ಜ್ಞಾನಪೀಠಕ್ಕೆ ಅರ್ಹರಾಗಿದ್ದ ಡಾ.ಎಸ್‌.ಎಲ್‌.ಭೈರಪ್ಪ: ಮೀರಾ

| Published : Sep 29 2025, 01:03 AM IST

ಜ್ಞಾನಪೀಠಕ್ಕೆ ಅರ್ಹರಾಗಿದ್ದ ಡಾ.ಎಸ್‌.ಎಲ್‌.ಭೈರಪ್ಪ: ಮೀರಾ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಶ್ರೇಷ್ಠ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದ ಡಾ.ಎಸ್.ಎಲ್.ಭೈರಪ್ಪ ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದರು. ಆದರೆ, ಅದೇಕೋ ಆ ಪ್ರಶಸ್ತಿ ಅವರಿಗೆ ಒಲಿದು ಬರಲೇ ಇಲ್ಲ. ಅವರು ರಚಿಸಿದ ಆವರಣ ಕಾದಂಬರಿ 70 ಮುದ್ರಣ ಕಂಡು ಅಪಾರ ಜನಪ್ರಿಯತೆ ಗಳಿಸಿದೆ. ಒಂದೇ ವರ್ಷದಲ್ಲಿ 15 ಬಾರಿ ಮುದ್ರಣ ಕಂಡ ಅಪರೂಪದ ಕಾದಂಬರಿ ಎನಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾದಂಬರಿ ಲೋಕದ ಸಾಮ್ರಾಟ ಡಾ.ಎಸ್.ಎಲ್. ಭೈರಪ್ಪ ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದರೂ, ಪ್ರಶಸ್ತಿಯಿಂದ ವಂಚಿತರಾದರೆಂಬ ನೋವು ಕನ್ನಡಿಗರನ್ನು ಕಾಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮೀರಾ ಶಿವಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು.

ನಗರದ ಬಂದಿಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಿದ್ದ ಅಗಲಿದ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಶ್ರೇಷ್ಠ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದ ಡಾ.ಎಸ್.ಎಲ್.ಭೈರಪ್ಪ ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾಗಿದ್ದರು. ಆದರೆ, ಅದೇಕೋ ಆ ಪ್ರಶಸ್ತಿ ಅವರಿಗೆ ಒಲಿದು ಬರಲೇ ಇಲ್ಲ. ಅವರು ರಚಿಸಿದ ಆವರಣ ಕಾದಂಬರಿ 70 ಮುದ್ರಣ ಕಂಡು ಅಪಾರ ಜನಪ್ರಿಯತೆ ಗಳಿಸಿದೆ. ಒಂದೇ ವರ್ಷದಲ್ಲಿ 15 ಬಾರಿ ಮುದ್ರಣ ಕಂಡ ಅಪರೂಪದ ಕಾದಂಬರಿ ಎನಿಸಿಕೊಂಡಿದೆ. ಅವರ ಅನೇಕ ಕೃತಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ. ಆದರೂ ಸರಸ್ವತಿ ಪುತ್ರನಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಲಿಲ್ಲವೆಂಬ ಕೊರಗು ಸಾಹಿತ್ಯ ಪ್ರಿಯರಲ್ಲಿದೆ ಎಂದರು.

ಡಾ.ಎಸ್.ಎಲ್ ಭೈರಪ್ಪ ಅವರು ಪಠ್ಯ ಪುಸ್ತಕ ಸಮಿತಿಯಲ್ಲಿ ಇದ್ದ ವೇಳೆ ಇತಿಹಾಸವನ್ನು ಮಕ್ಕಳಿಗೆ ತಪ್ಪಾಗಿ ಹೇಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ರಾಜೀನಾಮೆ ನೀಡಿ ಸಮಿತಿಯಿಂದ ಹೊರ ಬಂದಿದ್ದರು. ಅಷ್ಟೊಂದು ನಿಷ್ಟುರವಾದಿಗಳಾಗಿದ್ದರು. ಭೈರಪ್ಪನವರ ಸಾವು ಕೇವಲ ಕನ್ನಡ ಸಾರಸ್ವತ ಲೋಕಕ್ಕೆ ಮಾತ್ರವಲ್ಲ, ಭಾರತದ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟ ಉಂಟು ಮಾಡಿದೆ. ಅಂತಹ ಸೃಜನಾತ್ಮಕ ಸಾಹಿತಿಗಳ ಸಂಖ್ಯೆ ಪ್ರಸ್ತುತ ಹೆಚ್ಚಾಗಬೇಕಿದೆ. ಅವರ ಬದುಕು, ಆದರ್ಶ, ಬರವಣಿಗೆ ಯುವ ಸಾಹಿತಿಗಳಿಗೆ ಮಾರ್ಗದರ್ಶಕವಾಗಬೇಕು ಎಂದರು.

ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಭೈರಪ್ಪನವರು ತುಂಬಾ ಸಜ್ಜನಿಕೆಯ ವ್ಯಕ್ತಿ. ತುಂಬಾ ಬಡತನದಲ್ಲಿ ಬೆಳೆದು ಬಂದವರು. ತಮ್ಮ ತಾಯಿಯ ಪ್ರಭಾವದಿಂದ ತಮ್ಮಲ್ಲಿ ಸೃಜನಾತ್ಮಕತೆ ಬೆಳೆದು ಬಂದಿದೆ ಎಂದು ಅವರೇ ಹೇಳಿಕೊಂಡಿದ್ದರು. 1961ರಲ್ಲಿ ಧರ್ಮಶ್ರೀ ಕೃತಿ ರಚನೆ ಮಾಡಿದರು. ಅದು ಹಿಂದೂ ಮತ್ತು ಕ್ರಿಶ್ಚಿಯನ್ ಪ್ರೇಮಿಗಳ ಕಥೆಯನ್ನು ಹೇಳಿದರೆ, ಆನಂತರದಲ್ಲಿ ಬಂದ ಆವರಣ ಕಾದಂಬರಿ ಹಿಂದೂ ಮುಸ್ಲಿಂ ಪ್ರೇಮಿಗಳ ಕಥೆಯನ್ನು ಒಳಗೊಂಡಿತ್ತು. ಈ ಎರಡೂ ಕೃತಿಗಳಲ್ಲಿ ಸೌಹಾರ್ದತೆಯ ಸಂದೇಶ ಸಾರಿದ್ದರು ಎಂದರು.

ಗೃಹಭಂಗ ಮತ್ತು ದಾಟು ಕಾದಂಬರಿಗಳು ಭಾರತದ 14 ಭಾಷೆಗಳಿಗೆ ಅನುವಾದಗೊಂಡಿದೆ. ಭೈರಪ್ಪನವರ ಕಾದಂಬರಿಗಳು ಕನ್ನಡದಿಂದ ಸಂಸ್ಕೃತಕ್ಕೆ ಭಾಷಾಂತರಗೊಂಡಿರುವುದು ವಿಶೇಷವಾಗಿದೆ. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಅವರು ವೈಚಾರಿಕತೆಯನ್ನು ಪರಿಣಾಮಕಾರಿಯಾಗಿ ಕಾದಂಬರಿಗಳಲ್ಲಿ ಪ್ರತಿಪಾದಿಸಿದ್ದರು. ಆದರೆ, ಕೊನೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಧರ್ಮದ ಚೌಕಟ್ಟಿಗೆ ಬಂದು ನಿಲ್ಲುತ್ತಿದ್ದುದು ಅಚ್ಚರಿ ಮೂಡಿಸಿತ್ತು ಎಂದರು.

ಪ್ರೊ.ಎಂ.ವೈ.ಶಿವರಾಮು ಮಾತನಾಡಿ, ಭೈರಪ್ಪನವರು ಬದುಕಿದ್ದಾಗ ಅವರ ಬಗೆಗಿದ್ದ ಪರಿಕಲ್ಪನೆ ಬೇರೆಯಾಗಿದ್ದು. ಅವರು ವಿಧಿವಶರಾದ ಬಳಿಕ ಬೆಳಕಿಗೆ ಬಂದ ಅನೇಕ ವಿಚಾರಗಳು ಅವರ ಬಗೆಗಿದ್ದ ಅಭಿಪ್ರಾಯವನ್ನೇ ಬದಲಾಯಿಸುವಂತೆ ಮಾಡಿದವು. ಅವರ ಗೃಹಭಂಗ ಧಾರಾವಾಹಿಯಾಗಿ, ಮತದಾನ ಸಿನಿಮಾ ಆಗಿ ಮೂಡಿಬಂದಿದೆ. ಆವರಣ ಕಾದಂಬರಿಗೆ ಸಿಕ್ಕ ಜನಪ್ರಿಯತೆ ಅಷ್ಟಿಷ್ಟಲ್ಲ. ಸೂಜಿಗಲ್ಲಿನಂತೆ ಅದು ಎಲ್ಲರನ್ನೂ ಆಕರ್ಷಿಸಿತು ಎಂದರು.

ಶ್ರದ್ಧಾಂಜಲಿ ಸಭೆಯಲ್ಲಿ ಪ್ರೊ.ಮಂಜುನಾಥ್, ಪ್ರೊ.ಎಂ.ಆರ್.ಮಂಜು, ದ.ಕೋ.ಹಳ್ಳಿ ಚಂದ್ರಶೇಖರ್, ಚಂದ್ರಲಿಂಗು, ಪನ್ನೇದೊಡ್ಡಿ ಹರ್ಷ, ಮಹಾದೇವಸ್ವಾಮಿ, ಮಹದೇವಪ್ಪ, ಶಂಕರೇಗೌಡ ಇತರರಿದ್ದರು.