ಗಿಡಮೂಲಿಕೆ ಔಷಧಿ ಮಾರಾಟಕ್ಕೆಂದು ಹೋಗಿ ವೀಸಾ ಅವಧಿ ಮುಗಿದು, ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ಜೈಲು ಪಾಲಾಗುವ ಭೀತಿಗೆ ಸಿಲುಕಿದ್ದ ಕರ್ನಾಟಕ ಎಂಟು ಮಂದಿ ಹಕ್ಕಿಪಿಕ್ಕಿ ಜನರಿಗೆ ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೆರವಿನ ಹಸ್ತ ಚಾಚುವ ಮೂಲಕ ಹಕ್ಕಿಪಿಕ್ಕಿಗಳಿಗೆ ಆಸರೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಗಿಡಮೂಲಿಕೆ ಔಷಧಿ ಮಾರಾಟಕ್ಕೆಂದು ಹೋಗಿ ವೀಸಾ ಅವಧಿ ಮುಗಿದು, ಮಧ್ಯ ಆಫ್ರಿಕಾದ ಚಾಡ್ ದೇಶದಲ್ಲಿ ಜೈಲು ಪಾಲಾಗುವ ಭೀತಿಗೆ ಸಿಲುಕಿದ್ದ ಕರ್ನಾಟಕ ಎಂಟು ಮಂದಿ ಹಕ್ಕಿಪಿಕ್ಕಿ ಜನರಿಗೆ ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ನೆರವಿನ ಹಸ್ತ ಚಾಚುವ ಮೂಲಕ ಹಕ್ಕಿಪಿಕ್ಕಿಗಳಿಗೆ ಆಸರೆಯಾಗಿದ್ದಾರೆ.ಆಫ್ರಿಕಾ ಖಂಡದ ಚಾಡ್ ದೇಶದಲ್ಲಿ ಗಿಡಮೂಲಿಕೆ ಔಷಧಿ ಮಾರಾಟಕ್ಕೆ ತೆರಳಿದ್ದ ಕರ್ನಾಟಕದ 8 ಜನರ ಪೈಕಿ ದಾವಣಗೆರೆ ಜಿಲ್ಲೆಯ ಇಬ್ಬರು, ಶಿವಮೊಗ್ಗ ಜಿಲ್ಲೆಯ ಐದು ಜನ, ಚಿಕ್ಕಮಗಳೂರಿನ ಒಬ್ಬ ಹಕ್ಕಿಪಿಕ್ಕಿ ಜನಾಂಗದ ವ್ಯಕ್ತಿಯ ವೀಸಾ ಅವಧಿ ಡಿಸೆಂಬರ್‌ಗೆ ಮುಗಿದಿದ್ದರಿಂದ ಅಲ್ಲಿಯೇ ವೀಸಾ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದರೂ ಚಾಡ್ ದೇಶದ ಅಧಿಕಾರಿಗಳಿಂದಾಗಿ ನವೀಕರಣಗೊಂಡಿರಲಿಲ್ಲ.
ತಲಾ 1.5 ಲಕ್ಷ ರು. ಪಾವತಿಸದಿದ್ದರೆ ಜೈಲಿಗೆ ಹಾಕುವುದಾಗಿ ಚಾಡ್ ದೇಶದ ಅಧಿಕಾರಿಗಳು ಎಚ್ಚರಿಸಿದ್ದರಿಂದ ಬಡ ಹಕ್ಕಿಪಿಕ್ಕಿ ಜನರು ದಿಕ್ಕೇ ತೋಚದಂತಾಗಿ ಪ್ರತಿ ಸಲ ವಾಟ್ಸಪ್‌ನಲ್ಲಿ ವೀಡಿಯೋ, ಆಡಿಯೋ ಮಾಡಿ ಕಳಿಸಿ, ನೆರವು ನೀಡುವಂತೆ ಮಾಧ್ಯಮಗಳ ಮೂಲಕ ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಕನ್ನಡಪ್ರಭ ಸೇರಿದಂತೆ ಮಾಧ್ಯಮಗಳಲ್ಲಿ ಆಫ್ರಿಕಾದ ಚಾಡ್ ದೇಶದಲ್ಲಿ ಅತಂತ್ರರಾಗಿದ್ದ ಹಕ್ಕಿಪಿಕ್ಕಿ ಜನರ ಸುದ್ದಿಯನ್ನು ಗಮನಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಕ್ಷಣವೇ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.ಅಪರಿಚಿತ ದೇಶದಲ್ಲಿ ಗೊತ್ತು, ಗುರಿ ಇಲ್ಲದ ಜನ, ಜಗತ್ತಿನಲ್ಲಿ ಅತಂತ್ರರಾಗಿದ್ದ ಹಕ್ಕಿಪಿಕ್ಕಿ ಜನಾಂಗದ 8 ಜನರ ತಂಡ ಜೈಲು ಪಾಲಾಗುವ ಭೀತಿಗೆ ತುತ್ತಾಗಿರುವ ವಿಚಾರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಕೇಂದ್ರ ವಿದೇಶಾಂಗ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್ ಗಮನಕ್ಕೆ ತಂದು, ಹಕ್ಕಿಪಿಕ್ಕಿ ಜನರ ಸಮಸ್ಯೆ ಪರಿಹರಿಸಿದ್ದಾರೆ. ಹಕ್ಕಿಪಿಕ್ಕಿ ಜನರ ಬಗ್ಗೆ ಭಾರತದ ರಾಯಭಾರ ಕಚೇರಿಗೆ ತಕ್ಷಣವೇ ಪತ್ರ ಬರೆದು, ವೀಸಾ ಸಮಸ್ಯೆ ಪರಿಹರಿಸುವಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ಇಬ್ಬರು, ಶಿವಮೊಗ್ಗದ ಐವರು, ಚಿಕ್ಕಮಗಳೂರಿನ ಒಬ್ಬ ಸೇರಿದಂತೆ ನಾಲ್ವರು ಪುರುಷರು, ನಾಲ್ವರು ಹಕ್ಕಿಪಿಕ್ಕಿ ಮಹಿಳೆಯರು ದಂಡ ರಹಿತವಾಗಿ ವೀಸಾ ನವೀಕರಿಸಿ ಕೊಡುವುದಾಗಿ ಚಾಡ್ ದೇಶದಲ್ಲಿನ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಈ ಮೂಲಕ ಹಕ್ಕಿಪಿಕ್ಕಿ ಜನ, ಅವರ ಕುಟುಂಬ ವರ್ಗದಲ್ಲಿ ಹರ್ಷ ಮೂಡಿದೆ.