ಶ್ರವಣ ಸಾಧನಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಉಪಯುಕ್ತ

| Published : Oct 27 2025, 12:00 AM IST

ಶ್ರವಣ ಸಾಧನಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಉಪಯುಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ತುಂಬಾ ಮಕ್ಕಳು ಶ್ರವಣ ದೋಷದಿಂದ ಜೀವನ ನಡೆಸುತ್ತಿದ್ದು, ಹೆಚ್ಚಿನವರಿಗೆ ಮಾತು ಬರುವುದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿಗಳು ಇಷ್ಟು ದಿನ ಶಬ್ದದ ಗ್ರಹಿಕೆಯಿಲ್ಲದೇ ಶಾಲೆಗಳಲ್ಲಿ ಪಾಠ ಕೇಳುವಂತಾಗಿತ್ತು. ಶ್ರವಣ ಸಾಧನ ಅಳವಡಿಕೆಯಿಂದ ಸನ್ನೆಯ ಮೂಲಕವಲ್ಲದೇ ಶಬ್ದಗಳನ್ನು ಕೇಳುವ ಭಾಗ್ಯ ದೊರೆತಿದೆ. ಇದರಿಂದ ಕಲಿಕೆಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ನಿರ್ದೇಶಕಿ ಡಾ. ಪುಷ್ಪಾವತಿ ತಿಳಿಸಿದರು.ನಗರದ ಆಯಿಷ್ ಸಭಾಂಗಣದಲ್ಲಿ ಮೈಸೂರು ಡಿಸ್ಟ್ರಿಕ್ಟ್ ಡೆಫ್ ಅಸೋಸಿಯೇಷನ್, ಅಂತಾರಾಷ್ಟ್ರೀಯ ಲಯನ್ ಸಂಸ್ಥೆ 317ಜಿ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಹಾಗೂ ಕ್ಯಾನ್‌ ಫಿನ್ ಹೋಮ್ಸ್ ಲಿಮಿಟೆಡ್ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಶ್ರವಣ ಸಾಧನಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತುಂಬಾ ಮಕ್ಕಳು ಶ್ರವಣ ದೋಷದಿಂದ ಜೀವನ ನಡೆಸುತ್ತಿದ್ದು, ಹೆಚ್ಚಿನವರಿಗೆ ಮಾತು ಬರುವುದಿಲ್ಲ. ಕೇವಲ ಸನ್ನೆಯ ಮೂಲಕವೇ ವ್ಯವಹರಿಸುತ್ತಾರೆ. ಶ್ರವಣ ಸಾಧನದಿಂದ ಅವರಿಗೆ ಶಬ್ದಗಳನ್ನು ಗ್ರಹಿಸುವ ಅನುಕೂಲವಾಗಲಿದೆ. ಶ್ರವಣ ಸಾಧನಗಳನ್ನು ಉತ್ತಮವಾಗಿ ಹಾಗೂ ಸುರಕ್ಷಿತವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಂಸ್ಥೆಯು 12 ರೀತಿಯ ಅಂಗವೈಕಲ್ಯಗಳನ್ನು ಗುರುತಿಸಿ, ಅಂತಹವರ ಸಮಸ್ಯೆಗೆ ಪರಿಹಾರ ನೀಡುವುದರೊಂದಿಗೆ ಪುನರ್ವಸತಿ ಕಲ್ಪಿಸುತ್ತಾ ಬಂದಿದೆ. ಈ ವರ್ಷ 73 ಸಾವಿರ ಜನ ಸಂಸ್ಥೆಗೆ ಸಮಸ್ಯೆ ಕುರಿತು ಭೇಟಿ ನೀಡಿದ್ದು, ಇದರಲ್ಲಿ ಹೆಚ್ಚಿನ ಭಾಗ ಶ್ರವಣ ದೋಷವುಳ್ಳವರು ಕಂಡು ಬಂದಿದ್ದಾರೆ ಎಂದು ಅವರು ಹೇಳಿದರು.ಕ್ಯಾನ್‌ ಫಿನ್ ಹೋಮ್ಸ್ ಲಿಮಿಟೆಡ್‌ ಸಿಇಒ ಸುರೇಶ್ ಎಸ್. ಐಯ್ಯರ್ ಮಾತನಾಡಿ, ಯಾವುದೇ ಒಂದು ದೈಹಿಕ ದೋಷವು ನ್ಯೂನತೆಯಲ್ಲ. ಅದಕ್ಕೂ ಹೆಚ್ಚಾಗಿ ಬೇರೊಂದು ವಿಶೇಷತೆ ಅವರಲ್ಲಿರುತ್ತದೆ. ಪ್ರತಿ ಮಕ್ಕಳಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಇಂತಹ ಮಕ್ಕಳಿಗೆ ಉಜ್ವಲವಾದ ಭವಿಷ್ಯವಿದೆ. ಬದುಕಿನಲ್ಲಿ ಎಲ್ಲಾ ಸಮಸ್ಯೆಗಳನ್ನು ತೊಡೆದು ಮುಂದೆ ಸಾಗಬೇಕು. ಆ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಿ ನಿಮ್ಮ ಕನಸಿನ ಗುರಿಯನ್ನು ಬೆನ್ನು ಹತ್ತಿ ಸಾಧಕರಾಗಿ ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.ಶ್ರವಣ ದೋಷವುಳ್ಳ 5 ಶಾಲೆಗಳ 150 ವಿದ್ಯಾರ್ಥಿಗಳಿಗೆ ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಕ್ಯಾನ್‌ ಫಿನ್ ಹೋಮ್ಸ್ ಲಿಮಿಟೆಡ್ ಅಧ್ಯಕ್ಷ ಪ್ರಕಾಶ್ ಶ್ಯಾನ್‌ ಭೋಗ್, ಉಪ ಮಹಾಪ್ರಬಂಧಕ ಪ್ರಶಾಂತ್ ಜೋಶಿ, ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ.ಎನ್. ಶಾಮರಾವ್, ಲಯನ್ಸ್ ಕ್ಲಬ್‌ಜಿಲ್ಲಾ ಗವರ್ನರ್ ಕೆ.ಎಲ್. ರಾಜಶೇಖರ್, ಮೈಸೂರು ಡಿಸ್ಟ್ರಿಕ್ಟ್ ಡೆಫ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಮೂರ್ತಿ, ಉಪಾಧ್ಯಕ್ಷ ಮಹೇಶ್ ವರ್ಮ, ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರ್, ಸುಮಿತ್ರ ಮೂರ್ತಿ, ಜಯಕುಮಾರ್, ಶ್ರೀನಿವಾಸ್ ಮೊದಲಾದವರು ಇದ್ದರು.