-ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅಭಿಮತ । ಮಾಜಿ ಶಾಸಕ ಡಾ. ವೀರಬಸವಂತರಡ್ಡಿ ವರ್ಷದ ಪುಣ್ಯಸ್ಮರಣೆ ಗ್ರಂಥ ಬಿಡುಗಡೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಮಾಜಿ ಶಾಸಕರಾಗಿದ್ದ ಲಿಂ. ಡಾ. ವೀರಬಸವಂತರಡ್ಡಿ ಮುದ್ನಾಳ್‌ ಅವರು ತಮ್ಮ ಜೀವಿತಾವಧಿಯಲ್ಲಿ ವೈದ್ಯಕೀಯ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅಪಾರ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಹೇಳಿದರು.

ನಗರದ ಪಾಟೀಲ್ ಕನ್ವೇನಷನ್ ಹಾಲ್‌ನಲ್ಲಿ ಮುದ್ನಾಳ್‌ ಪರಿವಾರ ಹಾಗೂ ಅವರು ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಶಾಸಕ ಲಿಂ. ಡಾ. ವೀರ ಬಸವಂತರಡ್ಡಿ ಮುದ್ನಾಳ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಡಾ. ಮುದ್ನಾಳ್‌ ಅವರು ದೊಡ್ಡ ಕುಟುಂಬದಲ್ಲಿ ಜನಿಸಿ, ಉನ್ನತ ವೈದ್ಯಕೀಯ ಅಭ್ಯಾಸದ ಆರಂಭದ ದಿನಗಳಲ್ಲಿ ಮೊದಲು ಅವರು ವಿಜಯಪುರದ ಬಿಎಲ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಾಗೂ ಅತ್ಯುತ್ತಮ ಶಸ್ತ್ರಚಿಕಿತ್ಸಕರಾಗಿ ಪರಿಣಾಮಕಾರಿಯಾಗಿ ದಶಕಗಳ ಕಾಲ ಉತ್ತರ ಕರ್ನಾಟಕದ ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಪ್ರಾಣ ಕಾಪಾಡಿದ್ದಾರೆ. ಅವರ ಜನ್ಮಭೂಮಿ ಯಾದಗಿರಿಯಾದರೂ, ಕರ್ಮಭೂಮಿ ವಿಜಯಪುರವಾಗಿತ್ತು ಎಂದು ಅವರ ಕಾರ್ಯವೈಖರಿಯನ್ನು ಬಣ್ಣಿಸಿದರು.

ಸದಾ ಕ್ರಿಯಾಶೀಲರಾಗಿದ್ದ, ಸಮಯಪ್ರಜ್ಞೆ ಮೈಗೂಡಿಸಿಕೊಂಡಿದ್ದ ಡಾ. ಮುದ್ನಾಳ್‌ ಅವರು, ತಮ್ಮ ಕರ್ತವ್ಯಕ್ಕೆ ಮೊದಲು ಆದ್ಯತೆ ನೀಡುವ ಮೂಲಕ ಮನುಷ್ಯತ್ವದ ಮಹತ್ವ ಪರಿಚಯಿಸಿದರು, ನಂತರದ ದಿನಗಳಲ್ಲಿ ಅವರು ಹಿರಿಯರ ಸಲಹೆ ಮೇರೆಗೆ ರಾಜಕೀಯ ಕ್ಷೇತ್ರಕ್ಕೆ ಬರುವ ಮೂಲಕ ೨೦೦೪ರಲ್ಲಿ ಯಾದಗಿರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅವರು ಶಾಸಕರಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದ ಅಭಿವೃದ್ಧಿಗ ಮಹತ್ವದ ಕೆಲಸಗಳನ್ನು ಮಾಡಿದರು. ಮಾಜಿ ಸಚಿವರಾಗಿದ್ದ ಲಿಂ. ವಿಶ್ವನಾಥ ರಡ್ಡಿ ಮುದ್ನಾಳ್‌ ಅವರು ಕಟ್ಟಾ ಬಸವಾಭಿಮಾನಿಗಳಾಗಿದ್ದರು, ಬಸವ ತತ್ವಗಳ ಪ್ರಚಾರದಲ್ಲಿ ಮುಂಚೂಣಿಯಲ್ಲಿ ಇರುವ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾಜಿ ಸಚಿವ ದಿ. ವೈಜನಾಥ ಪಾಟೀಲ್ ಜೊತೆಗೂಡಿ ಸಂವಿಧಾನದ 371ನೇ ಜೆ. ಕಲಂ ತಿದ್ದುಪಡಿ ತರಲು ಮಹತ್ವದ ಹೋರಾಟ ಮಾಡಿ, ರಾಜ್ಯದ ಜನರಿಗೆ ಪರಿಚಿತರಾಗಿದ್ದರು. ಇಂತಹ ಆದರ್ಶಗಳ ಕುಟುಂಬವಾಗಿರುವ ಮುದ್ನಾಳ ಪರಿವಾರದವರು, ಅವರೆಲ್ಲರ ಗುಣಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ, ರಾಜಕೀಯ ಮತ್ತೆ ಮುನ್ನೆಲೆಗೆ ಬರಲೀ ಎಂದು ಹೇಳಿದರು.

ಮಾಜಿ ಸಚಿವ ಶರಣಬಸಪ್ಪ ದರ್ಶನಾಪೂರ ಮಾತನಾಡಿ, ಡಾ. ಮುದ್ನಾಳ್‌ ಅವರು ಸ್ನೇಹಜೀವಿ, ಅವರ ಜೊತೆ ಹಲವಾರು ದಶಕಗಳ ಕಾಲ ರಾಜಕಾರಣ ಮಾಡಿದ್ದೇನೆ, ಅವರು ಶಾಸಕರಾಗಿದ್ದ ವೇಳೆ ಮಹತ್ವದ ಕೆಲಸಗಳ ಬಗ್ಗೆ ಆಯಾ ಸಚಿವರ ಬಳಿಗೆ ವಿವರಿಸಿ, ಹಠದಿಂದ ಕೆಲಸ ಮಾಡಿಸಿಕೊಂಡು ಬರುವ ಮೂಲಕ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

2018ರಲ್ಲಿ ಅವರು ತಮ್ಮ ಸಹೋದರ ದಿ. ವೆಂಕಟರಡ್ಡಿ ಮುದ್ನಾಳ ಅವರಿಗೆ ಯಾದಗಿರಿಯಿಂದ ಕಣಕ್ಕಿಳಿಯಲು ಅವಕಾಶ ನೀಡಿ, ತ್ಯಾಗಮಯ ವ್ಯಕ್ತಿಯಾದರು. ಆ ಅವಧಿಯಲ್ಲಿ ಯಾದಗಿರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಅವರ ಕಾರ್ಯಗಳನ್ನು ವಿವರಿಸಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಗುರುಮಠಕಲ್‌ ಶರಣಗೌಡ ಕಂದಕೂರ ಅವರು ಲಿಂ. ಡಾ. ಮುದ್ನಾಳ್‌ ಅವರನ್ನು ಸ್ಮರಿಸಿದರು.

ಡಾ. ಗಂಗಾಧರ ಮಹಾಸ್ವಾಮೀಜಿ, ಶಾಂತವೀರ ಮಹಾಸ್ವಾಮಿಜಿ, ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ, ದಾಸಬಾಳ ಮಠದ ವೀರೇಶ್ವರ ಸ್ವಾಮಿಜಿ, ದಂಡಗುಂಡದ ಸಂಗನಬಸವ ಶಿವಾಚಾರ್ಯ ಸ್ವಾಮಿಜಿ, ಡಾ. ಸಂಗಮ್ಮ ವಿ. ರಡ್ಡಿ ಮುದ್ನಾಳ, ಬಸವರಾಜಪ್ಪ ಕಾಮರಡ್ಡಿ ಬೆಂಡೆಬೆಂಬಳಿ, ಹಣಮಂತರಡ್ಡಿ ಮುದ್ನಾಳ, ಪಂಪಣ್ಣಗೌಡ ಮುದ್ನಾಳ, ಸಾಹಿತಿ ಸುಭಾಷ್ಚಂದ್ರ ಕೌಲಗಿ, ರಾಚನಗೌಡ ಮುದ್ನಾಳ. ಮಹೇಶರಡ್ಡಿ ಮುದ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೀರಾರಡ್ಡಿ ಮುದ್ನಾಳ ಸ್ವಾಗತಿಸಿ, ಡಾ. ಸಿದ್ದರಾಜ ಪಾಟೀಲ್ ನಿರೂಪಿಸಿ, ವಂದಿಸಿದರು.

-

22ವೈಡಿಆರ್1 : ಬುಧವಾರ, ಯಾದಗಿರಿಯ ಪಾಟೀಲ್ ಕನ್ವೇನಷನ್ ಹಾಲ್‌ನಲ್ಲಿ ಮುದ್ನಾಳ್‌ ಪರಿವಾರ ಹಾಗೂ ಅವರು ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಶಾಸಕ ಲಿಂ. ಡಾ. ವೀರ ಬಸವಂತರಡ್ಡಿ ಮುದ್ನಾಳ ರವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆ ಮಾಡಲಾಯಿತು.

-

22ವೈಡಿಆರ್2 : ಬುಧವಾರ ಯಾದಗಿರಿಯಲ್ಲಿ ಆಯೋಜಿಸಿದ್ದ, ಮಾಜಿ ಶಾಸಕ ಲಿಂ. ಡಾ. ವೀರ ಬಸವಂತರಡ್ಡಿ ಮುದ್ನಾಳ ರವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ರಾಜ್ಯ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಮಾತನಾಡಿದರು.