ಕವಿ, ವಿಮರ್ಶಕ, ಅನುವಾದಕ, ಮೈಸೂರು ಯುವರಾಜ ಕಾಲೇಜಿನ ಪ್ರಾಂಶುಪಾಲ, ಮೈಸೂರು ವಿ.ವಿ.ರಿಜಿಸ್ಟಾರ್ ಆಗಿ ಎಲ್ಲಕ್ಕಿಂತ ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳ ಪ್ರತಿನಿಧಿಯಾಗಿ ಬಾಳಿದ ಸುಜನಾ ರಸವಿಮರ್ಶೆಯ ಮೂಲಕ, ಮಹಾ ಭಾರತದ ಉತ್ತರೋತ್ತರ ಕಥೆಯನ್ನು ತಮ್ಮ ಯುಗಸಂಧ್ಯಾ ಮಹಾಕಾವ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಮೇರುಕವಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಮ್ಮೋಳಗಿನ ಸಂಪೂರ್ಣ ವಿದ್ವತ್ತನ್ನು ವಿದ್ಯಾರ್ಥಿಗಳಿಗೆ ಧಾರೆಯೆರುವ ತವಕ ಹೊಂದಿದ್ದ ನಾಡಿನ ಅಪೂರ್ವ ಸಾಹಿತಿಕ ಚೇತನ ಡಾ.ಸುಜನಾ ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಪ್ರಸ್ತುತರಾಗಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಜಯನಗರ ಬಡಾವಣೆಯ ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ ಮಂಡ್ಯದ ಕರ್ನಾಟಕ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಲ್ಲಿಕಾರ್ಜುನ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ನಾಡಿನ ಪ್ರಖ್ಯಾತ ವಿಮರ್ಶಕ ಹಾಗೂ ಮಹಾಕವಿ ಡಾ.ಸುಜನಾ- ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವಿ, ವಿಮರ್ಶಕ, ಅನುವಾದಕ, ಮೈಸೂರು ಯುವರಾಜ ಕಾಲೇಜಿನ ಪ್ರಾಂಶುಪಾಲ, ಮೈಸೂರು ವಿ.ವಿ.ರಿಜಿಸ್ಟಾರ್ ಆಗಿ ಎಲ್ಲಕ್ಕಿಂತ ರಾಷ್ಟ್ರಕವಿ ಕುವೆಂಪು ಅವರ ಆದರ್ಶಗಳ ಪ್ರತಿನಿಧಿಯಾಗಿ ಬಾಳಿದ ಸುಜನಾ ರಸವಿಮರ್ಶೆಯ ಮೂಲಕ, ಮಹಾ ಭಾರತದ ಉತ್ತರೋತ್ತರ ಕಥೆಯನ್ನು ತಮ್ಮ ಯುಗಸಂಧ್ಯಾ ಮಹಾಕಾವ್ಯದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ ಮೇರುಕವಿ ಎಂದು ಬಣ್ಣಿಸಿದರು.

ಬಿಳಿರಂಗನ ಬೆಟ್ಟದ ಒಬ್ಬ ಸೋಲಿಗರ ಮಗನಾದ ನಾನು ಕನ್ನಡ ಪ್ರಾಧ್ಯಾಪಕನಾಗಿ ಸಮಾಜದ ಮುಂದೆ ಅನಾವರಣಗೊಳ್ಳಲು ಸುಜನಾ ಕಾರಣಕರ್ತರು. ಕುವೆಂಪುರವರ ಚಿಂತನೆಗಳನ್ನು ಕೇವಲ ಕಾವ್ಯರೂಪದಲ್ಲಿ ಮಾತ್ರ ಸ್ವೀಕರಿಸದೆ ಅವರಂತೆ ಆದರ್ಶಗಳ ಪ್ರತಿರೂಪವಾಗಿ ಬದುಕಿ ತೋರಿಸಿದವರು ಎಂದರು.

ಡಾ.ಸುಜನಾ ಅವರು ಬದುಕಿನುದ್ದಕ್ಕೂ ಎಂತಹ ಸಂದರ್ಭದಲ್ಲೂ ತಮ್ಮ ಸಿದ್ಧಾಂತಗಳೊಂದಿಗೆ ಇತರೆ ಸಿದ್ಧಾಂತಗಳನ್ನು ಸೇರಿಸಿಕೊಂಡವರಲ್ಲ, ರಾಜಿ ಮಾಡಿಕೊಂಡವರೂ ಅಲ್ಲ. ಅಧಿಕಾರಕ್ಕೆ ಆಸೆಪಟ್ಟು ಅಂಟಿಕೂರದೆ ತಮ್ಮ ಕಾವ್ಯ ಕೃಷಿಯನ್ನು ಮಾಡಿದ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಪ್ರಸ್ತುತರಾಗಿದ್ದಾರೆ. ಈ ತಲೆಮಾರಿನ ಲೇಖಕರಿಗೆ ಅವರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಉದ್ಘಾಟಿಸಿ ಮಾತನಾಡಿ, ಕುವೆಂಪುರವರ ಶಿಷ್ಟರಾಗಿ ಅವರು ಬಿಟ್ಟು ಹೋದ ಮೌಲ್ಯಗಳನ್ನು ಮತ್ತು ಪರಂಪರೆಯನ್ನು ಮುಂದುವರಿಸಿದ ಕೀರ್ತಿ ಡಾ.ಸುಜನಾ ಅವರಿಗೆ ಸೇರುತ್ತದೆ. ಆದರೆ, ಇವರಿಗೆ ಸಲ್ಲಬೇಕಾದ ಗೌರವ ಸಮರ್ಪಣೆಯಾಗದಿರುವುದು ಸಾಹಿತ್ಯಲೋಕದ ದುರಂತ ಎಂದರು.

ಕರ್ನಾಟಕ ಸಂಘ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಡಾ.ಸುಜನಾ ಅವರನ್ನು ತಾಲೂಕಿನ ಜನರಿಗೆ ಪರಿಚಯಿಸುವ ಕೆಲಸ ಆಗಿಲ್ಲ. ಡಾ.ಸುಜನಾ ಹೆಸರಿನಲ್ಲಿ ಸಂಸ್ಕೃತಿಕ ಪ್ರತಿಷ್ಠಾನ ಸ್ಥಾಪಿಸಿ ಅವರ ಹೆಸರಿನಲ್ಲಿ ಜಿಲ್ಲಾದ್ಯಂತ ಕನ್ನಡದ ಕೆಲಸಗಳು ನಡೆಯುವಂತೆ ಮಾಡವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಸುಜನಾ ಪ್ರತಿಷ್ಠಾನದ ಬಗ್ಗೆ ಚರ್ಚಿಸಿ ಸ್ಥಳದಲ್ಲಿಯೇ ಸುಜನಾ ಅಭಿಮಾನಿಗಳಿಂದ ಸುಮಾರು 2 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಪ್ರತಿಷ್ಠಾನ ಗೌರವಾಧ್ಯಕ್ಷೆ ಇಂದಿರಾ ಕೃಷ್ಣ, ರಂಗಕರ್ಮಿ ಕೆ.ಜೆ.ನಾರಾಯಣ, ಜಿಲ್ಲಾ ಕಸಾಪ ಅಧ್ಯಕ್ಷ ಪಣ್ಣೆದೊಡ್ಡಿ ಹರ್ಷ, ತಾಲೂಕು ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ನಿವೃತ್ತ ಪ್ರಾಧ್ಯಾಪಕ ಕೆ.ಆರ್.ನಾರಾಯಣಶೆಟ್ಟಿ, ನಿವೃತ್ತ ಪ್ರಾಂಶುಪಾಲ ಶಿ.ಕುಮಾರಸ್ವಾಮಿ, ಉದಯರವಿ ಟ್ರಸ್ಟಿನ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕತ್ತರಘಟ್ಟ ವಾಸು ಇದ್ದರು.