ಸಾರಾಂಶ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ಮನೆ ನಿರ್ಮಾಣಕ್ಕೆ ಇದ್ದ ಹಲವಾರು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ಮನೆ ನಿರ್ಮಾಣಕ್ಕೆ ಇದ್ದ ಹಲವಾರು ತೊಡಕುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.ಈ ಕರಡು ಅಧಿಸೂಚನೆಯಲ್ಲಿ ಕೃಷಿ ವಲಯದಲ್ಲಿ ಮನೆ ನಿರ್ಮಾಣದ ಉದ್ದೇಶಕ್ಕೆ ನಿಗದಿ ಪಡಿಸಿದ್ದ 11.1.2023 ರ ಗಡುವು ರದ್ದುಪಡಿಸಿದ್ದು, ಅವೈಜ್ಞಾನಿಕ ಉದ್ದೇಶಿತ ರಸ್ತೆ, ಎಚ್.ಟಿ. ವಿದ್ಯುತ್ ಮಾರ್ಗ, ರೈಲು ಮಾರ್ಗ, ತೋಡು ಮತ್ತಿತರ ವಿಷಯಗಳಲ್ಲಿ ಝೋನಲ್ ರೆಗ್ಯುಲೇಷನ್‌ನಲ್ಲಿ ವಾಸ್ತವಕ್ಕಿಂತ ಭಿನ್ನವಾಗಿ ನಮೂದಿಸಿದ ಅಂಶಗಳನ್ನು ಸರಿಪಡಿಸಲು ಹಾಗೂ ಸಾರ್ವಜನಿಕ ಅಥವಾ ಅರೆ ಸಾರ್ವಜನಿಕ ವಲಯವನ್ನಾಗಿ ತಪ್ಪಾಗಿ ಗುರುತಿಸಿರುವ ಸ್ಥಳಗಳ ಕ್ರಮಬದ್ಧ ಅವಕಾಶ ಕಲ್ಪಿಸಲಾಗಿದೆ.ಉಡುಪಿ ನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿಯ ಹಲವಾರು ವರ್ಷಗಳಿಂದ ಮನೆ ನಿರ್ಮಾಣಕ್ಕೆ ತೊಡಕಾಗಿದ್ದ ಬಗ್ಗೆ ಈ ಹಿಂದೆ ನಗರಾಭಿವೃದ್ದಿ ಸಚಿವರು ಮತ್ತು ಅಧಿಕಾರಿಗಳಿಗೆ ಪತ್ರ ಬರೆದು ನಿಯಮಗಳನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದು ಮತ್ತು ಹಿಂದಿನ ವಿಧಾನಸಭಾ ಅಧಿವೇಶನದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದು, ಇದೀಗ ನಗರಾಭಿವೃದ್ದಿ ಇಲಾಖೆ ನಮ್ಮ ಮನವಿಗೆ ಸ್ಪಂದಿಸಿ ಕರಡು ಅಧಿಸೂಚನೆ ಹೊರಡಿಸುವ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಿದೆ ಹಾಗೂ ಈ ಕರಡು ಅಧಿಸೂಚನೆ ಬಗ್ಗೆ ಸಾರ್ವಜನಿಕರು ತಮ್ಮ ಯಾವುದೇ ಸಲಹೆ ಸೂಚನೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.