ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವರನಟ ಡಾ.ರಾಜ್‌ಕುಮಾರ್ 97 ನೇ ಜಯಂತಿ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಮುತ್ತುರಾಜನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ರಾಜ್ ಕುಮಾರ್ ಕೇವಲ ವ್ಯಕ್ತಿ, ನಟನಷ್ಟೆಯಲ್ಲ. ಅವರೊಬ್ಬ ನಾಡಿನ ಹೋರಾಟದ ಪ್ರತೀಕ ಶಕ್ತಿಯಾಗಿದ್ದಾರೆ. ಗೋಕಾಕ್ ಸೇರಿದಂತೆ ಕನ್ನಡಪರ ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ನಟ ಸಾರ್ವಭೌಮ ರಾಜ್ ಕುಮಾರ ಅವರ ಭಾಷಾಭಿಮಾನ ನಮಗೆಲ್ಲ ಸ್ಪೂರ್ತಿಯ ಚಿಲುಮೆಯಾಗಿದ್ದು, ಇದುವೇ ನಮಗೆಲ್ಲ ಕನ್ನಡ ಉಳಿಸಿ ಬೆಳೆಸುವ ಶಕ್ತಿ ನೀಡಿದೆ ಎಂದರು. ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ ಮಾತನಾಡಿ, ಡಾ.ರಾಜಕುಮಾರ್ ರವರು ಐತಿಹಾಸಿಕ ಪೌರಾಣಿಕ ಸಾಮಾಜಿಕ ಮತ್ತು ಭಕ್ತಿ ಪ್ರಧಾನವಾದ ಪಾತ್ರಗಳ ಮೂಲಕ ಜನರಿಗೆ ಹತ್ತಿರವಾದವರು. ತಮ್ಮ ಚಿತ್ರಗಳ ಮೂಲಕ ಕನ್ನಡ ನಾಡಿನ ಜನರಿಗೆ ನಾಡಿನ ಪ್ರೇಮ ಮತ್ತು ಬದುಕಿನ ಮೌಲ್ಯಗಳನ್ನು ನೀಡುವಲ್ಲಿ ಎತ್ತರದ ಸ್ಥಾನದಲ್ಲಿ ನಿಂತಿದ್ದಾರೆ. ಕಾವೇರಿ ಮತ್ತು ಗೋಕಾಕ್ ಚಳುವಳಿಗಳನ್ನು ಅತ್ಯಂತ ಪ್ರಭಾವಯುತ ವಾಗಿ ಸಂಘಟಿಸಿ, ನಾಡಿನ ಹಿತ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಇತ್ತೀಚೆಗೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಂ ನಲ್ಲಿ ಉಗ್ರ ದಾಳಿಯಲ್ಲಿ ಸಾವನಪ್ಪಿದವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎನ್.ಅಮೃತ್ ಕುಮಾರ್, ತಾಲೂಕು ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಸುಶೀಲಾಮಂಜುನಾಥ್, ಕೋಶಾಧ್ಯಕ್ಷರಾದ ಡಿ.ಎಂ. ಶ್ರೀ ರಾಮ್, ನರಸಿಂಹ ರೆಡ್ಡಿ, ಮಂಚನಬಲೆ ಶ್ರೀನಿವಾಸ್ ಮತ್ತಿತರರು ಇದ್ದರು.