ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವೇ ಗುರಿ: ನಾಗರಾಜ

| Published : Apr 22 2024, 02:01 AM IST

ಸಾರಾಂಶ

2009ರಲ್ಲಿ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಸರ್ಕಾರದಿಂದ ಸಹಕಾರ ಕೊಡಿಸುವಂತೆ ಬೇಡಿಕೆ ಮುಂದಿಟ್ಟು, ರೈತರು- ಕಾರ್ಮಿಕರ ಹಿತಕ್ಕಾಗಿ ಬಿಜೆಪಿಗೆ ಸೇರ್ಪಡೆಗಿದ್ದೆ. ಆದರೆ, ಸಂಸದರಿಂದ ಬೇಸತ್ತು ಪಕ್ಷ ತೊರೆದಿದ್ದೇನೆ. ಇದೇ ರೀತಿ ಬಹಳಷ್ಟು ನಿಷ್ಠಾವಂತರು ಪಕ್ಷ ತೊರೆಯುತ್ತಿದ್ದಾರೆ ಎಂದು ಯುವ ಮುಖಂಡ, ಜನತಾ ಬಜಾರ್ ಮಾಜಿ ಅಧ್ಯಕ್ಷ ಎಚ್.ಎಸ್. ನಾಗರಾಜ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಭದ್ರಾ ಸಕ್ಕರೆ ಕಾರ್ಖಾನೆ ಪುನಾರಂಭ ಮಾತು ತಪ್ಪಿದ ಸಂಸದ ಸಿದ್ದೇಶ್ವರ: ಟೀಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

2009ರಲ್ಲಿ ಭದ್ರಾ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಸರ್ಕಾರದಿಂದ ಸಹಕಾರ ಕೊಡಿಸುವಂತೆ ಬೇಡಿಕೆ ಮುಂದಿಟ್ಟು, ರೈತರು- ಕಾರ್ಮಿಕರ ಹಿತಕ್ಕಾಗಿ ಬಿಜೆಪಿಗೆ ಸೇರ್ಪಡೆಗಿದ್ದೆ. ಆದರೆ, ಸಂಸದರಿಂದ ಬೇಸತ್ತು ಪಕ್ಷ ತೊರೆದಿದ್ದೇನೆ. ಇದೇ ರೀತಿ ಬಹಳಷ್ಟು ನಿಷ್ಠಾವಂತರು ಪಕ್ಷ ತೊರೆಯುತ್ತಿದ್ದಾರೆ ಎಂದು ಯುವ ಮುಖಂಡ, ಜನತಾ ಬಜಾರ್ ಮಾಜಿ ಅಧ್ಯಕ್ಷ ಎಚ್.ಎಸ್. ನಾಗರಾಜ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದೂವರೆ ದಶಕದ ಹಿಂದೆ ಬಿಜೆಪಿಗೆ ಸೇರಿದಾಗಿನಿಂದಲೂ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದೇನೆ. ಹಾಗಿದ್ದರೂ ನನ್ನನ್ನು ಪಕ್ಷದಲ್ಲಿ ಕಡೆಗಣಿಸಿದ್ದು, ನೋವು ತಂದಿದೆ . ನನ್ನ 28 ವರ್ಷಗಳ ರಾಜಕೀಯ ಜೀವನದಲ್ಲಿ ಹೋರಾಟ, ಸೇವೆ ಮಾಡಿಕೊಂಡು ಬಂದವನು ನಾನು ಎಂದರು.

ತಮ್ಮ ತಂದೆ ದಿವಂಗತ ಎಚ್.ಶಿವಪ್ಪ ದಾವಣಗೆರೆ ಜಿಲ್ಲೆಯ ಪ್ರಥಮ ಉಸ್ತುವಾರಿ ಸಚಿವರಾಗಿದ್ದವರು. 5 ದಶಕಗಳ ರಾಜಕೀಯ ಹಿನ್ನೆಲೆಯ ಕುಟುಂಬ. ಸ್ವಂತ ಅಭಿವೃದ್ಧಿಗೆ ಒತ್ತು ನೀಡುತ್ತಿರುವವರು ಪಕ್ಷವನ್ನು ಹಾಳು ಮಾಡುತ್ತಿದ್ದಾರೆ. ನನ್ನ ತಂದೆ, ನಾನು ಅನುಭವಿಸಿದ್ದ ನೋವಿನಿಂದ ಪಕ್ಷ ತೊರೆದಿದ್ದೇನೆ. ಇದಕ್ಕೆ ಸಂಸದ ಸಿದ್ದೇಶ್ವರ್ ಒಬ್ಬರೇ ಕಾರಣ. ಪಕ್ಷಕ್ಕೆ ಸೇರ್ಪಡೆಯಾದಾಗ ಭವ್ಯ ಸ್ವಾಗತ ನೀಡಿದ್ದರು. ಆಗ 10 ಸಾವಿರ ಕುಟುಂಬಗಳಿಗೆ ಆಸರೆಯಾದ ಬಾತಿ ಗ್ರಾಮದ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಿಸಲು ಆಗಿನ ಬಿಜೆಪಿ ಸರ್ಕಾರದ ಸಹಕಾರ ಕೊಡಿಸುವಂತೆ ಬೇಡಿಕೆ ಇಟ್ಟಿದ್ದೆ. ರೈತರು, ಕಾರ್ಮಿಕರ ಹಿತಕ್ಕಾಗಿ ನಾನು ಬಿಜೆಪಿ ಸೇರಿದ್ದೆ. ಕಾರ್ಖಾನೆ ಆರಂಭಿಸಲು ಸಹಕರಿಸುವ ಪ್ರಮಾಣ ಮಾಡಿದ್ದ ಸಂಸದರು ಮಾತು ತಪ್ಪಿದರು. ಅಲ್ಲದೇ. ಅದೇ ಕಾರ್ಖಾನೆಯನ್ನು ತಾವೇ ಖರೀದಿಸಲು ಹೊರಟಿದ್ದರು ಎಂದು ಆರೋಪಿಸಿದರು.

ಬಿಜೆಪಿ ಸಂಸದರಾಗಿದ್ದುಕೊಂಡೇ ಕೆಜೆಪಿ ಟಿಕೆಟ್ ಹಂಚಿಕೆ ಮಾಡಿದ್ದು ಸಿದ್ದೇಶ್ವರ. ಇದಕ್ಕೆ ನಾನೇ ಸಾಕ್ಷಿ. ಆಗ ಸಿದ್ದೇಶ್ವರರ ಪಕ್ಷ ನಿಷ್ಠೆ ಎಲ್ಲಿ ಹೋಗಿತ್ತು? ಜಿಲ್ಲಾಧ್ಯಕ್ಷರಿಗೆ ಹಿಡಿತದಲ್ಲಿಟ್ಟುಕೊಂಡು, ಸಿಕ್ಕ ಸಿಕ್ಕವರನ್ನು ಉಚ್ಛಾಟಿಸಿದ್ದೇ ನಿಮ್ಮ ಸಾಧನೆ. ಪ್ರಧಾನಿ ಮೋದಿ ಹೆಸರು ಬಿಟ್ಟರೆ ನಿಮ್ಮ ಸಾಧನೆ ಶೂನ್ಯ. ಗೆದ್ದಾದ ನಂತರ ಭದ್ರಾ ನೀರನ್ನು ಚಿತ್ರದುರ್ಗಕ್ಕೆ ಒಯ್ಯುವ ಕೆಲಸ ಮಾಡಿದ್ದೀರಿ. ಮತ ಕೊಟ್ಟ ರೈತರಿಗೆ ನಿಮ್ಮ ಕೊಡುಗೆ ಇದೇನಾ? ನಿಮ್ಮ ಸ್ವಾರ್ಥಕ್ಕೆ ತಕ್ಕ ಪಾಠ ಕಲಿಸಲು ಜನ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವೇದಿಕೆ ಜಿಲ್ಲೆ ಅಭಿವೃದ್ಧಿ ಬಗ್ಗೆ ಕರೆದಿದ್ದ ಸಭೆಯಲ್ಲಿ ನನ್ನ ಅಭಿಪ್ರಾಯ ಮಂಡಿಸಿದ್ದೆ. ಅದನ್ನು ನಾನಾಗಲೀ, ನಮ್ಮ ಬೆಂಬಲಿಗರಾಗಲೀ ಆಯೋಜಿಸಿರಲಿಲ್ಲ. ಅದನ್ನೇ ನೆಪ ಮಾಡಿಕೊಂಡು, ನನ್ನ ವಿರುದ್ಧ ಪಕ್ಷ ವಿರೋಧಿ ಪಟ್ಟಕಟ್ಟಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, 2009ರಲ್ಲಿ ಬಿಜೆಪಿ ಸೇರಿದ್ದಾಗ 2033 ಅಲ್ಪಮತಗಳ ಅಂತರದಲ್ಲಿ ಸಿದ್ದೇಶ್ವರ ಗೆದ್ದಿದ್ದು, ಆ ಗೆಲುವಿನಲ್ಲಿ ನಮ್ಮ ಶ್ರಮವೂ ಇದೆಯೆಂಬುದನ್ನು ಮರೆಯಬಾರದು ಎಂದರು.

ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇ ಎಸ್.ಎ. ರವೀಂದ್ರನಾಥ್. ಅಂತಹವರ ಬಗ್ಗೆ ನಮಗೆ ಗೌರವವಿದೆ. ಪಕ್ಷವನ್ನೂ ನಿಜವಾಗಿ ಕಟ್ಟಿದವರು ರವೀಂದ್ರನಾಥ್‌. ಅಧಿಕಾರ ಅನುಭವಿಸುತ್ತಿರುವವರು ಇವರು. ಪಕ್ಷದಲ್ಲಿ ಕಾರ್ಯಕರ್ತರು ತುಂಬಾ ಒಳ್ಳೆಯವರಿದ್ದಾರೆ. ಅಧಿಕಾರ ಅನುಭವಿಸಿದ್ದ ಮುಖಂಡರಿಂದ ಎಲ್ಲರಿಗೂ ನೋವಾಗಿದೆ ಎಂದರು.

ಮುಖಂಡರಾದ ಬಿ.ಎಚ್.ವೀರಭದ್ರಪ್ಪ, ಎನ್.ಎಂ.ಆಂಜನೇಯ ಗುರೂಜಿ, ಎಸ್.ಎಲ್. ಆನಂದಪ್ಪ, ಗಣೇಶ ಹುಲ್ಮನಿ, ಪಾಲಿಕೆ ಸದಸ್ಯ ಶಾಂತಕುಮಾರ ಸೋಗಿ, ದೂಡಾ ಮಾಜಿ ಅಧ್ಯಕ್ಷ ಎಂ.ಜಯಕುಮಾರ, ಕೋಳಿ ಇಬ್ರಾಹಿಂ, ರಾಜಣ್ಣ, ಬುತ್ತಿ ಹುಸೇನ್ ಪೀರ್, ರಾಜಾನಾಯ್ಕ ಇತರರು ಇದ್ದರು.

- - -

ಕೋಟ್

ಏ.23ರ ಬೆಳಗ್ಗೆ 11 ಗಂಟೆಗೆ ನಗರದ ಶ್ರೀ ರೇಣುಕಾ ಮಂದಿರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ. ಪಕ್ಷ ಸೇರ್ಪಡೆಗೆ ಯಾವುದೇ ಷರತ್ತು ವಿಧಿಸಿಲ್ಲ. ಯಾವುದೇ ಸ್ಥಾನಮಾನ ಕೇಳಿ ಪಡೆಯುವ ಅಭ್ಯಾಸ ನನ್ನದಲ್ಲ. ಎಲ್ಲದಕ್ಕೂ ಯೋಗ ಕೂಡಿ ಬರಬೇಕು

- ಎಚ್.ಎಸ್.ನಾಗರಾಜ, ಯುವ ಮುಖಂಡ

- - -

-21ಕೆಡಿವಿಜಿ1, 2:

ದಾವಣಗೆರೆಯಲ್ಲಿ ಭಾನುವಾರ ಯುವ ಮುಖಂಡ ಎಚ್.ಎಸ್.ನಾಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.