ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಡಾ.ರಾಜ್‌ಕುಮಾರ್ ಸಿನಿಮಾಗಳು ಜೀವನ ಪಾಠದಂತಿದ್ದು, ಅವರ ಪ್ರತಿ ಪಾತ್ರ ಸಮಾಜವನ್ನು ತಿದ್ದುವ ರೀತಿಯಲ್ಲಿವೆ ಹಾಗೂ ಬದುಕಿಗೆ ಶಕ್ತಿ ತುಂಬುವುದರೊಂದಿಗೆ ಜಾಗೃತಿ ಮೂಡಿಸುವಂತಿವೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸ್ಮರಿಸಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ಶುಕ್ರವಾರ ಏರ್ಪಡಿಸಿದ್ದ ಪದ್ಮಭೂಷಣ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ, ಕನ್ನಡದ ವರನಟ ಡಾ.ರಾಜ್ ಕುಮಾರ್ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವತಾ ಮನುಷ್ಯ, ಕಸ್ತೂರಿ ನಿವಾಸ, ಸತ್ಯ ಹರಿಶ್ಚಂದ್ರ, ಸತ್ಯಕ್ಕೆ ಸಾವಿಲ್ಲ, ಹೀಗೆ ಅವರ ಎಲ್ಲ ಸಿನಿಮಾಗಳು ಕೌಟುಂಬಿಕ ಮೌಲ್ಯ, ಸಾಮಾಜಿಕ ಜವಾಬ್ದಾರಿ ಮತ್ತು ದುಶ್ಚಗಳನ್ನು, ಅನಿಷ್ಟ ಪದ್ದತಿಗಳನ್ನು ವಿರೋಧಿಸುವ, ನಿಸ್ವಾರ್ಥ ಸೇವೆ, ತ್ಯಾಗದ ಗುಣಗಳು, ದುಡಿಮೆ ಗೌರವ ತರುವ ತತ್ವಗಳನ್ನು ಹೊಂದಿದ್ದು ಬಂಗಾರದ ಮನುಷ್ಯ ಚಿತ್ರ ನೋಡಿದ ಹಲವಾರು ಯುವಕರು ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಸ್ಮರಿಸಿದರು.
ಅವರ ಸಿನೆಮಾಗಳಲ್ಲಿ ವಿಶೇಷವಾಗಿ ಕನ್ನಡ ಭಾಷಾ ಪ್ರೇಮ, ದೇಶ ಭಕ್ತಿಯನ್ನು ಕಾಣಬಹುದು. ಹಾಗೂ ಮಾನವೀಯ ಗುಣಗಳೊಂದಿಗೆ ಸರಳತೆಯನ್ನು ಕಾಣಬಹುದಾಗಿದೆ. ರಾಜ್ ಕುಮಾರ್ ಎಂದರೆ ಒಂದು ಸಂಸ್ಕೃತಿ, ಜೀವನ, ಸಾಹಿತ್ಯ ಎಲ್ಲವೂ ಆಗಿದ್ದು ಅವರು ಕಲಾ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಸಮಾಜದ ಅಂಕುಡೊಂಕನ್ನು ಕಲೆಯ ಮೂಲಕ ತಿದ್ದುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.ಡಾ.ರಾಜ್ ಕುಮಾರ್ ಕಲಾಭಿಮಾನಿಗಳ ಆರಾಧ್ಯದೈವ. ಅವರ ಸಿನಿಮಾ ಹಾಡುಗಳೆಂದರೆ ಜೀವನ ಸಂದೇಶ ಸಾರುವ ಅರ್ಥ ಗರ್ಭಿತ ಗಾಥೆಗಳು. ಅವರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್ ಮನಸ್ಸನ್ನು ಸಹ ಗೆದ್ದ ವ್ಯಕ್ತಿಯಾರಾದರೂ ಇದ್ದರೆ ಅದು ರಾಜ್‌ಕುಮಾರ್ ಎಂದರು.
ಮನುಕುಲಕ್ಕೆ ಅಗತ್ಯವಾದ ಸತ್ಯ, ಪ್ರಾಮಾಣಿಕತೆ, ದಯೆ, ಪ್ರೀತಿ, ದೇಶಭಕ್ತಿ ಹೀಗೆ ಎಲ್ಲಾ ಸಂಗತಿಗಳು ಅವರ ಸಿನಿಮಾಗಳಲ್ಲಿ ಇದೆ. ಗೋಕಾಕ್ ವರದಿ ಚಳವಳಿ ವೇಳೆ ಡಾ. ರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿದ್ದರು ಎಂದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಕಟ್ಟಿ ಮಾತನಾಡಿ, 2006 ರ ಏ.12 ರಂದು ರಾಜ ಕುಮಾರ್‌ರವರು ಅಗಲಿದ ದಿನವಾಗಿದ್ದು, ಅದಾದ ನಾಲ್ಕು ದಿನ ನಂತರ ನನಗೆ ಐಎಎಸ್ ಸಂದರ್ಶನ ಇತ್ತು. ಸಂದರ್ಶಕರು ನನಗೆ, ಒಬ್ಬ ನಟ ನಿಧನ ಆಗಿದ್ದಕ್ಕೆ ನಿಮ್ಮ ರಾಜ್ಯದಲ್ಲಿ ಅಷ್ಟು ಗಲಾಟೆ ಮಾಡಿದ್ದಾರೆ ಇದಕ್ಕೆ ಕಾರಣವೇನೆಂದು ಕೇಳಿದರು. ಆಗ ನಾನು ಡಾ.ರಾಜ್‌ಕುಮಾರ್ ಅವರ ಕುರಿತು ಹೇಳಿದಾಗ ಅವರು ಡಾ.ರಾಜ್‌ಕುಮಾರ್ ಅವರ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳಿದ್ದರೆ ತಿಳಿಸಿ ತಾವು ಓದುವುದಾಗಿ ತಿಳಿಸಿದರು. ಈ ಘಟನೆ ನನ್ನ ಜೀವನದಲ್ಲಿ ಚಿರಸ್ಮರಣೆಯಾಗಿ ಉಳಿದಿದೆ ಎಂದರು.
ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ರಾಜ್ಯಾಧ್ಯಕ್ಷ ಡಾ.ಎಚ್.ಸುರೇಶ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಎಂ.ಟಿ.ಭಾಗ್ಯ, ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆಯ ಜಿಲ್ಲಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಬಿ.ಉಮೇಶ್, ರಾಜ್‌ಕುಮಾರ್ ಗೀತೆಗಳನ್ನು ಗಾಯನ ಮಾಡಿದ ಸಾಹಿತಿ ಡಾ.ಶಶಿಕಾಂತ್ ಜೈನ್ ಮತ್ತು ಎಂಸಿಎ ವ್ಯವಸ್ಥಾಪಕ ಸಿದ್ದೇಶ್, ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.