ಸಾರಾಂಶ
ನಗರದ ರಾಜ್ ಸ್ಟುಡೀಯೋ ಮುಂಭಾಗ ಡಾ. ರಾಜ್‌ಕುಮಾರ್ ರವರ 97ನೇ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪರಭಾಷೆ ಚಿತ್ರಗಳಲ್ಲಿ ಹಲವಾರು ಅವಕಾಶಗಳಿದ್ದರೂ, ಅವುಗಳ ವ್ಯಾಮೋಹಕ್ಕೆ ಒಳಗಾಗದ ಡಾ. ರಾಜ್‌ಕುಮಾರ್ ಸಂಪೂರ್ಣವಾಗಿ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಾಂಬೆ ಸೇವೆಗೆ ಮುಡಿಪಾದವರು ಎಂದು ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ಸಂಸ್ಥಾಪಕ ಡಾ. ಜೆ.ಪಿ.ಕೃಷ್ಣೇಗೌಡ ಹೇಳಿದರು.ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ರಾಜ್ ಸ್ಟುಡೀಯೋ ಮುಂಭಾಗದಲ್ಲಿ ಗುರುವಾರ ಏರ್ಪಡಿಸಿದ್ದ ಡಾ. ರಾಜ್‌ಕುಮಾರ್ ರವರ 97ನೇ ಜನ್ಮ ದಿನಾಚರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷೆಯಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅವರು ಗಾಯನ ಕ್ಷೇತ್ರಕ್ಕೂ ಕಾಲಿರಿಸಿ, ತಮ್ಮ ಅದ್ಬುತ ಕಂಠದಿಂದ ಇಡೀ ಭಾರತೀಯ ಚಿತ್ರಲೋಕವನ್ನು ಬೆರಾಗಿಸಿದ್ದರು. ನಾದಮಯ ಚಿತ್ರಗೀತೆಗೆ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಕೊಂಡ ಕೀರ್ತಿ ಮೊಟ್ಟಮೊದಲು ಡಾ. ರಾಜ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ಡಾ. ರಾಜ್‌ಕುಮಾರ್ ಎಂದರೆ ವಿನಯ, ವಿಧೇಯತೆ ಹಾಗೂ ವೈಖರಿಗೆ ಭೂಷಣದಂತೆ. ಹಳೇಗನ್ನಡ, ಹೊಸಗನ್ನಡ ಹಾಗೂ ವರ್ತಮಾನದ ಕನ್ನಡವನ್ನು ಉಚ್ಛರಿಸುವ ಹಾಗೂ ನಡವಳಿಕೆ ವಿಸ್ಮಯವಾಗಿತ್ತು. ಮಿಗಿಲಾಗಿ 70ನೇ ವಯಸ್ಸಿನಲ್ಲೂ ಇಪ್ಪತ್ತರ ಹರೆಯನಂತೆ ಎಲ್ಲರನ್ನು ನಗಿಸುವ ನಟನಾ ಸಾಮರ್ಥ್ಯ ಹೊಂದಿದ್ದರು ಎಂದರು.ಸರಳ, ಸಜ್ಜನಿಕೆ ಅಳವಡಿಸಿಕೊಂಡಿದ್ಧ ಡಾ. ರಾಜ್‌ಕುಮಾರ್ ಕನ್ನಡನಾಡಿನ ಅತಿದೊಡ್ಡ ಆಸ್ತಿ. ನಿರ್ಮಾಪಕರು, ನಿರ್ದೇಶ ಕರು, ಸಂಗೀತ ರಚನೆಕಾರರ ನಡುವಿನ ಒಡನಾಟ ಅದ್ಬುತವಾಗಿತ್ತು. ಎಲ್ಲರೊಂದಿಗೆ ಸ್ನೇಹ, ಪ್ರೀತಿ ವಿಶ್ವಾಸದಿಂದ ಮಾತನಾಡುವ ಬಾಂಧವ್ಯ ಹುಟ್ಟಿನಿಂದಲೇ ರೂಢಿಸಿಕೊಂಡಿದ್ಧ ಅವರ ನೆನಪುಗಳಿಗೆ ಎಂದಿಗೂ ಸಾವಿಲ್ಲ ಎಂದು ಹೇಳಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಸಮಾರಂಭದ ಆಯೋಜಕ, ಗಾಯಕ ಎ.ಎನ್.ಮೂರ್ತಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕಾಶ್ಮೀರದಲ್ಲಿ ಉಗ್ರಗ್ರಾಮಿಗಳ ಗುಂಡೇಟಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ವಕೀಲ ವಿ.ಕೆ.ರಘು, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಡಾ. ಚಂದ್ರ ಶೇಖರ್‌ಸರ್ಜಾ, ಪತ್ರಕರ್ತರಾದ ಅನಿಲ್ ಆನಂದ್, ರಾಜೇಶ್, ಗೋಪಿ, ಉಮೇಶ್, ಛಾಯಾಗ್ರಾಹಕ ಎ.ಎನ್.ಪ್ರಸನ್ನ, ಶಶಿ, ಉಮಾಶಂಕರ್, ಕಸಾಪ ನಗರಾಧ್ಯಕ್ಷ ಸಚಿನ್ ಸಿಂಗ್, ಶಿವರಾಜ್ ಉಪಸ್ಥಿತರಿದ್ದರು. 24 ಕೆಸಿಕೆಎಂ 3ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯ ರಾಜ್ ಸ್ಟುಡೀಯೋ ಮುಂಭಾಗದಲ್ಲಿ ಗುರುವಾರ ಡಾ. ರಾಜ್‌ಕುಮಾರ್ ರವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.