ಸಾರಾಂಶ
ಕೆಆರ್ ಎಸ್ ಜಲಾಶಯದ ಮೂಲಕ ನಾಲೆಗಳಿಗೆ ನೀರು ಹರಿಸಬೇಕು. ಕೊಪ್ಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಕಬ್ಬು ಸರಬರಾಜು ಮಾಡಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರನ್ನು ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರುಕೆಆರ್ ಎಸ್ ಜಲಾಶಯದ ಮೂಲಕ ನಾಲೆಗಳಿಗೆ ನೀರು ಹರಿಸಬೇಕು. ಕೊಪ್ಪದ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಕಬ್ಬು ಸರಬರಾಜು ಮಾಡಲು ಅವಕಾಶ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್ .ಚಲುವರಾಯಸ್ವಾಮಿ ಅವರನ್ನು ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಒತ್ತಾಯಿಸಿದರು.ತಾಲೂಕಿನ ಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆದು ನಿಂತಿರುವ ಕಬ್ಬು ಕಟಾವು ಮಾಡಬೇಕಾದರೆ ಜುಲೈ ತಿಂಗಳಲ್ಲಿ ಕಾರ್ಖಾನೆ ಪ್ರಾರಂಭಿಸಿ ಕಬ್ಬುಅರೆಯುವ ಕಾರ್ಯ ನಡೆಸುವಂತೆ ಆಗ್ರಹಿಸಿದರು. ತಾಲೂಕಿನ ಕೊಪ್ಪ ಹೋಬಳಿಯ ರೈತರ ಜಮೀನಿನಲ್ಲಿ ಈಗಾಗಲೇ ಕಬ್ಬು ಬೆಳೆದು ನಿಂತಿದೆ. ಕಾರ್ಖಾನೆ ಪ್ರಾರಂಭಿಸಿ ಕಬ್ಬು ಪೂರೈಕೆ ಮಾಡಲು ಬರದಿಂದ ಬೆಂದಿರುವ ರೈತರು ಆರ್ಥಿಕವಾಗಿ ಅಲ್ಪ ಸ್ವಲ್ಪ ಉಸಿರಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಖಾನೆ ಪ್ರಾರಂಭಿಸುವುದರಿಂದ ಕಬ್ಬು ಸಾಗಾಣಿಕೆ ಮಾಡುವ ಲಾರಿ ಮಾಲೀಕರು, ಚಾಲಕರು ಹಾಗೂ ಕಟಾವು ಮಾಡುವ ಕಾರ್ಮಿಕರಿಗೆ ಬದುಕು ನೀಡಿದಂತಾಗುತ್ತದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಜಲ ಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿ ಕೆಆರ್‌ಎಸ್ ಜಲಾಶಯದಿಂದ ನಾಲೆ ಗಳು ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವುದರ ಜೊತೆಗೆ ಕರೆ ಕಟ್ಟೆಗೆ ನೀರು ತುಂಬಿಸಬೇಕು. ಇಲ್ಲವಾದಲ್ಲಿ ರೈತ ಸಂಘ ಕಬ್ಬು ಬೆಳೆಗಾರರ ಸಂಘದೊಂದಿಗೆ ಸೇರಿ ಚಳವಳಿ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರ ಬರದಿಂದಾಗಿ ಒಣಗಿದ ಕಬ್ಬಿನ ಬೆಳೆಗೆ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ. ಕೂಡಲೇ ಸರ್ಕಾರ ಕೆ ಆರ್ ಎಸ್ ಜಲಾಶಯದ ಆಧುನಿಕ ಕಾಮಗಾರಿಯನ್ನು ಪೂರ್ಣಗೊಳಿಸಿ ನಾಲೆಗಳ ಮೂಲಕ ನೀರು ಹರಿಸುವಂತೆ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಉರುಗಲವಾಡಿ ಉಮೇಶ್, ಪುಟ್ಟಸ್ವಾಮಿ, ಮೂಡ್ಯ ಚನ್ನೇಗೌಡ ಮತ್ತಿತರರು ಇದ್ದರು.