ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಡಾ. ಶಿವರಾಮ ಕಾರಂತ ನಿಸರ್ಗಧಾಮದ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿದ್ದ ಡಾ. ಸೂರ್ಯಪ್ರಕಾಶ್ ಶೆಣೈ ಭಾನುವಾರ ಕಡಬದ ಹೊಸ್ಮಠದಲ್ಲಿ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾದರು.ಪಶ್ಚಿಮ ಘಟ್ಟದ ಸಸ್ಯಸಂಪತ್ತಿನ ಸಂರಕ್ಷಣೆಗೆ ಮಂಗಳೂರಿನ ಪಿಲಿಕುಳದ 85 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾದ ‘ಸಸ್ಯಕಾಶಿ’ ಎಂಬ ಸಸ್ಯೋದ್ಯಾನ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ, ಬೀಜ ಸಂಗ್ರಹಿಸಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದರು.ಇವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮೊದಲ ಎಂ.ಎಸ್ಸಿ. (1988–90) ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದು, ನಂತರ ಅದೇ ವಿಭಾಗದಿಂದ ಎಂ.ಫಿಲ್ ಹಾಗೂ ಪಿ.ಎಚ್.ಡಿ ಪದವಿ ಗಳಿಸಿದರು. ತಮ್ಮ ಶೋಧನೆಗಳ ಮೂಲಕ ಅನೇಕ ನಶಿಸಿಹೋಗುತ್ತಿರುವ ಹಾಗೂ ಅಪರೂಪದ ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಪುನಶ್ಚೇತನಗೊಳಿಸಿದ್ದರು. ಇವರು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೇವಲ ಸಂಶೋಧಕನಾಗಿ ಮಾತ್ರವಲ್ಲ, ಮಾರ್ಗದರ್ಶಕನಾಗಿ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದರು. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಪರಿಸರ ಮತ್ತು ಸಸ್ಯಸಂರಕ್ಷಣೆಯ ಕುರಿತು ಹಲವು ತರಬೇತಿ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಇವರು ನಡೆಸಿಕೊಟ್ಟಿದ್ದಾರೆ.