ಸಾಹಿತ್ಯ, ಚಿಂತನೆ ಮತ್ತು ಜನಪರ ಹೋರಾಟಗಳ ಮೂಲಕ ಸಮಾಜದಲ್ಲಿ ಜೀವಂತವಾಗಿರಿಸಿದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಧುನಿಕ ಶರಣ ಪರಂಪರೆಯ ಪ್ರಗತಿಪರ ಚೇತನ.

ಕನ್ನಡಪ್ರಭ ವಾರ್ತೆ ಗದಗ

ಬಸವಾದಿ ಶರಣರ ಕಾಯಕ ದಾಸೋಹ ಹಾಗೂ ಸಮಾನತೆಯ ತತ್ವಗಳನ್ನು ಮಠದ ಚೌಕಟ್ಟಿಗೆ ಸೀಮಿತಗೊಳಿಸದೆ ಸಾಹಿತ್ಯ, ಚಿಂತನೆ ಮತ್ತು ಜನಪರ ಹೋರಾಟಗಳ ಮೂಲಕ ಸಮಾಜದಲ್ಲಿ ಜೀವಂತವಾಗಿರಿಸಿದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಧುನಿಕ ಶರಣ ಪರಂಪರೆಯ ಪ್ರಗತಿಪರ ಚೇತನ ಎಂದು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯುಎಸಿ), ಕನ್ನಡ ವಿಭಾಗ ಹಾಗೂ ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸಾಹಿತ್ಯಾವಲೋಕನ ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಬೆಳಕಾದ ನುಡಿ ಬದುಕಾದ ಅರಿವು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಶ್ರೀಗಳ ವಚನ ಚಿಂತನೆಗಳು ಸಮಾಜವನ್ನು ಜಾಗೃತಗೊಳಿಸುವ ಶಕ್ತಿ ಹೊಂದಿವೆ ಎಂದರು. ಸಾನ್ನಿಧ್ಯ ವಹಿಸಿದ್ದ ಶಿರೋಳ ತೋಂಟದಾರ್ಯ ಶಾಖಾಮಠ ಹಾಗೂ ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀಗಳ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಪ್ರಾಚಾರ್ಯ ಡಾ. ರಾಜೇಶ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಟಿ. ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಧಾರವಾಡದ ಶಶಿ ಸಾಲಿ ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ವಿ. ಬಳಿಗೇರ ಹಾಗೂ ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಅರ್ಜುನ ಗೊಳಸಂಗಿ ಉಪಸ್ಥಿತರಿದ್ದರು.

ವಿಚಾರ ಸಂಕಿರಣದ ಗೋಷ್ಠಿಗಳಲ್ಲಿ ಡಾ. ರಮೇಶ ಮ. ಕಲ್ಲನಗೌಡರ ವಚನಾನುಭವ ಚಿಂತನ, ಪ್ರಕಾಶ ಗಿರಿಮಲ್ಲನವರ ದಾರ್ಶನಿಕ ಚಿಂತನ, ಪ್ರೊ. ಶಕುಂತಲಾ ಸಿಂಧೂರ ಚಿಂತನ ಸಾಹಿತ್ಯ ಹಾಗೂ ಪ್ರೊ. ವಿಶ್ವನಾಥ ಜಿ. ವಿನೋಬಾ ಕೃತಿ ಸಂಚಯ ವಿಷಯಗಳ ಕುರಿತು ವಿಷಯ ಮಂಡಿಸಿದರು. ಸಮಾರೋಪ ಭಾಷಣವನ್ನು ಪ್ರೊ. ಎಸ್.ಎಸ್. ಹರ್ಲಾಪೂರ ನೆರವೇರಿಸಿದರು.

ಐಕ್ಯುಎಸಿ ಸಂಯೋಜಕ ಡಾ. ಜಿ.ಕೆ. ರಮೇಶ, ಪ್ರಾಧ್ಯಾಪಕಿ ಸಂಗೀತಾ ಒಣಗೇರಿ, ಎಸ್.ಎಸ್. ಪಟ್ಟಣಶೆಟ್ಟಿ, ಡಾ. ಚಂದ್ರಶೇಖರ ವಸ್ತ್ರದ, ಡಾ. ವೆಂಕಟಾಪೂರ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೇಜಸ್ವಿನಿ ಮಾಗಡಿ ಪ್ರಾರ್ಥಿಸಿದರು.ತೋಂಟದ ಸಿದ್ಧರಾಮ ಶ್ರೀಗಳು ಶೋಷಿತರ, ರೈತರ ಹಾಗೂ ನಾಡು ನುಡಿಯ ಸಂಕಷ್ಟಗಳಿಗೆ ಸದಾ ಮಿಡಿದವರು. ವಚನ ತತ್ವಗಳನ್ನು ಕೇವಲ ಬೋಧನೆಗೆ ಸೀಮಿತ ಮಾಡದೆ ತಮ್ಮ ಬದುಕಿನುದ್ದಕ್ಕೂ ಕ್ರಿಯಾರೂಪಕ್ಕೆ ತಂದ ಇವರ ಜೀವನ ಹಾಗೂ ಸಾಹಿತ್ಯಿಕ ನಿಲುವು ಪ್ರತಿಯೊಬ್ಬರಿಗೂ ಸದಾ ಆದರ್ಶಪ್ರಾಯರು.

ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಹಿರಿಯ ಸಾಹಿತಿ