ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಕೆ.ಸಿ.ವ್ಯಾಲಿ ನೀರನ್ನು ಬೇರೆ ತಾಲೂಕುಗಳಲ್ಲಿ ಸಮರ್ಪಕವಾಗಿ ಹರಿಸುತ್ತಿದ್ದು, ಮಾಲೂರು ತಾಲೂಕಿಗೆ ಮಾತ್ರ ಹೇಗೆ ಕಡಿಮೆಯಾಗಿದೆ. ಇನ್ನೊಂದು ವಾರದಲ್ಲಿ ಮೊದಲಿನಂತೆ ತಾಲೂಕಿನ ಕೆರೆಗಳಿಗೆ ನೀರು ಹರಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಸಿ.ವ್ಯಾಲಿ ಯೋಜನೆಯ ಅಧಿಕಾರಿಗಳಿಗೆ ಶಾಸಕ ನಂಜೇಗೌಡ ತರಾಟೆ ತೆಗೆದುಕೊಂಡರು.ತಾಲೂಕಿನ ಶಿವಾರ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಪಂಚಾಯ್ತಿ ಅಧ್ಯಕ್ಷ ಮುನೇಗೌಡ ಅಧ್ಯಕ್ಷತೆಯಲ್ಲಿ ಕೆ.ಸಿ.ವ್ಯಾಲಿ ಅಧಿಕಾರಿಗಳೂಂದಿಗಿನ ಸಭೆಯಲ್ಲಿ ಕೆಸಿ ವ್ಯಾಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು, ಯೋಜನೆಯಡಿ ತಾಲೂಕಿನ ಶಿವಾರಪಟ್ಟಣ ಸೇರಿದಂತೆ ಈ ಭಾಗದ ೩ ಕೆರೆಗಳನ್ನು ಪೂರ್ಣವಾಗಿ ತುಂಬಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
ಬಹುತೇಕ ಕೆರೆಗಳು ಭರ್ತಿಈ ಯೋಜನೆಯಡಿ ಬರುತ್ತಿದ್ದ ನೀರಿನ ಪ್ರಮಾಣ ಗಣನೀಯವಾಗಿ ಸ್ಥಗಿತಗೊಂಡ ಹಿನ್ನೆಲೆ ಹಾಗೂ ಮಳೆಯ ಕೊರತೆಯಿಂದ ಬಹುತೇಕ ಕೊಳವೆ ಬಾವಿಗಳು ಬತ್ತಿಹೋಗಿವೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ನೇತೃತ್ವದಲ್ಲಿ ಅಕಾರಿಗಳ ಸಭೆ ನಡೆಸಿದ್ದು, ಸ್ವಲ್ಪಮಟ್ಟಿಗೆ ನೀರಿನ ಪ್ರಮಾಣ ಹೆಚ್ಚಾಗಿದೆ.
ನರಸಾಪುರದಿಂದ ಹೆಚ್ಚಿನ ಪ್ರಮಾಣದ ನೀರು ಕೋಲಾರಕ್ಕೆ ಹರಿಯುತ್ತಿದ್ದು, ಶಿವಾರಪಟ್ಟಣ ಕೆರೆ ತುಂಬುವವರೆಗೂ ಈ ಕಡೆ ಹೆಚ್ಚಿನ ನೀರನ್ನು ಹರಿಸಬೇಕು. ಇಲ್ಲಿನ ಕೆರೆ ತುಂಬಿದ ನಂತರ ನಿದರಮಂಗಲ, ನಕ್ಕನಹಳ್ಳಿವರೆಗೂ ಹೋಗುತ್ತದೆ. ಕೊಂಡಶೆಟ್ಟಿಹಳ್ಳಿ ಕೆರೆಯಿಂದ ದಾಸರಹಳ್ಳಿ, ಯಳುವಗುಳಿ, ಸೀತಹಳ್ಳಿವರೆಗೂ ಹರಿಯಲಿದೆ. ಸೊಣ್ಣಹಳ್ಳಿ, ಹುಂಗೇನಹಳ್ಳಿ, ಸಬ್ಬೇನಹಳ್ಳಿ, ಗೊಡ್ಡಶಿವಾದವರೆಗೂ ಹರಿಯಲಿದೆ. ಕನಿಷ್ಠ ಸೊಣ್ಣಹಳ್ಳಿವರೆಗೂ ಹರಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಶಿವಾರಪಟ್ಟಣ ಕೆರೆ ತುಂಬಿಸಿ
ಕಸಬಾ ಹೋಬಳಿಯಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳಲ್ಲಿ ನೀರಿಲ್ಲ. ಕೆಸಿ ವ್ಯಾಲಿ ನೀರು ಬಂದ ನಂತರ ಎಲ್ಲಾ ಕಡೆ ಅಂತರ್ಜಲಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಿತ್ತು. ಆದರೆ ನೀರಿನ ಕೊರತೆಯಿಂದ ಅಂತರ್ಜಲಮಟ್ಟ ಸಂಪೂರ್ಣವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಮೊದಲ ಭಾಗವಾಗಿ ಶಿವಾರಪಟ್ಟಣ ಕೆರೆಯನ್ನು ತುಂಬಿಸಲು ಅಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ನರಸಾಪುರದಿಂದ ಅತಿ ಹೆಚ್ಚಿನ ನೀರನ್ನು ಪಂಪ್ ಮೂಲಕ ಹರಿಸಬೇಕು. ಈ ಭಾಗದಲ್ಲಿ ೩ ಕೆರೆ ತುಂಬುವವರೆಗೂ ಸಹಕಾರ ನೀಡಬೇಕು ಎಂದರು.ಶಿವಾರಪಟ್ಟಣ ಕೆರೆಗೆ ನೀರು ಹರಿಯಬೇಕಾದರೆ ಯಾವ ಕಡೆಗೂ ನೀರನ್ನು ಹರಿಸಬಾರದು. ಕೆರೆಯ ಕೆಳಗಡೆ ಚರಂಡಿ ನಿರ್ಮಿಸುವ ಕಾಮಗಾರಿಗೂ ಕೆರೆಗೆ ನೀರು ಹರಿಯುವುದಕ್ಕೂ ಯಾವುದೇ ಸಂಬಂದವಿಲ್ಲ. ಅದರ ಪಾಡಿಗೆ ಕೆಲಸ ನಡೆಯುತ್ತದೆ. ತಾಲೂಕಿನ ಜನತೆಯಲ್ಲಿ ಬೇರೆ ರೀತಿಯ ಚರ್ಚೆಗಳು ನಡೆಯುತ್ತಿವೆ. ಇಲ್ಲಿನ ವಾಸ್ತಾವಂಶದ ಬಗ್ಗೆ ಯಾರಿಗೂ ತಿಳಿದಿಲ್ಲ. ಅಲ್ಲಿ ಟೆಕ್ನಿಕಲ್ ಸಮಸ್ಯೆ ಉಂಟಾಗಿ ಬೇರೆ ರೀತಿಯಲ್ಲಿ ತೊಂದರೆಯಾಗಿ ನೀರು ಬರುವುದು ಕಡಿಮೆಯಾಗಿದೆ. ಇದರಿಂದ ಇಲ್ಲಿಗೆ ಬರುವ ನೀರಿನ ಪ್ರಮಾಣವು ಕಡಿಮೆಯಾಗಿದೆ ಎಂದರು.
ಕೆರೆ ತುಂಬಿಸಲು 15 ದಿನ ಗಡುವುಕಾಂಗ್ರೆಸ್ ಸರ್ಕಾರ ಬಂದ ಮೇಲೆ ಏಕೆ ಈ ರೀತಿಯಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ೩ ಕೆರೆಗಳು ತುಂಬುವವರೆಗೆ ಅಕಾರಿಗಳು ಬೇರೆ ಕಡೆ ಪಂಪ್ ಮಾಡಬೇಡಿ. ಮುಂದಿನ ೧೫ ದಿನಗಳ ಒಳಗೆ ಶಿವಾರಪಟ್ಠಣ ಕೆರೆ ತುಂಬಿ ಕೊಡಿ ಹರಿಯಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮುನೇಗೌಡ, ಸನೌಸಂ ಅಧ್ಯಕ್ಷ ವಿ.ಮುನೇಗೌಡ, ಪಿಡಿಒ ರಮೇಶ್ ನಾಯಕ್, ಗ್ರಾಪಂ ಉಪಾಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ಜಗನ್ನಾಥಚಾರಿ, ಅನಂತನಾಯಕ್, ರಾಮೇನಹಳ್ಲಿ ಮುನಿರಾಜ್, ಮಾಜಿ ಆಧ್ಯಕ್ಷರಾದ ಹನುಮಂತರೆಡ್ಡಿ, ಸಂಪಂತ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಎಂಜನೀಯರ್ ಹರಿಕೃಷ್ಣ, ಕೆಸಿ ವ್ಯಾಲಿ ಯೋಜನೆಯ ಎಂಜನೀಯರ್ ಕೃಷ್ಣಪ್ಪ ಇನ್ನಿತರರು ಹಾಜರಿದ್ದರು.