ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 2026ನೇ ಸಾಲಿನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಪುರುಷ, ಮಹಿಳೆ ಮತ್ತು ಇತರೆ ಮತದಾರರು ಒಳಗೊಂಡಂತೆ ಒಟ್ಟು 13,93,163 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 2026ನೇ ಸಾಲಿನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಪುರುಷ, ಮಹಿಳೆ ಮತ್ತು ಇತರೆ ಮತದಾರರು ಒಳಗೊಂಡಂತೆ ಒಟ್ಟು 13,93,163 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪೂವಿತಾ ಎಸ್. ತಿಳಿಸಿದರು.ಸ್ಥಳೀಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಮತದಾರರ ಪಟ್ಟಿಯಿಂದ ಒಟ್ಟು 3,21,396 ಮತದಾರರನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಮರಣ ಹೊಂದಿದವರು 61,385, ಫರ್ಮನೆಂಟ್ ಆಗಿ ಶಿಫ್ಟ್ ಆದವರು 1,87,941, ಆಬ್ಸೆಂಟಿ ಮತದಾರರು 30,733 ಹಾಗೂ 365 ಇತರರು ಒಳಗೊಂಡಿದೆ ಎಂದರು.
2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಈ ಬಾರಿಯ ಕರಡು ಪಟ್ಟಿಯಲ್ಲಿ 3,21,396 (ಶೇಕಡಾ 18.75%) ಮತದಾರರ ವ್ಯತ್ಯಾಸವಿದೆ. ಯುವ ಮತದಾರರು (18-19 ವಯಸ್ಸು) 11,56,627 ಜನರು ಕರಡು ಪಟ್ಟಿಯಲ್ಲಿ ದ್ದಾರೆ. ಅಲ್ಲದೆ 17,048 ಮತದಾರರು ವಿವಿಧ ರೀತಿಯಲ್ಲಿ ವಿಕಲಚೇತನ ಮತದಾರರು ಪಟ್ಟಿಯಲ್ಲಿದ್ದಾರೆ.ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಹಕ್ಕು / ಆಕ್ಷೇಪಣೆ ಸಲ್ಲಿಸಲು ಅವಧಿ: ಆಗಸ್ಟ್ 27, 2026 ರಿಂದ ಅಕ್ಟೋಬರ್ 22, 2026 ರವರೆಗೆ ಅವಕಾಶ ನೀಡಲಾಗಿದೆ. ಹೊಸ ಮತದಾರರ ನೋಂದಣಿಗೆ ಅಕ್ಟೋಬರ್ 1, 2026ಕ್ಕೆ 18 ವಯಸ್ಸು ಪೂರ್ಣಗೊಳ್ಳುವ ಹೊಸ ಮತದಾರರು ಫಾರ್ಮ್-6 ಅನ್ನು ಆನ್ಲೈನ್ ಮೂಲಕ ಅಥವಾ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಸಲ್ಲಿಸಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.
ಎಲ್ಲಾ ಪರಿಷ್ಕರಣೆ ಹಾಗೂ ಆಕ್ಷೇಪಣೆಗಳ ವಿಲೇವಾರಿಯ ನಂತರ ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27, 2026 ರಂದು ಬಿಡುಗಡೆಯಾಗಲಿದೆ. ಸಾರ್ವಜನಿಕರು ತಮ್ಮ ಹೆಸರುಗಳ ಪರಿಶೀಲನೆ, ವಿಳಾಸ ಬದಲಾವಣೆ ಅಥವಾ ಹೊಸ ಸೇರ್ಪಡೆಗಾಗಿ ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದರು.ಈ ವೇಳೆ ಎಸಿ ಡಾ.ಹಂಪಣ್ಣ ಸಜ್ಜನ್, ಚುನಾವಣಾ ಶಾಖೆಯ ಶಿರಸ್ತಾದರ ಋಶಿಕೇಶಿ ಸೇರಿ ಇತರರು ಇದ್ದರು.
ನಗರ, ಗ್ರಾಮೀಣ ಕ್ಷೇತ್ರದ ಮತದಾರರ ಪಟ್ಟಿ: ಕಳೆದ 2 ತಿಂಗಳಿಂದ ಬೂತ್ ಮಟ್ಟದ ಅಧಿಕಾರಿಗಳು, ಸೂಪರ್ ವೈಸರ್ಗಳು ಮತ್ತು ನೋಡಲ್ ಅಧಿಕಾರಿಗಳು ನಿರಂತರವಾಗಿ ಶ್ರಮಿಸಿ, ಅರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ರಾಯಚೂರು ಜಿಲ್ಲೆಯಲ್ಲಿ 53 ಗ್ರಾಮೀಣ ಮತ ಕ್ಷೇತ್ರಗಳು ಹಾಗೂ 54 ನಗರ ಮತಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಹಸೀಲ್ದಾರ್ ಸುರೇಶ ವರ್ಮಾ ಹೇಳಿದರು.ಸ್ಥಳೀಯ ಪಾಲಿಕೆ (ಹಳೆ ಸಿಎಂಸಿ ) ಕಚೇರಿಯ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಗ್ರಾಮೀಣ ಮತಕ್ಷೇತ್ರದಲ್ಲಿ ಒಟ್ಟು 2,39,883 ಮತದಾರರಿದ್ದು, 1,98,809 ಜನರನ್ನು ಮ್ಯಾಪಿಂಗ್ ಮಾಡಲಾಗಿದೆ. ಒಟ್ಟು ಶೇ.82.88% ರಷ್ಟು ಮ್ಯಾಪಿಂಗ್ ಮತ್ತು ಪ್ರೊಜೆನಿ ಆಗಿದ್ದು, ಇವರನ್ನು ಅರ್ಹ ಮತದಾರರೆಂದು ಗುರುತಿಸಲಾಗಿದೆ.
41,074 ಜನರನ್ನು ಆಬ್ಸೆಂಟ್, ಶಿಫ್ಟ್, ಡೆತ್ ಅಡಿಯಲ್ಲಿ ಗುರುತಿಸಲಾಗಿದೆ. ಈ ಹಿಂದೆ ಗ್ರಾಮೀಣ ಮತಕ್ಷೇತ್ರದಲ್ಲಿ 275 ಮತ ಕೇಂದ್ರಗಳಿದ್ದವು, ಪ್ರಸ್ತುತ 3 ಹೆಚ್ಚಾಗಿ 278 ಮತ ಕೇಂದ್ರಗಳಾಗಿವೆ. ಅಲ್ಲದೆ ಸುಮಾರು 14,000 ಮತದಾರರನ್ನು ಹಿಯರಿಂಗ್ ಮಾಡುವುದರ ಮೂಲಕ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.ನಗರ ಮತ ಕ್ಷೇತ್ರಗಳ ಅಂಕಿ-ಅಂಶಗಳು: ಒಟ್ಟು 2,55,403 ಮತದಾರರಿದ್ದು, 1,80,072 ಜನರನ್ನು ಅರ್ಹ ಮತದಾರರೆಂದು ಗುರುತಿಸಲಾಗಿದೆ (ಸುಮಾರು 70%). ಆಬ್ಸೆಂಟ್/ ಶಿಫ್ಟ್/ ಡೆತ್ 75,331 ಮತದಾರರನ್ನು ಗುರುತಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶರಣಪ್ಪ ಸತ್ಯಂ ಪೇಟ್ ಸೇರಿ ತಹಸೀಲ್ದಾರ್ ಕಚೇರಿ ಹಾಗೂ ಮಹಾನಗರ ಪಾಲಿಕೆಯ ಚುನಾವಣಾ ಶಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.