ಜ್ಞಾನ, ಅಧ್ಯಾತ್ಮ, ಸಂಸ್ಕಾರ ಹಾಗೂ ಶಿಕ್ಷಣ ಹೀಗೆ ಅನೇಕ ಉದಾತ್ತ ಸೇವೆ ಮಾಡಿದ ಡಾ.ಶಿವಕುಮಾರ ಸ್ವಾಮೀಜಿ ದೇಶಕ್ಕೆ ಸ್ಫೂರ್ತಿಯ ದಿವ್ಯ ಹಣತೆ ಎಂದು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜ್ಞಾನ, ಅಧ್ಯಾತ್ಮ, ಸಂಸ್ಕಾರ ಹಾಗೂ ಶಿಕ್ಷಣ ಹೀಗೆ ಅನೇಕ ಉದಾತ್ತ ಸೇವೆ ಮಾಡಿದ ಡಾ.ಶಿವಕುಮಾರ ಸ್ವಾಮೀಜಿ ದೇಶಕ್ಕೆ ಸ್ಫೂರ್ತಿಯ ದಿವ್ಯ ಹಣತೆ ಎಂದು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ 119ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅಸಂಖ್ಯಾತ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ಎಂಬ ದಾಸೋಹ ನೀಡಿ ಅವರ ಬದುಕಿನಲ್ಲಿ ಜ್ಞಾನ ಎಂಬ ಬೆಳಕು ಮೂಡಿಬರಲು ಕಾರಣರಾಗಿದ್ದ ಸಿದ್ಧಗಂಗಾ ಶ್ರೀಗಳು ಮಾನವೀಯತೆಯ ಮೌಲ್ಯ ಕಾಪಾಡಿ ದೇಶಕ್ಕೆ ಸ್ಫೂರ್ತಿಯಾಗಿದ್ದರು ಎಂದರು. ಶರಣ ಚಿಂತಕಿ ರಶ್ಮಿ ಬದ್ನೂರ ಮಾತನಾಡಿ, ತುಮಕೂರ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರು ಕೋಟ್ಯಂತರ ಕಡು ಬಡವ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ್ದರ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳು ಸುಂದರ ಬದುಕಿನ್ನು ಕಟ್ಟಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಬೆಳೆಸುವಲ್ಲಿ ಮಠದ ಕಾರ್ಯ ಶ್ಲಾಘನೀಯ ಎಂದರು. ಬಂಜಾರ ಸಾಹಿತ್ಯ ಆಕಾಡೆಮಿಯ ಸದಸ್ಯೆ ಡಾ.ಸುರೇಖಾ ರಾಠೋಡ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡದೇ ಇರುವುದು ಸಮಸ್ತ ಕನ್ನಡಿಗರು ನಿರಾಶೆಯಾಗಿದ್ದಾರೆ. ಜಾತಿ, ಮತ, ಪಂತ, ಭಾಷೆ, ಲಿಂಗ ತಾರತಮ್ಯ ಮಾಡದೇ ಲಕ್ಷ ಲಕ್ಷ ವಿದ್ಯಾರ್ಥಿಗಳ ಹಣೆಬರಹ ಬದಲಾಯಿದ ಕೀರ್ತಿ ಸಿದ್ಧಗಂಗಾ ಮಠಕ್ಕೆ ಸಲ್ಲುತ್ತದೆ. ಇಂದು ದೇಶದ ರಾಷ್ಟ್ರಪತಿಗಳು ಸಿದ್ಧಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮೀಜಿಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಸಂಗತಿ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಉಪನ್ಯಾಸಕಿ ಲತಾ ಗುಂಡಿ, ಶೋಭಾ ಹರಿಜನ, ಸುಜಾತಾ ಹ್ಯಾಳದ, ಪರಶುರಾಮ ಚಲವಾದಿ,

ಬಿ.ಎಂ.ಅಜೂರ, ಕೆ.ಎಸ್.ಹಣಮಾಣಿ, ಅಹಮ್ಮದ್‌ ವಾಲಿಕಾರ, ಜಿ.ಎಸ್‌.ಬಳ್ಳೂರ, ನಿಂಗರಾಜ ಬಿರಾದಾರ, ಕವಿತಾ ಕಲ್ಯಾಣಪ್ಪಗೋಳ, ವಿಜಯಲಕ್ಷ್ಮೀ ಹಳಕಟ್ಟಿ, ಆಶಾ ಬಿರಾದಾರ, ಬಸವರಾಜ ಬಿರಾದಾರ, ಪಕ್ರುದ್ದೀನ್‌ ಹಿರೇಕೊಪ್ಪ ಉಪಸ್ಥಿತರಿದ್ದರು. ಪರವೀನ್‌ ಶೇಖ ಪ್ರಾಥಿ೯ಸಿದರು.