಕ್ಕಣ್ಣವರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಜೊತೆಗೆ ತುರ್ತು ಸಭೆ ನಡೆಸಿದ ಅವರು, ಫಿಟ್ನೆಸ್ ಕ್ಲಬ್‌ಗಳಲ್ಲಿ, ಜಿಮ್‌ಗಳಲ್ಲಿ ಮಹಿಳೆಯರ ಸುರಕ್ಷತೆ, ಭದ್ರತೆಗೆ ಹೆಚ್ಚಿನ ಹಾಗೂ ಕಟ್ಟುನಿಟ್ಟಿನ ಕ್ರಮ ಮೊದಲು ಕೈಗೊಳ್ಳಿ ಎಂದರು.

ಜಿಲ್ಲಾದ್ಯಂತ ಫಿಟ್ನೆಸ್ ಕ್ಲಬ್‌ಗಳು, ಜಿಮ್‌ಗಳು, ವಾಣಿಜ್ಯ ಮಳಿಗೆಗಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತಹ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ವ್ಯವಸ್ಥೆ, ಕಣ್ಗಾವಲನ್ನು ಹೆಚ್ಚಿಸಬೇಕು. ಅಪ್ರಾಪ್ತೆಯರು, ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರ ಸುರಕ್ಷತೆ ಕುರಿತಂತೆ ಕೈಗೊಂಡಿರುವ ಕ್ರಮ, ನಿಯಮ ಪಾಲನೆ ಬಗ್ಗೆ ಸಮಗ್ರ ಪರಿಶೀಲಿಸುವಂತೆ ಸೂಚಿಸಿದರು.


ದಾವಣಗೆರೆ ನಗರ, ಜಿಲ್ಲೆಯ ಎಲ್ಲ ಫಿಟ್ನೆಸ್ ಕ್ಲಬ್, ಜಿಮ್‌ಗಳ ಮಾಲೀಕರು, ಟ್ರೈನರ್‌ಗಳ ಸಭೆ ನಡೆಸಿ, ಮಹಿಳೆಯರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರ ಭದ್ರತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ನಿಗಾ ವಹಿಸಬೇಕು. ಮಹಿಳೆಯರಿಗೆಂದೇ ಪ್ರತ್ಯೇಕ ಸಮಯ ಹಾಗೂ ಸರ್ಟಿಫೈಡ್ ಮಹಿಳಾ ಟ್ರೈನರ್‌ಗಳನ್ನು ನೇಮಿಸುವ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಂದು ತಾಕೀತು ಮಾಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರಾದ್ಯಂತ ಮಹಿಳೆಯರ ಸುರಕ್ಷತೆ ಕುರಿತಂತೆ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಮಹಿಳೆಯರ ಸಹಾಯವಾಣಿ ಹಾಗೂ ಅಕ್ಕ ಪಡೆಯ ಕಾರ್ಯ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಬೇಕು. ಅಕ್ಕ ಪಡೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನಿರಂತರ ಪರಿಶೀಲಿಸಬೇಕು. ಅದರಲ್ಲಿ ಅಗತ್ಯ ಸುಧಾರಣೆ ಕ್ರಮಗಳನ್ನು ಸಹ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಯಾವುದೇ ರೀತಿಯಲ್ಲೂ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೇ, ಸಂಬಂಧಿತ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಆಡಳಿತ ಮತ್ತು ಪೊಲೀಸ್ ಇಲಾಖೆ ಹಾಗೂ ನಿಮ್ಮಗಳ ಪ್ರಮುಖ ಜವಾಬ್ದಾರಿ ಎಂಬುದನ್ನೂ ಮರೆಯಬೇಡಿ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಎಚ್.ಟಿ.ಶೇಖರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ ಇತರರು ಇದ್ದರು.

- - -

(ಕೋಟ್‌) ಮಹಿಳೆಯರ ಭದ್ರತೆಗೆ ಸಂಬಂಧಿಸಿದ ಪ್ರತಿಯೊಂದು ದೂರಿಗೂ ತ್ವರಿತವಾಗಿ ಸ್ಪಂದಿಸಬೇಕು. ದಾವಣಗೆರೆಯಲ್ಲಿ ಈಚೆಗೆ ಕೆಲವು ಫಿಟ್ನೆಸ್ ಸೆಂಟರ್‌ಗಳು, ಜಿಮ್‌ಗಳಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆಯೂ ಇಲಾಖೆ ಗಂಭೀರ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಮೊದಲು ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆಯೂ ಹೆಚ್ಚು ಗಮನಹರಿಸಲಿ.

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.

- - -

-11ಕೆಡಿವಿಜಿ1, 2:

ಜಿಲ್ಲಾ ಎಸ್‌ಪಿ ಡಾ. ಎಚ್.ಟಿ.ಶೇಖರ್, ಎಎಸ್‌ಪಿ ಪರಮೇಶ್ವರ ಹೆಗಡೆ ಜತೆ ಸಂಸದೆ ಡಾ.ಪ್ರಭಾ ಸಭೆ ನಡೆಸಿ, ಮಹಿಳೆಯರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಸಲಹೆ- ಸೂಚನೆ ನೀಡಿದರು.