ಸಮಾಜದ ಏಳಿಗೆಗಾಗಿ ಬದುಕನ್ನು ಮುಡಿಪಾಗಿಟ್ಟವರು. ಬಸವೇಶ್ವರರು ಬೋಧಿಸಿದಂತೆ ಕಾಯಕದಲ್ಲಿ ಮೇಲು ಕೀಳಿಲ್ಲ

ಗದಗ: ಸ್ವಾಮೀಜಿಗಳು ತಮ್ಮ ಸನ್ಯಾಸತ್ವದ ಏಕತಾನತೆಯನ್ನು ಕಳೆದುಕೊಳ್ಳಲು ಸಮಾಜಮುಖಿಯಾಗುವುದು ಅನಿವಾರ್ಯ ಎಂಬ ಶ್ರೇಷ್ಠ ನಿಲುವು ಹೊಂದಿದ್ದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಇಡೀ ಸನ್ಯಾಸಿ ಸಮುದಾಯಕ್ಕೇ ಮಾದರಿಯಾಗಿದ್ದರು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ಹೇಳಿದರು.

ಅವರು ಗದಗ ನಗರದ ತೋಂಟದಾರ್ಯ ಮಠದಲ್ಲಿ ಗುರುವಾರ ಆಯೋಜಿಸಲಾಗಿದ್ದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 8 ನೇ ಪುಣ್ಯಸ್ಮರಣೆ ಹಾಗೂ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಕಾರ್ಮಿಕ ಸಚಿವ ಹಾಗೂ ಹಿರಿಯ ಹೋರಾಟಗಾರ ಡಾ. ಎಸ್.ಕೆ. ಕಾಂತಾ, ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ (ಮರಣೋತ್ತರ), ಶರಣ ಸಾಹಿತ್ಯ ಪ್ರಸಾರಕ ಐ.ಆರ್. ಮಠಪತಿ, ಖ್ಯಾತ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಹಾಗೂ ಬಸವತತ್ವ ಪ್ರಸಾರಕ್ಕೆ ಮೀಸಲಾದ ಬಸವ ಮೀಡಿಯಾ ಸಂಸ್ಥೆಗೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ತಲಾ 1 ಲಕ್ಷ ರುಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಸ್.ಕೆ. ಕಾಂತಾ, ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಸಮಾಜದ ಏಳಿಗೆಗಾಗಿ ಬದುಕನ್ನು ಮುಡಿಪಾಗಿಟ್ಟವರು. ಬಸವೇಶ್ವರರು ಬೋಧಿಸಿದಂತೆ ಕಾಯಕದಲ್ಲಿ ಮೇಲು ಕೀಳಿಲ್ಲ. ಆದರೆ ಇಂದಿಗೂ ಜಾತಿ ಪದ್ಧತಿಯನ್ನು ತೊಡೆದುಹಾಕಲು ಸಾಧ್ಯವಾಗಿಲ್ಲ. ರೈತರು ಮತ್ತು ಶ್ರಮಿಕರ ಶ್ರಮಕ್ಕೆ ತಕ್ಕ ಮೌಲ್ಯ ಸಿಗಬೇಕಿದೆ. ಶರಣರ ಸಮಾನತೆಯ ತತ್ವವನ್ನು ಜಾರಿಗೆ ತರಲು ಕ್ರಾಂತಿಕಾರಿ ಮನೋಭಾವ ಅಗತ್ಯ ಎಂದು ಪ್ರತಿಪಾದಿಸಿದರು.

ಸಾನ್ನಿಧ್ಯ ವಹಿಸಿದ್ದ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡಿ, ಪ್ರಗತಿಪರ ವಿಚಾರಧಾರೆ ಹಾಗೂ ಜಾತ್ಯತೀತ ತತ್ವಗಳ ಮೇಲೆ ಸದಾ ಆಘಾತಗಳು ನಡೆಯುತ್ತಲೇ ಬಂದಿವೆ. ಆದರೆ ಬಸವತತ್ವ ಸಾರ್ವಕಾಲಿಕವಾಗಿದ್ದು, ಎಷ್ಟೇ ದಾಳಿಗಳಾದರೂ ಶರಣರ ಚಿಂತನೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ನಾವು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿಲ್ಲ, ಬದಲಿಗೆ ಬಸವತತ್ವದ ಬುನಾದಿಯ ಮೇಲೆ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಡಾ. ಎನ್.ಜಿ. ಮಹಾದೇವಪ್ಪ ಅವರ ವಚನಗಳಲ್ಲಿ ಅನುಭಾವ, ಡಾ. ಪ್ರದೀಪಕುಮಾರ ಹೆಬ್ರಿ ಅವರ ಬೆಳಗ ಮಹಾಬೆಳಗು ಹಾಗೂ ಆರ್.ಎಸ್. ಲೆಕ್ಕದ ಅವರ ಷೇಕ್ಸ್‌ಪಿಯರ್‌ ಮತ್ತು ಕಂದಗಲ್‌ ಹನುಮಂತರಾಯ ತೌಲನಿಕ ಅಧ್ಯಯನ ಕೃತಿಗಳು ಬಿಡುಗಡೆಗೊಂಡವು.

ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಇಳಕಲ್‌ ನ ಗುರುಮಹಾಂತ ಮಹಾಸ್ವಾಮಿಗಳು, ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಶಿರೋಳ ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಕೋರಣೇಶ್ವರ ಶ್ರೀಗಳು, ಗುರುಶಾಂತದೇವ ಶ್ರೀಗಳು, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ ಹಾಗೂ ಮಾಜಿ ಶಾಸಕ ಶರಣಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನಗೆ ಮಾರ್ಗದರ್ಶಕರಾಗಿದ್ದರು. ಅವರ ಸುದೀರ್ಘ ಒಡನಾಟ ಹಾಗೂ ಸಂವಾದಗಳಿಂದ ಬಸವತತ್ವದ ಕುರಿತಾದ ನನ್ನ ಅನೇಕ ಗೊಂದಲಗಳು ಪರಿಹಾರಗೊಂಡವು. 1995 ರಲ್ಲಿ ಸರ್ಕಾರ ನನಗೆ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಜವಾಬ್ದಾರಿ ವಹಿಸಿದಾಗ, ಇಳಕಲ್ ಶ್ರೀಗಳು ಹಾಗೂ ತೋಂಟದ ಸಿದ್ಧಲಿಂಗ ಶ್ರೀಗಳು ನೀಡಿದ ಮಾರ್ಗದರ್ಶನ ಕೂಡಲಸಂಗಮದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿತು. ಇಂದು ಅವರು ಸ್ಥಾಪಿಸಿದ ತೋಂಟದಾರ್ಯ ವಿದ್ಯಾಪೀಠ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಮತ್ತು ಸಾಧಕರಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಅರ್ಥಪೂರ್ಣ ಎಂದು

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ ತಿಳಿಸಿದ್ದಾರೆ.