ಸಾರಾಂಶ
-ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ. ರಾಜ್ ಜನ್ಮ ದಿನ
---ಕನ್ನಡಪ್ರಭ ವಾರ್ತೆ ಹಿರಿಯೂರು
ಆಡು ಮುಟ್ಟದ ಸೊಪ್ಪಿಲ್ಲ ಡಾ. ರಾಜ್ ಅಭಿನಯಿಸದ ಪಾತ್ರಗಳಿಲ್ಲ ಎಂಬ ಮಾತಿನಂತೆ ಡಾ. ರಾಜ್ ಕುಮಾರ್ ಅವರು ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ನಟಿಸದೇ ಇರುವ ಪಾತ್ರಗಳಿಲ್ಲ. ಹಾಗಾಗಿ, ಅವರು ಬರೀ ನಟರಾಗಿ ಬದುಕದೆ ಕನ್ನಡ ನಾಡಿನ ಆಸ್ತಿಯಾಗಿ ಉಳಿದಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಯ್ಯ ಅಭಿಪ್ರಾಯಪಟ್ಟರು.ನಗರದ ವೀನಸ್ ಹಾಲ್ ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ. ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಒಂದು ಕುಗ್ರಾಮದಿಂದ ಬಂದ ಮುತ್ತುರಾಜ್ ಅವರು ರಾಜಕುಮಾರರಾಗಿ ಬೆಳೆದದ್ದು ಇತಿಹಾಸ. ಎಚ್ಎಎಲ್ ಸಿಂಹ ಅವರ ಮಾರ್ಗದರ್ಶನದಲ್ಲಿ ಬೇಡರ ಕಣ್ಣಪ್ಪನಿಂದ ಶಬ್ಧವೇದಿ ಚಲನಚಿತ್ರದವರೆಗೆ ಸುಮಾರು 205ಕ್ಕೂ ಹೆಚ್ಚು ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ಚಲನಚಿತ್ರಗಳಲ್ಲಿ ನಟಿಸಿದ್ದು ಸಣ್ಣ ಸಾಧನೆಯಲ್ಲ. ಅವರ ಪ್ರತಿ ಚಲನಚಿತ್ರಗಳಲ್ಲಿ ಮಾನವೀಯ ಮೌಲ್ಯಗಳನ್ನು, ಸಮಾಜ ತಿದ್ದುವ ಸಂದೇಶಗಳನ್ನು ಕಾಣಬಹುದು. ಅವರ ಚಿತ್ರಗಳಲ್ಲಿರುವ ಪ್ರೀತಿ, ಪ್ರೇಮ, ಕೌಟುಂಬಿಕ ಸೌಹಾರ್ದತೆ, ಮನುಷ್ಯತ್ವದ ಗುಣಗಳನ್ನು ನಾಡಿನ ಜನರು ಪಾಲನೆ ಮಾಡುತ್ತಾ ಬಂದಿದ್ದಾರೆ. ಅಭಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ನಟ ರಾಜ್ ಕುಮಾರ್ ಎಂದರು.ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಜಿ .ರಂಗಸ್ವಾಮಿ ಸಕ್ಕರ ಮಾತನಾಡಿ, ಪದ್ಮಭೂಷಣ ಡಾ. ರಾಜಕುಮಾರ್ ಅವರು ಕನ್ನಡ ನಾಡಿನ ಆರಾಧ್ಯ ದೈವ. ಅವರಲ್ಲಿದ್ದ ಸರಳತೆ, ವಿನಯವಂತಿಕೆ, ಅಭಿನಯ, ಗಾಯನ ಅಭಿಮಾನಿಗಳಲ್ಲಿ ಸ್ಫೂರ್ತಿ ತುಂಬುತ್ತಿತ್ತು.
ಕನ್ನಡ ಸಂಸ್ಕೃತಿಗೆ ಒತ್ತುಕೊಟ್ಟು ರಣಧೀರ ಕಂಠೀರವ,ಶ್ರೀ ಕೃಷ್ಣದೇವರಾಯ, ಇಮ್ಮಡಿ ಪುಲಕೇಶಿ, ಮಯೂರ, ಕನಕದಾಸರು, ಸರ್ವಜ್ಞ, ಬಬ್ರುವಾಹನ, ಹಿರಣ್ಯಕಶಿಪು, ಕವಿರತ್ನ ಕಾಳಿದಾಸ, ಸಂತ ಕಬೀರದಂತಹ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ಜೀವ ತುಂಬುವ ಅನುರಾಗ ಅರಳಿತು, ಧ್ರುವತಾರೆಯಂತಹ ಚಿತ್ರದ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಕನ್ನಡದ ಅಸ್ಮಿತೆ ಉಳಿಸಿದ್ದಾರೆ. ಗೋಕಾಕ್ ಚಳುವಳಿಗೆ ಧುಮುಕಿ ಕನ್ನಡ ಭಾಷಾ ಬೆಳವಣಿಗೆಗೆ ದುಡಿದಿದ್ದಾರೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ರಾಜ್ ಕುಮಾರ್ ಅವರ ಚಲನಚಿತ್ರಗಳು ಯುವಕರಿಗೆ ಸ್ಫೂರ್ತಿ ನೀಡಿ ಈ ನಾಡಿನ ನೆಲ ಜಲ ಸಂಪತ್ತು ಕಾಪಾಡುವ, ಗೌರವಿಸುವ ಹಂಬಲ ಹುಟ್ಟುವಂತೆ ಮಾಡುತ್ತಿದ್ದವು. ಹಾಗೆಯೇ ಉದ್ಯೋಗದಲ್ಲಿದ್ದ ಯುವಕರು ಕೃಷಿ ಮಾಡಲು ಹಳ್ಳಿಗಳಿಗೆ ಹಿಂತಿರುಗಿದ ಪ್ರಸಂಗಗಳು ಆಗಿನ ಕಾಲಘಟ್ಟದಲ್ಲಿ ನಡೆದಿವೆ. ಅವರ ಚಲನಚಿತ್ರಗಳಲ್ಲಿ ಧೂಮಪಾನ, ಮದ್ಯಪಾನ, ಅಶ್ಲೀಲತೆ ದೃಶ್ಯಗಳಿಗೆ ಅವಕಾಶ ನೀಡದೆ ಉತ್ತಮ ಕಥೆಗಳಿಗೆ ಆದ್ಯತೆ ನೀಡುತ್ತಿದ್ದರು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಸಿ.ರಾಮಚಂದ್ರಪ್ಪ, ಮಾಜಿ ಅಧ್ಯಕ್ಷ, ಧನಂಜಯ ಕುಮಾರ್,ಕೋಶಾಧ್ಯಕ್ಷ ಜಿ. ಪ್ರೇಮ್ ಕುಮಾರ್, ಗೌರವ ಕಾರ್ಯದರ್ಶಿ ಹೆಚ್. ಕೃಷ್ಣಮೂರ್ತಿ, ಜೆ.ನಿಜಲಿಂಗಪ್ಪ, ಗಡಾರಿ ಕೃಷ್ಣಪ್ಪ, ಪಿ. ತಿಪ್ಪೇಸ್ವಾಮಿ, ಪ್ರಶಾಂತ್ ಇದ್ದರು. --
ಫೋಟೊ: ನಗರದ ವೀನಸ್ ಹಾಲ್ ನಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ರಾಜಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.