ಸಾರಾಂಶ
ಹುಬ್ಬಳ್ಳಿ: ಡಾ. ಕೆ.ಎಸ್. ಶರ್ಮಾ ಅವರು ನನ್ನ ಗುರುಗಳು. ಅವರ ದೇಹಕ್ಕೆ ವಯಸ್ಸಾಗಿದೆಯೇ ಹೊರತು ಅವರ ಮೆದುಳು, ಬರವಣಿಗೆ, ಕಾರ್ಮಿಕರ ಚಿಂತನೆಗಳಿಗಲ್ಲ. ಶೋಷಿತ ಜನಾಂಗಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಅವರ ಹೋರಾಟ ಇತರರಿಗೆ ಮಾದರಿಯಾಗಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ಗೋಕುಲ್ ರಸ್ತೆ ಬಸವೇಶ್ವರ ನಗರದ ವಿಶ್ವಶ್ರಮ ಚೇತನದ ಡಾ. ಕೆ.ಎಸ್. ಶರ್ಮಾ ಸಭಾಂಗಣದಲ್ಲಿ ಡಾ. ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಕೆ.ಎಸ್. ಶರ್ಮಾ ಅವರ 91ನೇ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಡಾ. ಶರ್ಮಾ ಅವರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಹೋರಾಟಕ್ಕೆ ಪೂರಕವಾದ ಕಾರ್ಯ ಮಾಡಿದ್ದೇನೆ. 23 ಸಾವಿರ ದಿನಗೂಲಿ ನೌಕರರ ಖಾಯಂಯಾತಿಗೆ ಶ್ರಮಿಸಿದ್ದಾರೆ ಎಂದರು.
ಬಸವ ಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿ, ಶರ್ಮಾ ಅವರಲ್ಲಿನ ಹುಮ್ಮಸ್ಸು, ಚೈತನ್ಯ ಆಗಾಧವಾಗಿದೆ. ಅವರಿಂದ ನಾಡಿಗೆ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ. ಶರ್ಮಾ ಅವರು ದೇಶದಲ್ಲಿನ ಎಲ್ಲ ದಿನಗೂಲಿ ನೌಕರರಿಗೆ ಆಪತ್ಬಾಂಧವ ಆಗಿದ್ದರು. ಪ್ರಾಮಾಣಿಕ ಹೋರಾಟದಿಂದಲೇ ದಿನಗೂಲಿಗಳ ಬಗ್ಗೆ ಸುಪ್ರೀಂಕೋರ್ಟ್ ನ ಕಣ್ಣು ತೆರೆಸುವಲ್ಲಿ ಯಶಸ್ವಿಯಾದವರು. ಹೋರಾಟದ ಜತೆಗೆ ಸಾಹಿತ್ಯ ಹಾಗೂ ಕಾವ್ಯಗಳನ್ನು ಬರೆದಿರುವ ಅವರಿಗೆ ದೇವರು ಹೆಚ್ಚಿನ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಹಾರೈಸಿದರು.ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಕೆ.ಎಸ್. ಶರ್ಮಾ ಅವರು ತಮ್ಮ ಸುದೀರ್ಘ ಜೀವನದ ಹೋರಾಟದ ಹಾದಿಯನ್ನು ಸ್ಮರಿಸಿದರು. ಕಾರ್ಮಿಕರಿಗೆ ಆಗುವಂತಹ ಅನ್ಯಾಯಗಳನ್ನು ನೋಡಿದರೆ, ಅನ್ಯಾಯ ಮಾಡುವವರನ್ನು ಸುಟ್ಟು ಹಾಕಬೇಕು. ಎಂದಿಗೂ ಕೂಡಾ ಅನ್ಯಾಯ ಸಹಿಸಬಾರದು ಎಂದರು.
ಜಿಲ್ಲಾ ವಿಶ್ರಾಂತ ನ್ಯಾಯಾಧೀಶ ಎನ್.ಬಿ. ಕುಲಕರ್ಣಿ ಮಾತನಾಡಿದರು. ಗಾಯಕಿ ಶಶಿಕಲಾ ಅಕ್ಕಿ ತಂಡದಿಂದ ಲಾವಣಿ ಪದ ಹಾಗೂ ತತ್ವಪದ ಪ್ರಸ್ತುತಪಡಿಸಲಾಯಿತು. ಸುಷ್ಮಾ ಚವಟೆ ಗಾಯನ ಪ್ರಸ್ತುತ ಪಡಿಸಿದರು. ಇವರಿಗೆ ನಾಗರಾಜ ಕಡ್ಲಾಸ್ಕರ್ ತಬಲಾ ಸಾಥ್ ನೀಡಿದರು. ಸಂಜೀವಿನಿ ಆರ್ಯುವೇದ ಮಹಾವಿದ್ಯಾಲಯದ ಹಾಗೂ ಐಟಿಐ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಡಾ. ಕೆ.ಎಸ್. ಶರ್ಮಾ ಅವರ ಅಂಕಣ ಬರಹಗಳ "ಚಿಂತನ ಮಂಥನ " ಸಂಪುಟ-31 ಹಾಗೂ ಪುನರ್ ಮುದ್ರಣಗೊಂಡಿರುವ ವರಕವಿ ಡಾ. ದ.ರಾ. ಬೇಂದ್ರೆಯವರ ವಿರಚಿತ ಕವನ ಸಂಗ್ರಹಗಳಾದ ನಾದಲೀಲೆ ಹಾಗೂ ಮುಗಿಲ ಮಲ್ಲಿಗೆ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಸಾಹಿತಿ ರಂಜಾನ್ ದರ್ಗಾ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಸುಮಿತ್ರಾ ಪೋತ್ನೀಸ್, ಪುನರ್ವಸು ಬೇಂದ್ರೆ, ಸಂಜೀವಿನಿ ಆರ್ಯುವೇದ ಮಹಾವಿದ್ಯಾಲಯದ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಡಾ. ಸೋಮಶೇಖರ್ ಹುದ್ದಾರ, ಸೊಲೋಚನಾ ಪೋತ್ನೀಸ್, ರವೀಂದ್ರ ಶರೋಳ್ಳರ್ ಸೇರಿದಂತೆ ಹಲವರಿದ್ದರು.