ರಾಷ್ಟ್ರೀಯ ಅರಿಶಿಣ ಮಂಡಳಿ ಸದಸ್ಯ ಡಾ. ವಿಷ್ಣುವರ್ಧನ ದೇವೇಲ ನಾಯ್ಕ್ ಅವರು ನಗರದ ಎಪಿಎಂಸಿಯಲ್ಲಿರುವ ಅರಿಶಿಣ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- ಜಿಲ್ಲೆಯ ಎಪಿಎಂಸಿ ಅರಿಶಿಣ ಮಾರುಕಟ್ಟೆಗೆ ಡಾ. ವಿಷ್ಣುವರ್ಧನ ನಾಯ್ಕ್‌ ಭೇಟಿ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಷ್ಟ್ರೀಯ ಅರಿಶಿಣ ಮಂಡಳಿ ಸದಸ್ಯ ಡಾ. ವಿಷ್ಣುವರ್ಧನ ದೇವೇಲ ನಾಯ್ಕ್ ಅವರು ನಗರದ ಎಪಿಎಂಸಿಯಲ್ಲಿರುವ ಅರಿಶಿಣ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ 3000 ಕ್ವಿಂಟಲ್‌ ಅರಿಶಿಣ ಮಾರುಕಟ್ಟೆಗೆ ಬಂದಿದ್ದು, ಆ ಬಗ್ಗೆ ಮಾಹಿತಿ ಪಡೆದರು. ರಾಜ್ಯದಲ್ಲಿ ಅತಿ ಹೆಚ್ಚು ಅರಿಶಿಣ ಬೆಳೆಯುವ ಜಿಲ್ಲೆಯಾದ ಚಾಮರಾಜನಗರಕ್ಕೆ ಭೇಟಿ ನೀಡಿ ಮಾಹಿತಿ ತಿಳಿದುಕೊಂಡರು.

ಬಳಿಕ ಮಾತನಾಡಿ, ಶೀಘ್ರವೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತ ಉತ್ಪಾದಕ ಸಂಸ್ಥೆಗಳು, ರೈತ ಸಂಘಟನೆಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಅರಿಶಿಣ ಬೆಳೆಯುವ ರೈತರ ಸಭೆಯನ್ನು ನಡೆಸಲಾಗುವುದು. ಅರಿಶಿಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸಲಾಗುವುದು ಎಂದರು.

ಅರಿಶಿಣ ಬೆಳೆಯುವ ರೈತರಿಗೆ ಬಾಯ್ಲರ್‌, ಡ್ರೈಯರ್‌, ಟಾರ್ಪಲಿನ್‌, ಸಂಸ್ಕರಣ ಘಟಕಗಳಿಗೆ ಹಣಕಾಸು ನೆರವು. ತಾಂತ್ರಿಕ ತರಬೇತಿ ಕೊಡಿಸಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್‌ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಅರಿಶಿಣವನ್ನು ಹೆಚ್ಚು ಬೆಳೆಯಲಾಗುತ್ತಿದೆ. ಉಳಿದ ಎಲ್ಲ ಕಡೆಗಳಿಗಿಂತ ಚಾಮರಾಜನಗರ ಜಿಲ್ಲೆಯ ಅರಿಶಿಣದಲ್ಲಿ ಕರ್ಕುಮಿನ್ ಅಂಶ ಶೇ.4ಕ್ಕಿಂತ ಹೆಚ್ಚು ಇದೆ. ಕರ್ಕುಮಿನ್ ಹೆಚ್ಚು ಇರುವ ಅರಿಶಿಣದಲ್ಲಿ ಔಷಧೀಯ ಗುಣಗಳು ಹೆಚ್ಚು. ಹಾಗಾಗಿ ಬೇಡಿಕೆ ಹೆಚ್ಚಿದೆ ಎಂದರು.

ಚಾಮರಾಜನಗರ ಜಿಲ್ಲೆಯಲ್ಲಿ 8500 ಹೆಕ್ಟೇರ್‌ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದೆ. ಜಿಲ್ಲೆಯ ರೈತರು ಅರಿಶಿಣ ಬೆಳೆಯುತ್ತಾರೆ. ಮಾರುತ್ತಾರೆ. ಆದರೆ ಕೌಶಲ್ಯ ಅಳವಡಿಸಿಕೊಂಡು, ಮೌಲ್ಯವರ್ಧನೆ ಮಾಡಬಹುದು. ಅರಿಶಿಣ ಮಂಡಳಿಯಿಂದ ಬೇಕಾದ ತರಬೇತಿ, ತಾಂತ್ರಿಕ ನೆರವು ನೀಡಿ ಎಂದು ಸಲಹೆ ನೀಡಿದರು.

ಅರಿಶಿಣ ಮಾರುಕಟ್ಟೆಗೆ ಬಂದಿದ್ದ ರೈತರು ಮಾತನಾಡಿ, ಬೆಲೆ ಸ್ಥಿರೀಕರಣ ಮಾಡಬೇಕು. ಒಮ್ಮೆ ಕ್ವಿಂಟಲ್‌ಗೆ 8 ಸಾವಿರ ರು. ಇದ್ದರೆ, ಇನ್ನೊಮ್ಮೆ 13 ಸಾವಿರಕ್ಕೆ ಬೆಲೆ ದೊರಕುತ್ತದೆ. ಹಾಗಾಗಿ ಅರಿಶಿಣಕ್ಕೆ ಸ್ಥಿರವಾದ ಬೆಲೆ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಸುಸ್ಥಿರವಾಗಿ ನಿಲ್ಲುವ ಹೊಸ ತಳಿಗಳನ್ನು ಪರಿಚಯಿಸಬೇಕು. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಅರಿಶಿಣ ಬಿತ್ತನೆಗೆ ಅನುಕೂಲವಾಗುವ ತಳಿಗಳನ್ನು ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಜಗದೀಶ್, ಸಹಾಯಕ ಕಾರ್ಯದರ್ಶಿ ಮಧುಕುಮಾರ್‌ ಮತ್ತು ರೈತರು ಹಾಜರಿದ್ದರು.

---

28ಸಿಎಚ್ಎನ್‌14ಅ

ರಾಷ್ಟ್ರೀಯ ಅರಿಶಿಣ ಮಂಡಳಿ ಸದಸ್ಯ ಡಾ. ವಿಷ್ಣುವರ್ಧನ ದೇವೇಲ ನಾಯ್ಕ್ ಅವರು ಎಪಿಎಂಸಿ ಅರಿಶಿಣ ಮಾರುಕಟ್ಟೆಗೆ ಭೇಟಿ ನೀಡಿದರು.