ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಡಾ.ರಾಗೌ ಹೆಸರು ಹೆಚ್ಚು ಸೂಕ್ತ: ಡಿ.ಪಿ.ಸ್ವಾಮಿ

| Published : Oct 11 2024, 11:48 PM IST

ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಡಾ.ರಾಗೌ ಹೆಸರು ಹೆಚ್ಚು ಸೂಕ್ತ: ಡಿ.ಪಿ.ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯವರೇ ಆದ ಇವರು ಮದ್ದೂರು ತಾಲೂಕಿನ ಈರೇಗೌಡನದೊಡ್ಡಿ ಗ್ರಾಮದವರಾಗಿದ್ದು, ತಮ್ಮ ೫ನೇ ತರಗತಿ ಶಿಕ್ಷಣದವರೆಗೆ ಮಾತ್ರ ಸ್ವಗ್ರಾಮದಲ್ಲಿದ್ದರು. ನಂತರ ಅವರ ಶೈಕ್ಷಣಿಕ ಹಾಗೂ ವೃತ್ತಿ ಜೀವನ ಮೈಸೂರಿನಲ್ಲಿ ನಡೆಸಿದ್ದು, ಸಾಹಿತ್ಯಿಕವಾಗಿ ರಾಜ್ಯಕ್ಕೆ ತಮ್ಮ ಬಹುತೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಾ.ರಾಮೇಗೌಡರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತ್ಯ ವಲಯದ ಡಾ.ರಾಗೌ ಕಾವ್ಯನಾಮದಿಂದ ಜನಪ್ರಿಯರಾದ ಡಾ.ರಾಮೇಗೌಡ ಅವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಸಲಹೆ ನೀಡಿದರು.

ಡಾ.ರಾಗೌ ಅವರು ಇದುವರೆಗೂ ೮೫ ಕೃತಿಗಳನ್ನು ರಚಿಸಿದ್ದಾರೆ. ಕವಿಯಾಗಿ, ವಿಮರ್ಶಕರಾಗಿ, ಜಾನಪದ ವಿದ್ವಾಂಸರಾಗಿ, ನಾಟಕಕಾರರಾಗಿ, ಗ್ರಂಥ ಸಂಪಾದಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯ ಜಿಲ್ಲೆಯವರೇ ಆದ ಇವರು ಮದ್ದೂರು ತಾಲೂಕಿನ ಈರೇಗೌಡನದೊಡ್ಡಿ ಗ್ರಾಮದವರಾಗಿದ್ದು, ತಮ್ಮ ೫ನೇ ತರಗತಿ ಶಿಕ್ಷಣದವರೆಗೆ ಮಾತ್ರ ಸ್ವಗ್ರಾಮದಲ್ಲಿದ್ದರು. ನಂತರ ಅವರ ಶೈಕ್ಷಣಿಕ ಹಾಗೂ ವೃತ್ತಿ ಜೀವನ ಮೈಸೂರಿನಲ್ಲಿ ನಡೆಸಿದ್ದು, ಸಾಹಿತ್ಯಿಕವಾಗಿ ರಾಜ್ಯಕ್ಕೆ ತಮ್ಮ ಬಹುತೇಕ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಡಾ.ರಾಮೇಗೌಡರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನವಾಗಿರುವುದರಿಂದ ಸಾಹಿತಿಗಳನ್ನೇ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಸಾಹಿತ್ಯೇತರರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಚರ್ಚೆಗೆ ವಿರೋಧ ವ್ಯಕ್ತಪಡಿಸಿದರು.

ಅದ್ಧೂರಿ ಸಮ್ಮೇಳನದ ಬದಲಿಗೆ ಸಾಹಿತ್ಯ ಚಟುವಟಿಕೆಗಳಿಗೆ ಆದ್ಯತೆ ನೀಡುವಂತೆ ಸಾಹಿತಿ ಬೋರೇಗೌಡ ಚಿಕ್ಕಮರಳಿ ಅವರು ಹೇಳಿರುವುದು ಸೂಕ್ತವಾಗಿದೆ. ರಾಜ್ಯದ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಆಧುನಿಕ ರೀತಿಯಲ್ಲಿ ಶಿಕ್ಷಣ ನೀಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಗಮನ ಹರಿಸಬೇಕು. ಸಮ್ಮೇಳನಗಳಿಗೆ ಕೋಟ್ಯಂತರ ರು.ಗಳನ್ನು ವ್ಯಯಿಸುವ ಬದಲಿಗೆ ಎರಡು ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಸಮ್ಮೇಳನಗಳಿಗೆ ವ್ಯಯಿಸುವ ಹಣವನ್ನು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವ್ಯಯಿಸಲು ಸಾಹಿತ್ಯ ಪರಿಷತ್ತು ಕಾರ್ಯ ರೂಪಿಸಲಿ ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಕರ್ನಾಟಕ ಸಂಘದ ನಿರ್ದೇಶಕ ನಾಗಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು ಹಾಜರಿದ್ದರು.