ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜೀರ್ಣೋದ್ಧಾರವಾಗುತ್ತಿರುವ ತಾಲೂಕಿನ ಬೇಲದಕೆರೆ ಗ್ರಾಮದ ಅಮೃತೇಶ್ವರ ದೇವಾಲಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೈಸೂರಿನಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಗೆ ಆಗಮಿಸಿದ ಡಾ.ವೀರೇಂದ್ರ ಹೆಗ್ಗಡೆ ಅವರು ಸಂಸ್ಥೆಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.
ನಂತರ ಪ್ರಾಚೀನ ಪರಂಪರೆಯ ಸಂರಕ್ಷಣೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಮಂಚೀಬೀಡು, ಹರಿಹರಪುರ, ಮಡುವಿನಕೋಡಿ ಮತ್ತು ಬೇಲದಕೆರೆ ದೇವಾಲಯಗಳ ಮಾಹಿತಿ ಪಡೆದ ಡಾ.ವೀರೇಂದ್ರ ಹೆಗ್ಗಡೆ ದೇವಾಲಯ ಕಾಮಗಾರಿ ಪರಿಶೀಲನೆಗಾಗಿ ಬೇಲದಕೆರೆ ಗ್ರಾಮಕ್ಕೆ ತೆರಳಿದರು.ಯಾವುದೇ ಪೂರ್ವ ಸೂಚನೆಯಿಲ್ಲದೆ ಗ್ರಾಮಕ್ಕೆ ಆಗಮಿಸಿದ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಕಂಡು ಗ್ರಾಮದ ಜನ ಸಂತಸಪಟ್ಟರಲ್ಲದೆ ಮಂಗಳವಾದ್ಯಗಳೊಂದಿಗೆ ಪೂಜ್ಯರನ್ನು ಬರಮಾಡಿಕೊಂಡರು. ಬೇಲದಕೆರೆ ಅಮೃತೇಶ್ವರ ದೇವಾಲಯವನ್ನು ವೀಕ್ಷಿಸಿ ಕಾಮಗಾರಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
ಭಾರತೀಯ ಪರಂಪರೇ ಬೇರುಗಳು ಅಡಗಿವೆ:ಈ ವೇಳೆ ಮಾತನಾಡಿದ ಧರ್ಮಾಧಿಕಾರಿಗಳು, ಧರ್ಮ ಮತ್ತು ಸಂಸ್ಕೃತಿಯಲ್ಲಿ ನಮ್ಮ ಭಾರತೀಯ ಪರಂಪರೆಯ ಬೇರುಗಳು ಅಡಗಿವೆ. ಜನರಲ್ಲಿ ಸದಾ ಧಾರ್ಮಿಕ ಪ್ರಜ್ಞೆ ಜಾಗೃತವಾಗಿದ್ದರೆ ಅವರು ಬದುಕು ಧರ್ಮ ಮಾರ್ಗದಲ್ಲಿರುತ್ತದೆ ಎಂದರು.
ಧರ್ಮ ಮಾರ್ಗದಲ್ಲಿ ಬದುಕಿದರೆ ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆ ಇರುತ್ತದೆ. ದೇವಾಲಯಗಳು ನಮ್ಮನ್ನು ಧಾರ್ಮಿಕವಾಗಿ ಮುನ್ನಡೆಸುತ್ತವೆ. ನಮ್ಮ ಅಪ್ರಜ್ಞೆಯಿಂದ ಸಾವಿರಾರು ದೇವಾಲಯಗಳು ವಿನಾಶದ ಅಂಚಿನಲ್ಲಿವೆ. ನಮ್ಮ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.ನಮ್ಮ ಶಿಲಾ ದೇಗುಲಗಳಲ್ಲಿನ ಶಿಲ್ಪ ಕಲೆಯ ಪರಿಚಯ ನಮ್ಮ ಮಕ್ಕಳಿಗೆ ಆಗಬೇಕು. ಇದಕ್ಕಾಗಿ ನಮ್ಮ ಧರ್ಮಸ್ಥಳ ಟ್ರಸ್ಟ್ ಆಯಾ ಭಾಗದ ಜನರ ಸಹಭಾಗಿತ್ವದೊಂದಿಗೆ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದೆ. ಸಂಪೂರ್ಣ ಹಾಳಾಗಿದ್ದ ಬೇಲದಕೆರೆಯ ಅಮೃತೇಶ್ವರ ದೇವಾಲಯ ಹೆಚ್ಚು ಕಡಿಮೆ ಪೂರ್ಣಗೊಂಡಿದೆ. ಒಂದಷ್ಟು ಸಣ್ಣಪುಟ್ಟ ಕೆಲಸಗಳಷ್ಟೆ ಬಾಕಿಯಿವೆ ಎಂದರು.
ಈ ವೇಳೆ ಸಂಸ್ಥೆ ತಾಲೂಕು ಯೋಜನಾಧಿಕಾರಿ ಮಮತಾಶೆಟ್ಟಿ, ಗ್ರಾಮ ಮುಖಂಡ ನಂಜಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದು ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ತಮ್ಮೂರಿನ ದೇವಾಲಯದ ಪ್ರಾಚೀನತೆ ಮತ್ತು ಮಹತ್ವವನ್ನು ಪರಿಚಯಿಸಿದರು.