ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಪ್ರವಾಸಿಗರ ಪ್ರೇಕ್ಷಣೀಯ ಹಾಗೂ ಪುಣ್ಯಕ್ಷೇತ್ರ ಮುತ್ತತ್ತಿಯ ಆರಾಧ್ಯ ದೇವ ಮುತ್ತತ್ತಿರಾಯನ ಸನ್ನಿಧಿಯಲ್ಲಿ ರಾಷ್ಟ್ರೀಯ ಪಂಚಾಯ್ತಿ ದಿನದ ಅಂಗವಾಗಿ ವರನಟ ಡಾ.ರಾಜ್ ಕುಮಾರ್ ಜನ್ಮ ದಿನಾಚರಣೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.ಮುತ್ತತ್ತಿ ಗ್ರಾಮದ ಡಾ.ರಾಜ್ ಕುಮಾರ್ ಸಮುದಾಯ ಭವನದಲ್ಲಿ ಕೇಕ್ ಕತ್ತರಿಸುವ ಮೂಲಕ ಡಾ.ರಾಜ್ ಕುಮಾರ್ ರವರ 97ನೇ ಹುಟ್ಟುಹಬ್ಬ ಮತ್ತು ಪಂಚಾಯತ್ ರಾಜ್ ದಿನ, ಪ್ಲಾಸ್ಟಿಕ್ ಮುಕ್ತ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮಕ್ಕೆ ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, 1993 ರ ಪಂಚಾಯರ್ ರಾಜ್ ತಿದ್ದುಪಡಿ ಕಾಯ್ದೆ ಜಾರಿಯಾಗಿ ಇಂದಿಗೆ 32 ವರ್ಷಗಳಾಗಿವೆ. ಗ್ರಾಮೀಣ ಪ್ರದೇಶದ ಜನರಿಗೆ ಸೌಕರ್ಯಗಳನ್ನು ಒದಗಿಸಲು ಅನುಕೂಲವಾಗಿದೆ. ಅದರ ಸ್ಮರಣಾರ್ಥ ಎಲ್ಲಾ ಸಾರ್ವಜನಿಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಪಂಚಾಯತ್ ರಾಜ್ ದಿವಸ ಆಚರಿಸಲಾಗಿದೆ ಎಂದರು.
ದೇವಸ್ಥಾನದ ಆವರಣದ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ನಿಷೇಧ, ಭಕ್ತರಿಗೆ ಪ್ಲಾಸ್ಟಿಕ್ ನೀಡದಂತೆ ತಿಳಿವಳಿಕೆ ನೀಡಬೇಕು, ಕಸವನ್ನು ಕಸದ ಬುಟ್ಟಿಯಲ್ಲೇ ಹಾಕುವುದು, ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಸಹಕರಿಸುವಂತೆ ಕೋರಲಾಯಿತು.ಇದೇ ವೇಳೆ ಮುತ್ತತ್ತಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಮುಖಾಂತರ ಹೊರಟು ಪ್ಲಾಸ್ಟಿಕ್ ಬಳಕೆ ನಿಲ್ಲಲಿ, ರಾಷ್ಟ್ರೀಕೃತ ಸಮಾಜ ನಮ್ಮದು, ಪ್ಲಾಸ್ಟಿಕ್ ಬಳಸಿದರೆ 500 ರು.ದಂಡ ವಿಧಿಸುವುದು, ಪ್ಲಾಸ್ಟಿಕ್ ಬಳಕೆಯಿಂದ ಮಾರಕ ರೋಗಗಳು ಮತ್ತು ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಮುಂದಿನ ಪೀಳಿಗೆಗೆ ಸೇರಿ ಡಾ.ರಾಜ್ ಕುಮಾರ್ ಜನ್ಮದಿನದಂದು ರಾಜ್ ಕುಮಾರ್ ಹೆಸರಿನಲ್ಲಿ ಪ್ಲಾಸ್ಟಿಕ್ ಮುಕ್ತ ಮುತ್ತತ್ತಿ ಮತ್ತು ಸಮುದಾಯ, ಕೆರೆ, ನಾಲಾ, ಮಣ್ಣು, ನೀರು, ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.ಈ ವೇಳೆ ಪಿಡಿಒ ಮಲ್ಲಿಕಾರ್ಜುನ್, ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕ ಸುನಿಲ್ ಕುಮಾರ್, ಕಾರ್ಯದರ್ಶಿ ಕಾಳರಾಜು, ಬಿಲ್ ಕಲೆಕ್ಟರ್ ಎನ್.ಆರ್.ಎಲ್.ಎಂ ಯೋಜನೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ, ವಲಯ ಮೇಲ್ವಿಚಾರಕ ನಿಂಗರಾಜು, ಸಾರ್ವಜನಿಕರು ಹಾಗೂ ಗ್ರಾಪಂ ಸಂತೋಷ್ ಕುಮಾರ್ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.