ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕದ ನೆಲದಲ್ಲಿ ನಡೆದ ಮಾತೃಭಾಷಾ ಹೋರಾಟಗಳಿಗೆ ವರನಟ ಡಾ.ರಾಜಕುಮಾರ್ ಅವರು ಸ್ಫೂರ್ತಿಯಾಗಿದ್ದರೆಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು.ನಗರದ ಪತ್ರಿಕಾ ಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ಇಂದು ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಓದುತ್ತಿದ್ದಾರೆ ಎಂದರೆ ಅದಕ್ಕೆ ಡಾ.ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿ ಕಾರಣ. ಅಂದಿನ ಸರ್ಕಾರಗಳ ಮೇಲೆ ಒತ್ತಡ ಹೇರಿ ಕನ್ನಡಕ್ಕೆ ಮೊದಲ ಸ್ಥಾನ ಸಿಗುವಂತೆ ಮಾಡಿದ ಅವರ ಹೋರಾಟ ಅವಿಸ್ಮರಣೀಯ ಎಂದು ನೆನಪಿಸಿಕೊಂಡರು.
ರಾಜ್‍ಕುಮಾರ್ ಅವರು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮಾನವೀಯ ಗುಣಗಳು ಮತ್ತು ಮೌಲ್ಯಗಳು ಇಂದಿನ ತಲೆಮಾರಿಗೆ ದಾರಿದೀಪವಾಗಿವೆ. ರಾಮಾಯಣ, ಮಹಾಭಾರತದ ಪಾತ್ರಗಳಿರಲಿ, ಕಾದಂಬರಿ ಆಧಾರಿತ ಸಿನಿಮಾಗಳಿರಲಿ ಅವರು ಮಾಡದ ಪಾತ್ರಗಳೇ ಇಲ್ಲ. ಅಂದಿನ ಕಾಲದಲ್ಲಿ ಚಲನಚಿತ್ರ ಮತ್ತು ನಾಟಕಗಳ ಮೂಲಕವೇ ಜನರು ಜೀವನದ ಗುರಿಯನ್ನು ಕಂಡುಕೊಳ್ಳುತ್ತಿದ್ದರು ಮತ್ತು ಅದರಲ್ಲಿ ಡಾ.ರಾಜ್‍ಕುಮಾರ್ ಅವರ ಪಾತ್ರ ಬಹಳ ದೊಡ್ಡದಾಗಿತ್ತು. ಡಾ.ರಾಜ್‍ಕುಮಾರ್ ಅವರು ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಸಿನಿಮಾಗಳನ್ನು ನೋಡಿದಾಗ ನಾವೆಲ್ಲರೂ ಅಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಮನೋಭಾವ ಮೂಡುತ್ತದೆ ಎಂದು ಹೇಳಿದರು.ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ವರನಟ ಡಾ.ರಾಜ್‍ಕುಮಾರ್ ಅವರು ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳು ಮತ್ತು ಅವರ ಸರಳ ವ್ಯಕ್ತಿತ್ವ ಇಂದಿಗೂ ನಮಗೆಲ್ಲರಿಗೂ ಆದರ್ಶಪ್ರಾಯ.
80ರ ದಶಕದಲ್ಲಿ ರಾಜಣ್ಣ ಚಳ್ಳಕೆರೆ ಪ್ರೌಢಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೆರೆದಿದ್ದ ಜನಸಾಗರವನ್ನು ಈ ವೇಳೆ ಶಾಸಕರು ಸ್ಮರಿಸಿದರು.
ಡಾ.ರಾಜ್ ಅವರಿಗೆ ಹಣದ ವ್ಯಾಮೋಹ ಇರಲಿಲ್ಲ. ಅವರ ಈ ಯಶಸ್ಸಿನ ಹಿಂದೆ ಪತ್ನಿ ಪಾರ್ವತಮ್ಮ ಅವರ ಶ್ರಮ ದೊಡ್ಡದಿದೆ. ಅವರಿಬ್ಬರೂ ಆದರ್ಶ ದಂಪತಿಗಳಾಗಿ ಬದುಕಿದವರು. ರಾಜಣ್ಣ ಅವರ ಸಿನಿಮಾಗಳನ್ನು ನೋಡಿ ಎಷ್ಟೋ ಜನರು ಕೃಷಿಕರಾದರು, ಯೋಗಾಭ್ಯಾಸ ಕಲಿತರು. ಅವರ ಹಾಡುಗಳು ಇಂದಿಗೂ ಜನರ ಮನದಲ್ಲಿ ಹಸಿರಾಗಿವೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಡಾ.ರಾಜ್‍ಕುಮಾರ್ ಅವರಿಗೂ ಚಿತ್ರದುರ್ಗಕ್ಕೂ ಅತ್ಯಂತ ಹಳೆಯ ಮತ್ತು ಗಾಢವಾದ ಸಂಬಂಧವಿದೆ. ರಾಜ್‍ಕುಮಾರ್ ಅವರು ಚಿತ್ರರಂಗಕ್ಕೆ ಬರುವ ಮುನ್ನ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಚಿತ್ರದುರ್ಗದ ಎಸ್‍ಎಲ್‍ಎನ್ ಥಿಯೇಟರ್ ಬಳಿ ಅನೇಕ ವರ್ಷಗಳ ಕಾಲ ನೆಲೆಸಿದ್ದರು. ಇಂದಿನ ಒನಕೆ ಓಬವ್ವ ಕ್ರೀಡಾಂಗಣ ನಿರ್ಮಾಣಕ್ಕೆ ಹಣದ ಅವಶ್ಯಕತೆಯಿದ್ದಾಗ ಡಾ.ರಾಜ್‍ಕುಮಾರ್ ಅವರು ಚಿತ್ರದುರ್ಗದಲ್ಲಿ ‘ರಾಜ್‍ಕುಮಾರ್ ನೈಟ್’ ನಡೆಸಿಕೊಟ್ಟು, ಯಾವುದೇ ಸಂಭಾವನೆ ಪಡೆಯದೆ ಕ್ರೀಡಾಂಗಣಕ್ಕೆ ಆರ್ಥಿಕ ಸಹಕಾರ ನೀಡಿದ್ದರು ಎಂದು ಹೇಳದರು.ಡಾ.ರಾಜ್‍ಕುಮಾರ್ ಅವರ ಕುರಿತು ಉಪನ್ಯಾಸ ನೀಡಿದ ಚಿತ್ರದುರ್ಗ ಆಕಾಶವಾಣಿಯ ಡಾ.ನವೀನ್ ಮಸ್ಕಲ್, ಡಾ.ರಾಜ್‍ಕುಮಾರ್ ಸಿನಿಮಾ ಕಲಾವಿದರು ಮಾತ್ರವಲ್ಲ. ಅವರು ಸಿನಿಮಾದೊಳಗಿದ್ದು, ಸಿನಿಮಾವನ್ನು ಮೀರಿದ ಸಾಂಸ್ಕೃತಿಕ ವ್ಯಕ್ತಿತ್ವದವರಾಗಿ ಬದುಕಿದವರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಬಲವಲ್ಲದ ವಲಯದಿಂದ ಬಂದು ಸ್ವ ಸಾಮಥ್ರ್ಯದಿಂದಲೇ ಎತ್ತರಕ್ಕೇರಿದ ಅವರು ಸಾಮಾಜಿಕವಾಗಿಯು ಮುಖ್ಯ ಸಾಧಕರು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ವಿನಾಯಕ ತೊಡರನಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಂಜಿನಪ್ಪ ಇದ್ದರು. ಕೆ.ಗಂಗಾಧರ್ ಮತ್ತು ಸಂಗಡಿಗರು ಡಾ.ರಾಜ್‍ಕುಮಾರ್ ಚಲನಚಿತ್ರ ಗೀತೆಗಳ ಗಾಯನ ನಡೆಸಿಕೊಟ್ಟರು.