ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈಚೆಗೆ ನಡೆದ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಡಾ.ಧನಂಜಯ ಸರ್ಜಿ ಜನ ಮೆಚ್ಚುವಂತೆ ಸೇವೆ ಸಲ್ಲಿಸುವ ಮೂಲಕ ಪದವೀಧರರು ಹಾಗೂ ಜನರ ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಜಾತ್ಯಾತೀತ ಜನತಾದಳ ವತಿಯಿಂದ ಶನಿವಾರ ವಿಧಾನ ಪರಿಷತ್‌ಗೆ ಆಯ್ಕೆಯಾದ ಡಾ.ಧನಂಜಯ ಸರ್ಜಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಸಾಧನೆಯೊಂದಿಗೆ ಜನ ಮಾನಸದಲ್ಲಿರುವ ಡಾ.ಸರ್ಜಿ ಮುಂದಿನ ದಿನಗಳಲ್ಲಿಯೂ ಉತ್ತಮ ಸೇವೆ ಸಲ್ಲಿಸುತ್ತಾರೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಪದವೀಧರರ ಧ್ವನಿಯಾಗುವೆ:
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯೊಂದಿಗೆ ಇದು ಕಾರ್ಯಕರ್ತರ ಗೆಲುವು, ಪದವೀಧರರ ಗೆಲುವು, ಜೆಡಿಎಸ್, ಬಿಜೆಪಿ ಮೈತ್ರಿ ಶಕ್ತಿಯ ಗೆಲುವು, ಎಲ್ಲರ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಪರಿಷತ್ ನಲ್ಲಿ ಪದವೀಧರರ ಧ್ವನಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ , ಜಿಲ್ಲಾ ಜೆಡಿಎಸ್ ವತಿಯಿಂದ ಡಾ.ಧನಂಜಯ ಸರ್ಜಿಯವರಿಗೆ ಅಭಿನಂದನೆಗಳ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಕಾರ್ಯಾಧ್ಯಕ್ಷ ರಾಮಕೃಷ್ಣ, ಮಹಾ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್, ಯುವ ಜನತಾ ದಳ ಅಧ್ಯಕ್ಷ ಮಧು ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಎಸ್‌ಸಿ ಘಟಕ ಜಿಲ್ಲಾಧ್ಯಕ್ಷ ಕಾಂತರಾಜ್, ನಗರಾಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ವಕ್ತಾರ ನರಸಿಂಹ ಗಂಧದಮನೆ, ಯುವ ಜನತಾ ಜಿಲ್ಲಾ ಕಾರ್ಯಾಧ್ಯಕ್ಷ ನಿಖಿಲ್, ಮಾಜಿ ಎಪಿಎಂಸಿ ಉಪಾಧ್ಯಕ್ಷ ಮಹೇಶ್, ಮುಖಂಡ ವಿನಯ ಕುಮಾರ್, ಮಾಜಿ ನಗರ ಸಭಾ ಸದಸ್ಯ ಮಂಜುನಾಥ್, ವಿನಯ್, ಗೋಪಿ ಹಾಜರಿದ್ದರು.
--------------------------------ತೆರೆದ ವಾಹನದಲ್ಲಿ ಭರ್ಜರಿ ಮೆರವಣಿಗೆ
ನೈಋತ್ಯ ಪದವೀಧರರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿಯವರ ಕಾರ್ಯಕರ್ತರು ಶಿವಮೊಗ್ಗದಲ್ಲಿ ಶುಕ್ರವಾರ ಸಂಜೆ ಅದ್ಧೂರಿಯಾಗಿ ಸ್ವಾಗತಿಸಿ, ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ಮೈಸೂರಿನಲ್ಲಿ ಮತ ಎಣಿಕೆ ನಡೆದು ಗೆಲುವು ಸಾಧಿಸಿದ ಬಳಿಕ ಶುಕ್ರವಾರ ಸಂಜೆ ಡಾ. ಧನಂಜಯ ಸರ್ಜಿ ಶಿವಮೊಗ್ಗಕ್ಕೆ ಮರಳಿದರು. ನಗರಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಡಾ. ಧನಂಜಯ ಸರ್ಜಿಯವರಿಗೆ ಹಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತಿಸಿದರು. ಬೆಕ್ಕಿನಕಲ್ಮಠದ ಮುಂಭಾಗದಿಂದ ಬಿಜೆಪಿ ಕಚೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಹಿರಿಯ ಹಾಗೂ ಯುವ ಮುಖಂಡರು, ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಈ ವೇಳೆ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಿಜೆಪಿ ಗ್ರಾಮಾಂತರ ಸಂಚಾಲಕ ವಿರೂಪಾಕ್ಷಪ್ಪ ಸೇರಿ ಮುಖಂಡರು ಭಾಗವಹಿಸಿದ್ದರು.