ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಸರ್ವರ ಕಲ್ಯಾಣ ಸರ್ವರ ಜೊತೆ ಎಂದೆನ್ನಲಾಗುತ್ತಿದ್ದರೂ ಇಂದು ಅನೇಕ ಕಾಯ್ದೆಗಳನ್ನು ರೂಪಿಸಿ ಒಂದು ಸಮುದಾಯವನ್ನು ಗುರಿಯಾಗಿಸಿಟ್ಟುಕೊಂಡು ಅನ್ಯಾಯ, ಅತ್ಯಾಚಾರ, ದೌರ್ಜನ್ಯ ನಡೆಸಲಾಗುತ್ತಿದ್ದು, ಇದರಿಂದ ದೇಶದ ಏಕತೆ, ಅಖಂಡತೆಗೆ ಧಕ್ಕೆ ತರುವಂಥ ಕೆಲಸವನ್ನು ಕೆಲ ಕೋಮುವಾದಿ ಶಕ್ತಿಗಳು ಮಾಡುತ್ತಿವೆ. ಇದರಿಂದ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧೋ ಪರೋಕ್ಷವಾಗಿ ತಿವಿದರು.ಅವರು ಭಾನುವಾರ ಸಂಜೆ ಬಸವಕಲ್ಯಾಣದ ಬಟಗೇರಾ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ಧರ್ಮಗಳಿಂದ ಮಾನವೀಯ ಧರ್ಮ ಮೇಲು, ಸಂವಿಧಾನ ನಮ್ಮ ಉಸಿರು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು ಅವರು ರಚಿಸಿದ ಸಂವಿಧಾನಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಿದೆ. ಹಾಗೆಯೇ ದೇಶದಲ್ಲಿ ಜಾತಿಯತೆ, ಅಸಮಾನತೆ ಹೆಚ್ಚುತ್ತಿದೆ, ಬಡತನ ಹಾಗೆಯೇ ಇದೆ. ಕವಲು ದಾರಿಯಲ್ಲಿ ಸಾಗುತ್ತಿದೆ. ಇದನ್ನೆಲ್ಲ ನಿವಾರಣೆ ಮಾಡಲು ಯೋಚಿಸಬೇಕಿದೆ ಎಂದರು.
ಡಾ. ಬಿಆರ್ ಅಂಬೇಡ್ಕರ್ ಅವರ ತತ್ವಾದರ್ಶ, ಮಾರ್ಗದರ್ಶನವನ್ನು ನಾವು ಜೀವನದಲ್ಲಿ ಜಾರಿಗೆ ತರಬೇಕು. ಅವರು ಸಮ ಸಮಾಜ ನಿರ್ಮಾಣದ ಕನಸು ಕಂಡವರು. ಅನ್ಯಾಯ, ಅತ್ಯಾಚಾರ, ಕಂದಾಚಾರ, ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡುವ ಮೂಲಕ ಬಾಲ್ಯದಿಂದಲೇ ಜ್ಞಾನಿಗಳಾಗಿ ಮುಂದೆ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದವರು ಎಂದರು.ಸಂವಿಧಾನ ಜಾರಿಯಾಗಿ 75 ವರ್ಷ ಕಳೆದಿದ್ದು ತದನಂತರ ಸಾಕಷ್ಟು ಬದಲಾವಣೆಗಳನ್ನು ದೇಶದಲ್ಲಿ ಕಂಡಿದ್ದೇವೆ. ಸಾಕ್ಷರತೆ ಪ್ರಮಾಣ, ಬಡತನ, ಆಹಾರ ಭದ್ರತೆಯಲ್ಲಿ ದೇಶ ಅಭಿವೃದ್ಧಿ ಸಾಧಿಸಿದ್ದು ಸಂವಿಧಾನವೇ ಮೂಲ. ಆದರೆ ಜಾತಿ ಧರ್ಮಗಳ ಮಧ್ಯ ಒಡೆದಾಳುವ ನೀತಿ ಅನುಸರಿಸಿ ಜಾತಿಯ ವೈಶಮ್ಯ ಮೂಡಿಸುವ ಕೆಲಸವನ್ನು ಕೋಮುವಾದಿಗಳು ನಡೆಸುತ್ತಿರುವದು ಖಂಡನೀಯ ಎಂದರು.
ಸಂವಿಧಾನ ಚೆನ್ನಾಗಿದ್ದರೂ ಅನುಷ್ಠಾನ ಮಾಡುವವರು ಕೆಟ್ಟವರಾಗಿದ್ದರೆ. ಕೆಟ್ಟದ್ದಾಗಬಹುದು. ಹೀಗಾಗಿ ನಾವು ಕೆಳ ಹಂತದಿಂದ ಮೇಲಿನವರೆಗೆ ಯಾವ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತೇವೆ ಎಂಬುವದನ್ನು ಗಂಭೀರವಾಗಿ ಆಲೋಚನೆ ಮಾಡಬೇಕಾಗುತ್ತೆ. ಈ ನಿಟ್ಟಿನಲ್ಲಿ ಒಳ್ಳೆಯವರಿಗೆ ಆಯ್ಕೆ ಮಾಡಿದರೆ ಒಳ್ಳೆಯದೇ ಆಗುತ್ತದೆ ಎಂಬುವದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ ಮಾಡಬೇಕಿದೆ ಎಂದು ಮುಂಬರುವ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದ ಕುರಿತು ಪರೋಕ್ಷವಾಗಿ ಮುನ್ಸೂಚನೆ ನೀಡಿದರು.ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಇದರಿಂದ ಎಲ್ಲ ಸಮುದಾಯಕ್ಕೆ ಸಹಾಯವಾಗಿ ಆರ್ಥಿಕ ಭದ್ರತೆ ನೀಡಿದ್ದೇವೆ ಎಂದು ತಿಳಿಸಿದರು.
ಇನ್ನು ಕೆಳಂತದವರು ಸುಶಿಕ್ಷಿತರಾದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ, ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳುವತ್ತ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಸಮಾಜದಲ್ಲಿರುವ ಭ್ರಷ್ಟಾಚಾರ, ಜಾತಿಯತೆ, ಅನ್ಯಾಯ ಅತ್ಯಾಚಾರ ಇದೆ ಇದಕ್ಕಾಗಿ ಪ್ರಜಾಪ್ರಭುತ್ವದ ರೀತಿಯಲ್ಲಿ ಸಂಘರ್ಷದ ಅವಶ್ಯಕತೆಯಿದೆ ಎಂದು ಈಶ್ವರ ಖಂಡ್ರೆ ಕರೆ ನೀಡಿದರು.ಈ ಸಂದರ್ಭದಲ್ಲಿ ಭಂತೆ ಭದಂತ ಸುಮಂಗಲ, ಭದಂತ ದಮಸಾರ ಸಾನಿಧ್ಯವಹಿಸಿದ್ದರು. ಶಾಸಕ ಶರಣು ಸಲಗರ, ಡಾ. ಬಿಆರ್ ಅಂಬೇಡ್ಕರ್ ರತ್ನ ಪ್ರಶಸ್ತಿ ಪುರಸ್ಕೃತ ತಾತ್ಯಾರಾವ್ ಕಾಂಬಳೆ, ಮಾಜಿ ಶಾಸಕ ವಿಜಯಸಿಂಗ್, ಮಾರುತಿರಾವ್ ಮೂಳೆ, ಮಾಲಾ ಬಿ. ನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಬಾಬು ಹೊನ್ನಾ ನಾಯಕ, ದಿಲೀಪ್ ಶಿಂಧೆ, ಶಿವರಾಜ ನರಶೆಟ್ಟಿ, ಕಾರ್ಯಕ್ರಮ ಆಯೋಜಕರಾದ ಸಂಜು ಗಾವಕವಾಡ, ದತ್ತು ಸೂರ್ಯವಂಶಿ, ನಾಗೇಂದ್ರ, ಅಂಬಾದಾಸ ಗಾಯಕವಾಡ ಮತ್ತಿತರರು ಇದ್ದರು.