ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ: ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಆಗ್ರಹ

| Published : Feb 05 2025, 12:30 AM IST / Updated: Feb 05 2025, 12:31 AM IST

ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿ: ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಬೇಸಿಗೆ ಬೆಳೆಗೆ ಸಾಕಾಗುವಷ್ಟು ನೀರು ಜಲಾಶಯದಲ್ಲಿದೆ. ಹೇಮಾವತಿ ಜಲಾನಯನ ಪ್ರದೇಶದ ರೈತರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ವ್ಯಾಪ್ತಿ ಬೆಳೆದು ನಿಂತಿರುವ ಬೆಳೆಗಳ ಸಂರಕ್ಷಣೆಗೆ ಹೇಮಾವತಿ ಜಲಾಶಯದಿಂದ ಹೇಮಾವತಿ ಎಡದಂಡೆ ಮತ್ತು ನದಿ ಅಣೆಕಟ್ಟೆ ನಾಲೆಗಲಾದ ಮಂದಗೆರೆ ಎಡ ಮತ್ತು ಬಲದಂಡೆ ಹಾಗೂ ಹೇಮಗಿರಿ ನಾಲೆಗಳಿಗೆ ನೀರು ಹರಿಸುವಂತೆ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಆಗ್ರಹಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹೇಮಾವತಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ನೀರಿಲ್ಲದೆ ರೈತರು ಬೆಳೆದಿರುವ ಕಬ್ಬು, ಬಾಳೆ, ತೆಂಗು, ಅಡಿಕೆ, ರಾಗಿ ಮುಂತಾದ ಬೆಳೆಗಳು ಒಣಗುತ್ತಿವೆ. ರಾಜ್ಯ ಸರ್ಕಾರ ತಕ್ಷಣವೇ ಇತ್ತ ಗಮನ ಹರಿಸಿ ನೀರು ಹರಿಸಿ ರೈತರ ನೆರವಿಗೆ ದಾವಿಸಿ ಬರುವಂತೆ ಆಗ್ರಹಿಸಿದರು.

ಸರ್ಕಾರ ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹೇಮಾವತಿ ಜಲಾಶಯ ಭರ್ತಿಯಾಗಿದೆ. ಬೇಸಿಗೆ ಬೆಳೆಗೆ ಸಾಕಾಗುವಷ್ಟು ನೀರು ಜಲಾಶಯದಲ್ಲಿದೆ. ಹೇಮಾವತಿ ಜಲಾನಯನ ಪ್ರದೇಶದ ರೈತರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸಿದೆ ಎಂದು ದೂರಿದರು.

ತಕ್ಷಣವೇ ಸರ್ಕಾರದ ಹೇಮಾವತಿ ಜಲಾಶಯದಿಂದ ತಾಲೂಕಿನ ಕಾಲುವೆಗಳಿಗೆ ನೀರು ಹರಿಸಿ ರೈತರು ಬೇಸಿಗೆಯಲ್ಲಿ ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕು. ಹೇಮಾವತಿ ಕಾಲುವೆಗಳಿಗೆ ನೀರು ಹರಿಸಿದರೆ ತಾಲೂಕಿನ ಕೆರೆ ಕಟ್ಟೆಗಳ ನೀರಿನ ಸಂಗ್ರಹ ಹೆಚ್ಚುತ್ತದೆ ಎಂದರು.

ಕೆರೆ ಬಯಲಿನಲ್ಲಿ ಬೆಳೆದು ನಿಂತಿರುವ ಕಬ್ಬಯ, ಬಾಳೆ, ತೆಂಗು, ಅಡಿಕೆ ಮುಂತಾದ ಬೆಳೆಗಳ ರಕ್ಷಣೆ ಸಾಧ್ಯವಾಗುತ್ತದೆ. ಅಲ್ಲದೇ, ರೈತರು ರಾಗಿ, ಜೋಳ, ಹಲಸಂದೆ, ಎಳ್ಳು, ತೊಗರಿ ಮುಂತಾದ ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಹೇಮಗಿರಿ ಜಾತ್ರೆ ಹಿನ್ನೆಲೆಯಲ್ಲಿ ಮಂದಗೆರೆ ಎಡದಂಡೆ ನಾಲೆ ಮತ್ತು ಹೇಮಗಿರಿ ನಾಲೆಗೆ ನೀರು ಬಿಡಲಾಗಿದೆ. ಆದರೆ, ಮಂದಗೆರೆ ಬಲದಂಡೆ ನಾಲೆಗೆ ಇದುವರೆಗೂ ನೀರು ಹರಿಸಿಲ್ಲ. ಮಂದಗೆರೆ ಬಲದಂಡೆ ಮತ್ತು ಎಡದಂಡೆ ನಾಲೆಗಳು ಮತ್ತು ಹೇಮಗಿರಿ ನಾಲಾ ಬಯಲಿನಲ್ಲಿ ರೈತರು ಬೇಸಿಗೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜಾತ್ರೆ ಮುಗಿದ ಅನಂತರ ನದಿ ಅಣೆಕಟ್ಟೆ ನಾಲೆಗಳ ನೀರು ನಿಲ್ಲಿಸದೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಮಂದಗೆರೆ ಬಲದಂಡೆ ನಾಲೆಗೆ ತಕ್ಷಣವೇ ನೀರು ಹರಿಸಬೇಕು. ನದಿ ಅಣೆಕಟ್ಟೆ ನಾಲೆಗಳ ರೈತರಿಗೆ ಕಾಯಂ ನೀರು ನೀಡಿ ಭತ್ತ ಬೆಳೆಯಲು ಸಹಕರಿಸಬೇಕು. ನೀರು ಹರಿಸುವ ಸಂಬಂಧ ಗೊರೂರು ಜಲಾಶಯದ ಮುಖ್ಯ ಎಂಜಿನಿಯರ್ ಹಾಗೂ ತಾಲೂಕಿನ ಹೇಮಾವತಿ ಜಲಾಶಯ ಯೋಜನೆ ನಂ.3 ವಿಭಾಗ ಕಚೇರಿ ಕಾರ್ಯಪಾಲಕ ಎಂಜಿನಿಯರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಒಣಗುತ್ತಿರುವ ಬೆಳೆಗಳನ್ನು ರೈತರು ಕಾಪಾಡಿಕೊಳ್ಳಲು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರನ್ನು ಉಣಿಸಲು ಕೂಡಲೇ ನಾಲೆಗಳಿಗೆ ಕೂಡಲೇ ನೀರು ಹರಿಸಿ ರೈತರ ಬೆಳೆಗಳನ್ನು ಉಳಿಸಲು ಮುಂದಾಗುವಂತೆ ಆಗ್ರಹಿಸಿದರು.

ಹೇಮಾವತಿ ಜಲಾಶಯ ಯೋಜನೆ ನಂ.03 ವಿಭಾಗ ಕಚೇರಿಯಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯಪಾಲಕ ಎಂಜಿನಿಯರ್ ಹುದ್ದೆ ಖಾಲಿಯಾಗಿದೆ. ಪ್ರಭಾರದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕ ಎಂಜಿನಿಯರು ರೈತರ ಹಿತ ಕಾಯದೆ ಕೇವಲ ಗುತ್ತಿಗೆದಾರರ ಬಿಲ್ ಬರೆದುಕೊಂಡು ಕಮಿಷನ್ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕರೆದು ಹೇಮಾವತಿ ಜಲಾಶಯದಿಂದ ನದಿಗೆ ಹಾಗೂ ಕಾಲುವೆಗಳಿಗೆ ನೀರನ್ನು ಹರಿಸಲು ಕ್ರಮಕೈಗೊಂಡು ಅನ್ನಧಾತರಾದ ರೈತರ ನೆರವಿಗೆ ಕೂಡಲೇ ಧಾವಿಸಿ ಬರುವಂತೆ ಮನವಿ ಮಾಡಿದರು.