ಕರ್ನಾಟಕದಲ್ಲಿ ಕನ್ನಡ ಬೆಳೆಯಲು ಡಾ. ರಾಜ್‌ ಕಾರಣ

| Published : Apr 25 2025, 12:32 AM IST

ಸಾರಾಂಶ

ಕಳೆದ 1982ಕ್ಕಿಂತ ಮುನ್ನ ಕರ್ನಾಟಕದಲ್ಲಿ ಹೆಚ್ಚಾಗಿ ಸಂಸ್ಕೃತ ಭಾಷೆ ಚಾಲ್ತಿಯಲ್ಲಿತ್ತು, ನಂತರ ಡಾ. ರಾಜಕುಮಾರ್‌ ನೇತೃತ್ವದಲ್ಲಿ ನಡೆದ ಗೋಕಾಕ್‌ ಚಳುವಳಿಯಿಂದ ಕರ್ನಾಟಕದಲ್ಲಿ ಕನ್ನಡ ಬೆಳೆಯಿತು ಎಂದು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಬಿ.ಜೆ ವಿಷ್ಣುಕಾಂತ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಳೆದ 1982ಕ್ಕಿಂತ ಮುನ್ನ ಕರ್ನಾಟಕದಲ್ಲಿ ಹೆಚ್ಚಾಗಿ ಸಂಸ್ಕೃತ ಭಾಷೆ ಚಾಲ್ತಿಯಲ್ಲಿತ್ತು, ನಂತರ ಡಾ. ರಾಜಕುಮಾರ್‌ ನೇತೃತ್ವದಲ್ಲಿ ನಡೆದ ಗೋಕಾಕ್‌ ಚಳುವಳಿಯಿಂದ ಕರ್ನಾಟಕದಲ್ಲಿ ಕನ್ನಡ ಬೆಳೆಯಿತು ಎಂದು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಬಿ.ಜೆ ವಿಷ್ಣುಕಾಂತ್‌ ಹೇಳಿದರು.

ಇಲ್ಲಿನ ಕರ್ನಾಟಕ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ರಾಜಕುಮಾರ್‌ 97ನೇ ಜಯಂತಿ ಅಂಗವಾಗಿ ರಾಜರಸ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಎಲ್ಲ ಸಾಹಿತಿಗಳು ಒಗ್ಗೂಡಿ ಕನ್ನಡದ ಬಗ್ಗೆ ಹೋರಾಟ ನಡೆಸಿದರು. ಆ ಹೋರಾಟಕ್ಕೆ ಜಯ ಸಿಗಲಿಲ್ಲ. ಆ ಎಲ್ಲ ಸಾಹಿತಿಗಳು ಒಗ್ಗೂಡಿ ಗೋಕಾರ್‌ ಚಳುವಳಿಯ ನಾಯಕತ್ವವನ್ನು ಡಾ. ರಾಜಕುಮಾರ್‌ಗೆ ವಹಿಸಲು ಕೋರಿದರು. ಇದನ್ನು ಒಪ್ಪಿದ ಡಾ. ರಾಜ್‌ ಒಂದು ತಿಂಗಳ ಕಾಲ ಚಳುವಳಿ ನಡೆಸಿದರು. ಕೊನೆಗೆ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ಗೆ ವರದಿ ಸಲ್ಲಿಸಿದಾಗ ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲಾಯಿತು. ಕನ್ನಡವನ್ನು ಪ್ರಥಮ ಭಾಷೆಯಾಗಿ ಘೋಷಣೆ ಮಾಡಲಾಯಿತು. ಇದರಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಬೆಳೆಯಿತು ಎಂದರು.

ನಾನು 1995ರಲ್ಲಿ ಒಂದು ನಾಟಕದಲ್ಲಿ ನಟನೆ ಮಾಡುತ್ತಿದ್ದಾಗ ಡಾ. ರಾಜಕುಮಾರ್‌ ನನ್ನನ್ನು ಸನ್ಮಾನ ಮಾಡಿ, ನೀವು ಒಂದೊಳ್ಳೆ ಕಲಾವಿದರಾಗುತ್ತೀರಿ ಎಂದು ನುಡಿದಿದ್ದರು. ಅದರ ನಂತರ ಕೆಲ ವರ್ಷ ನಾಟಕ ಹಾಗೂ ಚಲನಚಿತ್ರದಿಂದ ದೂರ ಉಳಿದ ನಾನು, ಡಾ. ಬಿಆರ್‌ ಅಂಬೇಡ್ಕರ್‌ ಎನ್ನುವ ಚಲನಚಿತ್ರ ಮಾಡಿದ್ದೇನೆ. ಇದು ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿತ್ತು ಎಂದು ಡಾ. ರಾಜ್‌ ಅವರ ಜೊತೆಗಿನ ಅನುಭವವನ್ನು ಬಿ.ಜೆ ವಿಷ್ಣುಕಾಂತ್‌ ಅವರು ಹಂಚಿಕೊಂಡರು.

ಬೀದರ್‌ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಮಾತನಾಡಿ, ಕನ್ನಡ ಚಿತ್ರರಂಗವನ್ನು ಕನ್ನಡಕ್ಕೆ ಪರಿಚಯಿಸಿದವರು ಡಾ. ರಾಜಕುಮಾರ್‌ ಅವರಾಗಿದ್ದಾರೆ. ಅವರು ಒಬ್ಬ ನಟರಾಗದೆ ಒಳ್ಳೆಯ ಸಮಾಜದ ಹರಿಕಾರರಾಗಿದ್ದಾರೆ. ನಾನು ಕೂಡ ಅವರ ಅಭಿಮಾನಿಯಾಗಿದ್ದೇನೆ. ವಿದ್ಯಾರ್ಥಿಗಳು ಅವರ ಚಲನಚಿತ್ರಗಳನ್ನು ನೋಡಬೇಕು ಎಂದು ಹೇಳಿದರು.

ಕೆಆರ್‌ಇ ಸಂಸ್ಥೆಯ ಉಪಾಧ್ಯಕ್ಷ ಬಿ.ಜಿ ಶೆಟಕಾರ್‌ ಮಾತನಾಡಿ, ಡಾ. ರಾಜಕುಮಾರ್ ವೀರಪ್ಪನ್ ಜೊತೆಗೂ ಕೂಡ ಕಾಲ ಕಳೆದಿದ್ದರು. ಆದರೂ ಧೃತಿಗೆಡದೇ ಪ್ರೀತಿಯಿಂದಲೇ ಅವರ ಮನಸ್ಸನ್ನು ಗೆದ್ದಿದ್ದರು. ಇವರು ಸಾಮಾನ್ಯ ವ್ಯಕ್ತಿ ಇರಲಿಲ್ಲ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಶಿವಕುಮಾರ ಪಾಂಚಾಳ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಜಾನಪದ ಆಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ, ಕೆಆರ್‌ಇ ಸಂಸ್ಥೆಯ ಕಾರ್ಯದರ್ಶಿ ಸತೀಶ ಪಾಟೀಲ್‌, ವಾರ್ತಾ ಇಲಾಖೆಯ ನರೇಶ, ಕರ್ನಾಟಕ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಮಲ್ಲಿಕಾರ್ಜುನ ಹಂಗರಗಿ, ಚಂದ್ರಕಾಂತ ಶೆಟಕಾರ್‌, ಸೋಮನಾಥ ಬಿರಾದರ್‌, ಮಲ್ಲಯ್ಯ ಸ್ವಾಮಿ ಹಾಗೂ ಸಂಗೀತಾ ಸೇರಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.