ಡಾ. ಶಿವರಾಮ ಕಾರಂತ ಸಾರ್ವಕಾಲಿಕ ಸರ್ವಮಾನ್ಯ ಕವಿ: ಡಾ. ಬಿ.ಎಸ್. ಶಿವಕುಮಾರ್

| Published : Mar 22 2025, 02:01 AM IST

ಡಾ. ಶಿವರಾಮ ಕಾರಂತ ಸಾರ್ವಕಾಲಿಕ ಸರ್ವಮಾನ್ಯ ಕವಿ: ಡಾ. ಬಿ.ಎಸ್. ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕಾರಂತರು ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಕೋನವನ್ನಿಟ್ಟುಕೊಂಡು ಹದವಾಗಿ ಮೆದುವಾಗಿ ಕಾವ್ಯಗಳನ್ನು ರಚಿಸಿದ ಮಹಾನ್ ಕವಿ. ಕಡಲ ತೀರದಿಂದ ನಾಡಿನ ಓದುಗರ ಒಡಲಿಗೆ ಅಕ್ಷರದ ಸಾಗರವನ್ನೇ ಹರಿಸಿದ ಧೀಮಂತಿಕೆಯ ಚಿಂತಕರು.

ಹಾವೇರಿ: ಹಲವು ಆಯಾಮಗಳಲ್ಲಿ ನಾಡಿನ ಕ್ಲಿಷ್ಟತೆಗಳನ್ನು ಸ್ಪಷ್ಟ ರೀತಿಯಲ್ಲಿ ಸಾಹಿತ್ಯದ ಮೂಲಕ ಬಡಿದೆಚ್ಚರಿಸಿದ ಅಜಾನುಬಾಹು ವ್ಯಕ್ತಿತ್ವದ ಡಾ. ಶಿವರಾಮ ಕಾರಂತರು ಸಾರ್ವಕಾಲಿಕ ಸರ್ವಮಾನ್ಯ ಕವಿಯಾಗಿದ್ದಾರೆ ಎಂದು ಆಂಧ್ರಪ್ರದೇಶ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ತುಳು ಅಧ್ಯಯನ ಪೀಠದ ಪ್ರಾಧ್ಯಾಪಕ ಡಾ. ಬಿ.ಎಸ್. ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಉಡುಪಿ ಡಾ. ಶಿವರಾಮ ಕಾರಂತ ಟ್ರಸ್ಟ್, ಶಿಗ್ಗಾಂವಿ ಶ್ರೀಮತಿ ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಐಕ್ಯುಎಸಿ ಹಾಗೂ ಕನ್ನಡ ವಿಭಾಗಗಳ ಜಂಟಿ ಆಯೋಜಕತ್ವದಲ್ಲಿ ಏರ್ಪಡಿಸಿದ್ದ ಡಾ. ಶಿವರಾಮ ಕಾರಂತರ ಬರಹಗಳು: ಸಮಕಾಲೀನ ಚಿಂತನೆ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಕಾರಂತರು ವೈಜ್ಞಾನಿಕ ಮತ್ತು ವೈಚಾರಿಕ ದೃಷ್ಟಿಕೋನವನ್ನಿಟ್ಟುಕೊಂಡು ಹದವಾಗಿ ಮೆದುವಾಗಿ ಕಾವ್ಯಗಳನ್ನು ರಚಿಸಿದ ಮಹಾನ್ ಕವಿ. ಕಡಲ ತೀರದಿಂದ ನಾಡಿನ ಓದುಗರ ಒಡಲಿಗೆ ಅಕ್ಷರದ ಸಾಗರವನ್ನೇ ಹರಿಸಿದ ಧೀಮಂತಿಕೆಯ ಚಿಂತಕರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಬರೆಯದ ಸಾಹಿತ್ಯ ಪ್ರಾಕಾರವಿಲ್ಲ. ಅವರು ಸಾಹಿತ್ಯದಲ್ಲಿ ಉತ್ತಮ ಉದಾತ್ತ ಕೃಷಿಗೈದು ಹೆಸರಾದರು. ಸಾಧಕ ಶಿರೋಮಣಿಯಂತಿದ್ದ ಕಾರಂತರು ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ, ರಾಜಕೀಯ, ನಾಟಕ, ಸಿನಿಮಾ, ಪರಿಸರ, ಯಕ್ಷಗಾನ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹೃದಯ ಶ್ರೀಮಂತಿಕೆ ಮೆರೆದರು. ವಯಸ್ಸು ಏರಿದಂತೆಲ್ಲ ಜ್ಞಾನದ ಪಕ್ವತೆಯನ್ನು, ಫಲವತ್ತತೆಯನ್ನು ಹೆಚ್ಚಿಸಿದ ಕವಿಪುಂಗವರು ಎಂದರು.

ಡಾ. ಶಿವರಾಮ ಕಾರಂತ ಟ್ರಸ್ಟ್‌ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಎಲ್ಲ ಕಾಲಕ್ಕೂ, ಎಲ್ಲ ಸಂದರ್ಭಕ್ಕೂ ಅನ್ವಯವಾಗುವ ಕವಿ ಡಾ. ಶಿವರಾಮ ಕಾರಂತರಾಗಿದ್ದಾರೆ. ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಸಾಹಿತ್ಯ ಪ್ರತಿಭೆ ಇಂದು ವಿಶ್ವಮಟ್ಟದಲ್ಲಿ ಬೆಳೆದು ನಿಂತು ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಬಣ್ಣಿಸಿದರು.

ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ, ಕನ್ನಡ ಮಣ್ಣಿನ ಶ್ರೇಷ್ಠತೆಯನ್ನು ನಾಡಿಗೆ ಪರಿಚಯಿಸಿದ ಹಿರಿಮೆ ಡಾ. ಶಿವರಾಮ ಕಾರಂತರದು. ಅವರು ಹೆಣೆದ ನಾಟಕಗಳು ಪರಿವರ್ತನೆಯ ಬದುಕಿಗೆ ನಾಂದಿ ಹಾಡಿರುವುದು ಸಾಹಿತ್ಯ ಆಳ ಮತ್ತು ಹರವನ್ನು ತಿಳಿಸುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ಕಾರಂತರು ಕೆಳಮಟ್ಟದಿಂದ ಬೆಳೆದು ನಿಂತ ಹೆಮ್ಮರ. ಅವರ ಬದುಕೇ ಒಂದು ಅದ್ಭುತ ಕಾವ್ಯವಿದ್ದಂತೆ ಎಂದರು. ವೇದಿಕೆಯಲ್ಲಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಎಸ್.ಎಲ್. ಬಾಲೇಹೊಸೂರು, ಮಂಡಳಿಯ ಸದಸ್ಯ ಜೆ.ಎಸ್. ಅರಣಿ, ಕುಂದಾಪುರ ಬಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯೆ ಡಾ. ಸಂಧ್ಯಾ ಆರ್. ಕುಲಕರ್ಣಿ ಸ್ವಾಗತಿಸಿದರು. ಶಿಗ್ಗಾಂವಿ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ. ಎ.ಸಿ. ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ. ಜೆ.ಎಫ್. ಹೊಸಮನಿ ಪರಿಚಯಿಸಿದರು. ಶ್ರೀದೇವಿ ದೊಡ್ಡಮನಿ ನಿರ್ವಹಿಸಿದರು. ಡಾ. ಆನಂದ ಇಂದೂರ ಹಾಗೂ ಡಾ. ಶಮಂತಕುಮಾರ್ ಕೆ.ಎಸ್. ವಂದಿಸಿದರು. ಇದೇ ಸಂದರ್ಭದಲ್ಲಿ ಹಲವು ಸಂಶೋಧನಾತ್ಮಕ ಲೇಖನಮಾಲೆಗಳುಳ್ಳ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.