ಗೋಕಾಕ ಚಳವಳಿಗೆ ಆನೆಬಲ ತಂದ ಡಾ.ರಾಜ್: ದೇವಾನಂದ

| Published : Feb 02 2025, 11:48 PM IST

ಸಾರಾಂಶ

ಕರ್ನಾಟಕ ಇತಿಹಾಸದಲ್ಲೇ ಕನ್ನಡ ಭಾಷೆ ಬಗ್ಗೆ ಇದುವರೆಗೆ ನಡೆದ ಅರ್ಥಪೂರ್ಣ, ಪರಿಣಾಮಕಾರಿ ಹಾಗೂ ಅತ್ಯಂತ ಪ್ರಭಾವಶಾಲಿ ಹೋರಾಟವೆಂದರೆ ಅದು ಗೋಕಾಕ ಚಳವಳಿ ಎಂದು ನಗರ ಠಾಣೆ ಸಿಪಿಐ ಟಿ.ದೇವಾನಂದ ಹೇಳಿದ್ದಾರೆ.

- ಬೀದಿಬದಿ ವ್ಯಾಪಾರಸ್ಥರ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ಹರಿಹರ

ಕರ್ನಾಟಕ ಇತಿಹಾಸದಲ್ಲೇ ಕನ್ನಡ ಭಾಷೆ ಬಗ್ಗೆ ಇದುವರೆಗೆ ನಡೆದ ಅರ್ಥಪೂರ್ಣ, ಪರಿಣಾಮಕಾರಿ ಹಾಗೂ ಅತ್ಯಂತ ಪ್ರಭಾವಶಾಲಿ ಹೋರಾಟವೆಂದರೆ ಅದು ಗೋಕಾಕ ಚಳವಳಿ ಎಂದು ನಗರ ಠಾಣೆ ಸಿಪಿಐ ಟಿ.ದೇವಾನಂದ ನುಡಿದರು.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಮೈದಾನದ ಮುಂಭಾಗದಲ್ಲಿ ಗ್ರಾಮ ದೇವತೆ ಎಗ್ ಫ್ರೈಡ್ ರೈಸ್ ಹಾಗೂ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಗೋಕಾಕ ಚಳವಳಿ ನೇತೃತ್ವ ವಹಿಸಿ, ಚುರುಕು ನೀಡಿ, ಹೋರಾಟಕ್ಕೆ ಆನೆಬಲ ತುಂಬಿದ್ದು, ನಟಸಾರ್ವಭೌಮ, ಕನ್ನಡಿಗರ ಕಣ್ಮಣಿ ಪದ್ಮಭೂಷಣ ಡಾ. ರಾಜ್ ಕುಮಾರ್. ಅಂದು ಅವರು ಕನ್ನಡಕ್ಕಾಗಿ ಬೀದಿಗೆ ಇಳಿಯದಿದ್ದರೆ, ಗೋಕಾಕ ವರದಿ ಜಾರಿಗೆ ಆಗುವ ಸಾಧ್ಯತೆ ಇರಲಿಲ್ಲ ಎನ್ನಿಸುತ್ತದೆ ಎಂದರು.

ಡಾ. ರಾಜ್ ಕುಮಾರ್ ಅವರಿಂದ ಸ್ಫೂರ್ತಿ ಹೊಂದಿದ ಡಾ. ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅಂದಿನ ಅನೇಕ ಸ್ಟಾರ್ ನಟರೊಂದಿಗೆ ಇಡೀ ಚಿತ್ರರಂಗವೇ ಗೋಕಾಕ ಚಳವಳಿಗೆ ಕೈ ಜೋಡಿಸಿ, ರಾಜ್ಯಾದ್ಯಂತ ಸಂಚರಿಸಿ, ಜನರಲ್ಲಿ ಸಂಚಲನ ತಂದರು. ಅವರು ಹೋದಲೆಲ್ಲಾ ಸಾಗರೋಪಾಧಿಯಲ್ಲಿ ಸಾರ್ವಜನಿಕರು ಸೇರುತ್ತಿದ್ದರು ಎಂದರು.

ಕೇವಲ ನಟನೆಗೆ ಮಾತ್ರ ಸಿಮಿತವಾಗಿದ್ದ ಚಿತ್ರನಟರಲ್ಲಿ, ನಾಡು- ನುಡಿಗಾಗಿ ಹೋರಾಡುವ ಕೆಚ್ಚು ತುಂಬಿದ್ದು, ಡಾ.ರಾಜ್. ಅವರ ಹೋರಾಟ. ಅದರ ಫಲವಾಗಿಯೇ ಇಂದು ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆ ಆಗಿ ಬದಲಾಗಿದೆ. ಅಂದು ನಡೆದ ಚಳವಳಿ ಫಲವಾಗಿ ಸರ್ಕಾರ ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಜಾರಿಗೆ ತಂದಿತು ಎಂದರು.

ಕನ್ನಡ ಅನಂತ ಅವಿರತ ಅದನ್ನು ಕೇವಲ ನವಂಬರ್ ತಿಂಗಳಿಗೆ ಸಿಮಿತ ಮಾಡದೇ, ವರ್ಷಪೂರ್ತಿ ಕನ್ನಡದ ಕಂಪು ಇಂಪನ್ನು ಮೆಲುಕು ಹಾಕುವುದಕ್ಕೆ ಕನ್ನಡ ರಾಜ್ಯೋತ್ಸವವನ್ನು ಫೆಬ್ರವರಿ ತಿಂಗಳಲ್ಲಿ ಮಾಡಿ ಇಲ್ಲಿನ ಕನ್ನಡಪರ ಸಂಘಟಕರು ಮಾದರಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನಗರಸಭೆ ಆಯುಕ್ತ ಪಿ.ಸುಬ್ರಮಣ್ಯ ಶ್ರೇಷ್ಠಿ ಮಾತನಾಡಿ, ಕನ್ನಡ ನಾಡು- ನುಡಿಗಾಗಿ ಅನೇಕರು ತಮ್ಮ ಜೀವನ ಸವೆಸಿದ್ದಾರೆ. ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಅಚ್ಚ ಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳ ಹರಿಯುವ ಸಾಧುಸಂತರ ದಾಸರು ಶಿವಶರಣರು ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ ಎಂದರು.

ಸಿಪಿಐ ಟಿ. ದೇವಾನಂದ್, ಆಯುಕ್ತ ಪಿ ಸುಬ್ರಮಣ್ಯಶ್ರೇಷ್ಠಿ, ಕೆಂಚನಹಳ್ಳಿ ಮಾಂತೇಶ್, ದೇವರಾಜ್, ನಾಗರಾಜ್ ಅವರಿಗೆ ಸಂಘದ ಸದಸ್ಯರಿಂದ ಗೌರವ ಸಮರ್ಪಣೆ ಮಾಡಲಾಯಿತು.

ಕೆಂಚನಹಳ್ಳಿ ಮಹಾಂತೇಶ್, ಶಿವ ಡಾಬಾ ಮಾಲೀಕ ಜಗದೀಶ್, ಪತ್ರಕರ್ತ ಜಿ.ಕೆ. ಪಂಚಾಕ್ಷರಿ, ರಾಘವೇಂದ್ರ ಐರಣಿ, ಶ್ರೀನಿವಾಸ್ ಚಾಕಣಿ, ರಾಘು ಕೆ. ಹನುಮಂತಪ್ಪ ಕೆಂಚಗೊಂದಿ, ತಾಯಿರ್, ಅಲ್ತಾಫ್, ರಿಯಾಜ್, ರಮೇಶ್ ಭಂಡಾರಿ, ಹನುಮಂತಪ್ಪ ಐರಣಿ, ಮಂಜುಳಮ್ಮ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು. - - - -02ಎಚ್‍ಆರ್‍ಆರ್01:

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಿಪಿಐ ಟಿ.ದೇವಾನಂದ್, ಆಯುಕ್ತ ಪಿ ಸುಬ್ರಮಣ್ಯಶ್ರೇಷ್ಠಿ, ಕೆಂಚನಹಳ್ಳಿ ಮಾಂತೇಶ್, ದೇವರಾಜ್, ನಾಗರಾಜ್ ಅವರಿಗೆ ಗೌರವಿಸಲಾಯಿತು.