ಡಾ ಶ್ರೀಕಂಠಶಾಸ್ತ್ರಿ ವಿದ್ವತ್ತಿಂದ ಮೈಸೂರು ವಿವಿಗೆ ಕೀರ್ತಿ: ಪ್ರೊ.ಲೋಕನಾಥ್

| Published : Mar 15 2025, 01:04 AM IST

ಡಾ ಶ್ರೀಕಂಠಶಾಸ್ತ್ರಿ ವಿದ್ವತ್ತಿಂದ ಮೈಸೂರು ವಿವಿಗೆ ಕೀರ್ತಿ: ಪ್ರೊ.ಲೋಕನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಪ್ರಾಚೀನ ವಿವಿಗಳಲ್ಲಿ ಒಂದಾದ ನಮ್ಮ ಮೈಸೂರು ವಿವಿ ಅನೇಕ ವಿದ್ವಾಂಸರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ವಿವಿಗೆ ಖ್ಯಾತಿ ತಂದು ಕೊಟ್ಟಿದ್ದಾರೆ. ಅಂತಹ ಹಿರಿಯ ತಲೆಮಾರಿನ ಮಹನೀಯರಲ್ಲಿ ಪ್ರೊ. ಶ್ರೀಕಂಠಶಾಸ್ತ್ರಿ ಅವರೂ ಒಬ್ಬರು. ಅವರು ಇಂಡಾಲಜಿ ಹಾಗೂ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ಈ ಕ್ಷೇತ್ರಕ್ಕೆ ಉನ್ನತ ಮತ್ತು ಮಹತ್ವದ ಕೊಡುಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಎಸ್. ಶ್ರೀಕಂಠಶಾಸ್ತ್ರಿ ಅವರು ವಿದ್ವತ್ ಕೆಲಸವನ್ನು ಮಾಡುವುದರ ಜೊತೆಗೆ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯಕ್ಕೆ ವಿದ್ವತ್ತಿನಿಂದ ಕೀರ್ತಿ ತಂದವರು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸ್ಮರಿಸಿದರು.

ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಶುಕ್ರವಾರ ಆಯೋಜಿಸಿದ್ದ ಡಾ.ಎಸ್. ಶ್ರೀಕಂಠಶಾಸ್ತ್ರಿಯವರ 50ನೇ ಪುಣ್ಯಸ್ಮರಣೆ ಅಂಗವಾಗಿ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದ ಪ್ರಾಚೀನ ವಿವಿಗಳಲ್ಲಿ ಒಂದಾದ ನಮ್ಮ ಮೈಸೂರು ವಿವಿ ಅನೇಕ ವಿದ್ವಾಂಸರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ವಿವಿಗೆ ಖ್ಯಾತಿ ತಂದು ಕೊಟ್ಟಿದ್ದಾರೆ. ಅಂತಹ ಹಿರಿಯ ತಲೆಮಾರಿನ ಮಹನೀಯರಲ್ಲಿ ಪ್ರೊ. ಶ್ರೀಕಂಠಶಾಸ್ತ್ರಿ ಅವರೂ ಒಬ್ಬರು. ಅವರು ಇಂಡಾಲಜಿ ಹಾಗೂ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ಈ ಕ್ಷೇತ್ರಕ್ಕೆ ಉನ್ನತ ಮತ್ತು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಸರ್ಕಾರವು ಗುರುತಿಸಿಲ್ಲ:

ನಿವೃತ್ತ ಪ್ರಾಧ್ಯಾಪಕ ಡಾ.ಎಚ್‌.ಎಸ್‌. ಹರಿಶಂಕರ್ ಮಾತನಾಡಿ, ಡಾ.ಎಸ್‌. ಶ್ರೀಕಂಠಶಾಸ್ತ್ರಿ ಅವರು ತಮ್ಮ ಅರಿವಿನ ವಿಸ್ತಾರವನ್ನು ಪುಸ್ತಕ ರೂಪಕ್ಕಿಳಿಸಿದ್ದರು. ಆದರೆ ಅವರ ಅಸಾಧಾರಣ ಸೇವೆಯನ್ನು ಸರ್ಕಾರವು ಗುರುತಿಸಲಿಲ್ಲ. ಶಾಸ್ತ್ರಿಗಳ ಬರವಣಿಗೆಯು ಚರಿತ್ರೆ, ಸಾಹಿತ್ಯ, ಬೋಧನಾ ವಿಧಾನ, ಅಲಂಕಾರ ಶಾಸ್ತ್ರ, ಪುರಾತತ್ವ ಶಾಸ್ತ್ರದ ವಿಚಾರಗಳನ್ನು ಒಳಗೊಂಡಿತ್ತು. ಅವರ ಮಗ ಪ್ರೊ.ಎಸ್. ನಾಗನಾಥ್ ಅವರು ತಂದೆಯ ಕುರಿತು ಬರೆದಿರುವ ಪುಸ್ತಕವು ಜೀವನ ಚರಿತ್ರೆಗಷ್ಟೇ ಸೀಮಿತವಾಗದೆ, ಶಾಸ್ತ್ರಿಗಳ ಸಾಧನೆಯ ಗ್ರಂಥವಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎ. ಶಂಕರ್‌ ಮಾತನಾಡಿ, ದಿ ಮೊನಾರ್ಕ್‌ ಆಫ್‌ ಮೈಸೂರು ಅನುವಾದ ಕೃತಿಯು ಮೈಸೂರಿನ ಇತಿಹಾಸಕ್ಕೆ ನೀಡಿದ ಕೊಡುಗೆಯಾಗಿದೆ. ಈ ಪುಸ್ತಕವನ್ನು ಶ್ರೀಕಂಠಶಾಸ್ತ್ರಿಗಳು ಕನ್ನಡದಲ್ಲಿ ಬರೆದಾಗ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕುರಿತು ಕನ್ನಡಿಗರಿಗೆ ತಿಳಿಯಿತು. ಈಗ ಆಂಗ್ಲ ಭಾಷೆಗೆ ತರ್ಜುಮೆಯಾಗಿರುವುದರಿಂದ. ಕನ್ನಡ ಗೊತ್ತಿಲ್ಲದವರೂ ಇಲ್ಲಿನ ಪರಂಪರೆಯನ್ನು ಕ್ರಮವಾಗಿ ಕಾಣಲು ಸಾಧ್ಯ ಎಂದರು.

ಮೂಲ ಲೇಖನದಲ್ಲಿರುವ ನ್ಯೂನತೆಗಳನ್ನು ಅನುವಾದ ಮಾಡುವಾಗ ಸರಿಪಡಿಸಬಾರದು. ಇದರಿಂದ ಕೃತಿಯಲ್ಲಿ ಸ್ವಾದ ಉಳಿಯುವುದಿಲ್ಲ. ಆದರೆ, ಈ ಪುಸ್ತಕದಲ್ಲಿ ಆ ರೀತಿಯ ವ್ಯತ್ಯಾಸಗಳಾಗಿಲ್ಲ. ಅಂದವಾದ ಕನ್ನಡವನ್ನು ಯಥಾವತ್‌ ಇಂಗ್ಲೀಷ್‌ ಗೆ ಅನುವಾದಿಸಲಾಗಿದ್ದು, ಇತಿಹಾಸದ ಸ್ವಾದ ಉಳಿಸಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

3 ಕೃತಿಗಳ ಬಿಡುಗಡೆ:

ಡಾ. ಶ್ರೀಕಂಠಶಾಸ್ತ್ರಿಯವರ ಪುತ್ರ ಪ್ರೊ.ಎಸ್. ನಾಗನಾಥ್ ಅವರು ರಚಿಸಿರುವ `ಎ ಲೈಫ್ ಇನ್ ಹಿಸ್ಟರಿ- ಬಯೋಗ್ರಫಿ ಆಫ್ ಡಾ.ಎಸ್. ಶ್ರೀಕಂಠಶಾಸ್ತ್ರಿ` ಕೃತಿ, ದಿ ಮೊನಾರ್ಕ್‌ ಆಫ್‌ ಮೈಸೂರು ಹಾಗೂ ಪುರಾತತ್ತ್ವ ಶೋಧನೆ ಎಂಬ ಕೃತಿಗಳನ್ನು ಮಂಟೇಸ್ವಾಮಿ ಮಠದ ಎಂ.ಎಲ್. ವರ್ಚಸ್ವಿ ಎಸ್.ಎಸ್. ರಾಜೇ ಅರಸ್ ಬಿಡುಗಡೆಗೊಳಿಸಿದರು.

ಶಾಸ್ತ್ರೀಯ ಸಂಗೀತಗಾರ ವಿದ್ವಾನ್ ಆರ್. ವಿಶ್ವೇಶ್ವರನ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಪ್ರೊ.ಎಸ್. ನಾಗನಾಥ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ವಿ. ಶೋಭಾ ಇದ್ದರು.

ಪ್ರೊ. ಶ್ರೀಕಂಠಶಾಸ್ತ್ರಿ ಅವರು ಬಹುಭಾಷಾ ತಜ್ಞರಾಗಿದ್ದು, 12 ಹೆಚ್ಚು ಪುಸ್ತಕಗಳನ್ನು ಹಾಗೂ 300 ಹೆಚ್ಚು ಲೇಖನಗಳನ್ನು ವಿವಿಧ ಭಾಷೆಗಳಲ್ಲಿ ಪ್ರಕಟಿಸಿರುವುದು ಇವೆಲ್ಲವೂ ಇತಿಹಾಸ ಪುರಾತತ್ವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಂದಿನ ಪೀಳಿಗೆಯವರಿಗೆ ಸ್ಫೂರ್ತಿದಾಯಕವಾಗಿದೆ.

- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ