ಸಾರಾಂಶ
ಆಲಮಟ್ಟಿ ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿ ರೈತರನ್ನು ಅಧಿಕಾರಿಗಳು ಯಾಮಾರಿಸುತ್ತಿದ್ದು, ಕೂಡಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.
ಆಲಮಟ್ಟಿ : ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿ ರೈತರನ್ನು ಅಧಿಕಾರಿಗಳು ಯಾಮಾರಿಸುತ್ತಿದ್ದು, ಕೂಡಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಗುರುವಾರ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿದ್ದು, ರೈತರನ್ನು ಹಾಳು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಟಿಜಿಟಿ ಮಳೆಯಿಂದಾಗಿ ನೀರಿನ ಬೇಡಿಕೆ ಇಲ್ಲವೆಂದು ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಸಿದ್ದಾರೆ. ಈ ಅಧಿಕಾರಿಗಳು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಮುಂಗಾರು ಬೆಳೆಗೆ ತುರ್ತಾಗಿ ನೀರು ಅಗತ್ಯವಿದೆ. ಈ ಆಷಾಢ ಮಾಸದ ಗಾಳಿ ಪ್ರಬಲವಾಗಿ ಬೀಸುತ್ತಿರುವುದರಿಂದ ಭೂಮಿಯ ತೇವಾಂಶ ಕಡಿಮೆಯಾಗಿದೆ. ಇದನ್ನು ಅರಿತು ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ರೈತರನ್ನು ಹಾಳುಮಾಡಬೇಕೆಂಬ ಉದ್ದೇಶದಿಂದ ನೀರು ಕೊಡುತ್ತಿಲ್ಲ ಎಂದರು.
ಯಾವ ಭಾಗದಲ್ಲಿ ಮಳೆಯಾಗಿದೆ. ಯಾವ ಯಾವ ಹಳ್ಳಿಯ ರೈತರು ನೀರು ಬೇಡ ಎಂದು ಮನವಿ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ. ಕಳೆದ ಆರು ತಿಂಗಳ ಹಿಂದೆಯೇ ಕಾಲುವೆ ಕಾಮಗಾರಿ ಪ್ರಾರಂಭ ಮಾಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಕಾಲುವೆಗಳಿಗೆ ನೀರು ಹರಿಸದೆ ಇರುವ ಸಂದರ್ಭದಲ್ಲಿ ಕಾಮಗಾರಿ ಮಾಡುವುದನ್ನು ಬಿಟ್ಟು ಈಗ ಉದ್ದೇಶ ಪೂರ್ವಕವಾಗಿ ರೈತರಿಗೆ ನೀರು ಅಗತ್ಯವಿದ್ದಾಗ ಕಾಮಗಾರಿ ಕೈಗೊಳ್ಳುವುದು ಹಣ ಕೊಳ್ಳೆ ಹೊಡಿಯುವ ತಂತ್ರ. ಅದು ಏನೇ ಇದ್ದರೂ ಕಾಮಗಾರಿ ಸ್ಥಗಿತಗೊಳಿಸಿ ಕಾಲುವೆಗಳಿಗೆ ನೀರು ಹರಿಸಬೇಕು. ಒಂದು ವೇಳೆ ನೀರು ಹರಿಸದಿದ್ದರೆ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಈರಣ್ಣ ದೇವರಗುಡಿ, ಬಸಪ್ಪ ಮುಳವಾಡ, ವಿಠ್ಠಲ ಬಿರಾದಾರ, ಹೊನಕೇರಪ್ಪ ತೆಲಗಿ, ಪ್ರಹ್ಲಾದ ನಾಗರಾಳ, ಲಾಲಸಾಬ ಹಳ್ಳೂರ, ಮರಿಗೆಪ್ಪ ಸಾಸನೂರ ಮುಂತಾದವರು ಇದ್ದರು.
ನೀರು ಹರಿಸಲು ರೈತರ ಬೇಡಿಕೆಯಿಲ್ಲ ಎಂಬುದು ತಪ್ಪಾಗಿ ಪ್ರಕಟವಾಗಿದೆ, ಉಪವಿಭಾಗಗಳ ಬೇಡಿಕೆ ಪಡೆದು ಆಲಮಟ್ಟಿ ಎಡದಂಡೆ ಕಾಲುವೆ ಕಿಮೀ 10 ರಲ್ಲಿ ತುರ್ತು ಕಾಲುವೆ ರಿಪೇರಿ ಪೂರ್ಣಗೊಳಿಸಿ ಮೂರು ದಿನಗಳ ಒಳಗೆ ನೀರು ಬಿಡಲಾಗುವುದು ಎಂದು ಆಲಮಟ್ಟಿ ಎಡದಂಡೆ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಲಿಖಿತ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.