ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಹಲವಾರು ನಾಗರಿಕ ಸಮಸ್ಯೆಗಳ ಕುರಿತು ಜನರು ಅಹವಾಲು ಆಲಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರೆ, ಉಳಿದವುಗಳನ್ನು ನಿಗದಿತ ಅವಧಿಯೊಳಗೆ ಪರಿಹರಿಸುವ ಭರವಸೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಪಾಲಿಕೆ ವಾರ್ಡ್ ನಂ. 42ರ ಕೆ.ಜಿ.ಕೂಪ್ಪಲು ವ್ಯಾಪ್ತಿಯಲ್ಲಿ ಅಧಿಕಾರಿಗಳೊಂದಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ ಅವರು ಜನರ ಮನೆ ಬಾಗಿಲಿಗೆ ಪಾದಯಾತ್ರೆ ಕಾರ್ಯಕ್ರಮ ನಡೆಸಿದರು.

ಮೊದಲಿಗೆ ಶ್ರೀಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನಕ್ಕೆ ವಾರ್ಡ್‌ ಮುಖಂಡರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಅಲ್ಲಿಂದ ಬೆಳಿಗ್ಗೆ 8.45ಕ್ಕೆ ಪಾದಯಾತ್ರೆ ಆರಂಭಿಸಿದರು.

ಮನೆ ಮನೆಗೆ ಭೇಟಿ ನೀಡಿದ ಶಾಸಕರು ಸಾರ್ವಜನಿಕರ ಕುಂದುಕೊರತೆ ನೇರವಾಗಿ ಆಲಿಸಿದರು, ರೈಲ್ವೆ ಗೇಟ್ ಹಿಂಭಾಗದ ರಸ್ತೆಗಳಲ್ಲಿ ಚರಂಡಿ ಸಮಸ್ಯೆ ಹಾಗೂ ರಸ್ತೆ ಕಾಮಗಾರಿ ಮಾಡಿಸಿಕೊಡುವಂತೆ ಅಲ್ಲಿನ ನಿವಾಸಿಗಳು ಕೋರಿದರು ಹಾಗೂ ವಾರ್ಡ್ ನಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಇರುವುದಾಗಿ ಮಹಿಳೆಯರು ದೂರಿದರು. ಹಬ್ಬದ ದಿನಗಳಲ್ಲಿಯು ಸಹ ನೀರು ಸರಿಯಾಗಿ ಬರುವುದಿಲ್ಲ. ಇನ್ನೂ ಕೆಲವೆಡೆ ರಸ್ತೆ ಸಮತಟ್ಟಿಲ್ಲದ ಕಾರಣ ನಲ್ಲಿಗಳಲ್ಲಿ ನೀರು ಬಾರದಿರುವ ಬಗ್ಗೆ ಹಾಗೂ ನೀರಿನ ಸಮಸ್ಯೆನ್ನು ಅತಿ ತುರ್ತಾಗಿ ಸರಿಪಡಿಸುವಂತೆ ಕೋರಿದರು.

ಈ ಬಗ್ಗೆ ಸ್ಥಳದಲ್ಲಿಯೇ ಇದ್ದ ವಾಣಿ ವಿಲಾಸ ನೀರು ಸರಬರಾಜು ಇಇ ಮೋಹನ್ ಕುಮಾರ್ ಹಾಗೂ ಎಇಇ ಮುಸ್ತಫಾ ಅವರಿಗೆ ವಾರ್ಡ್ ನಲ್ಲಿ ನೀರಿನ ಸಮಸ್ಯೆ ಆಗದಂತೆ ಅವಶ್ಯವಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಕ್ರಮವಹಿಸುಬೇಕು ಹಾಗೂ ಶೀಘ್ರವಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

ಕೆ.ಜಿ.ಕೊಪ್ಪಲು ಹಳೇ ಗ್ರಾಮವಾಗಿರುವುದರಿಂದ ವಿದ್ಯುತ್ ಕಂಬಗಳು ಕೆಲವು ಕಡೆ ವಾಲಿಕೊಂಡಿದ್ದು, ಅದನ್ನು ಸರಿಪಡಿಸಿಕೊಡುವಂತೆ ಹಾಗೂ ಕೆಲವು ಕಡೆ ಬೀದಿ ದೀಪ ಅಳವಡಿಸಿಕೊಡುವಂತೆ ಸ್ವೀಕೃತವಾದ ದೂರಿಗೆ ಸ್ಥಳದಲ್ಲಿಯೇ ಇದ್ದ ಸೆಸ್ಕ್‌ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಸಮಸ್ಯ ಬಗೆಹರಿಸುವಂತೆ ಸೂಚಿಸಿದರು.

ನೀರು, ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಹಲವಾರು ನಾಗರಿಕ ಸಮಸ್ಯೆಗಳ ಕುರಿತು ಜನರು ಅಹವಾಲು ಆಲಿಸಿದರು. ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರೆ, ಉಳಿದವುಗಳನ್ನು ನಿಗದಿತ ಅವಧಿಯೊಳಗೆ ಪರಿಹರಿಸುವ ಭರವಸೆ ನೀಡಿದರು.

ಪಿಂಚಣಿ ಮಾಡಸಿಕೊಡುವಂತೆ ಹಾಗೂ ಮತದಾರರ ಪಟ್ಟಿಗೆ ಹೆಸರು ನೋಂದಣಿ ಆಗಿಲ್ಲ ಹಾಗೂ ಇನ್ನಿತರೇ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಇದ್ದ ಕಂದಾಯಾಧಿಕಾರಿಗಳು ಹಾಗೂ ವಲಯ ಆಯುಕ್ತರಿಗೆ ಅವರ ಮಾಹಿತಿಯನ್ನು ಪಡೆದು ಕೂಡಲೇ ಸಮಸ್ಯೆ ಬಗೆಹರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಕೆ.ಹರೀಶ್ ಗೌಡ, ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳು ನೇರವಾಗಿ ಜನರಿಗೆ ತಲುಪಬೇಕು. ಅಧಿಕಾರಿಗಳು ಕಾರ್ಯ ಪ್ರವೃತರಾಗಿರಬೇಕು ಎಂಬ ಉದ್ದೇಶದಿಂದ ಈ ಪಾದಯಾತ್ರೆ ಹಮ್ಮಿಕೊಂಡಿದೆ. ಸಾರ್ವಜನಿಕರಿಗೆ ಗೃಹ ಜ್ಯೋತಿ, ಗೃಹಲಕ್ಷ್ಮೀ, ವಿವಿಧ ಪಿಂಚಣಿಗಳ ವಿಳಂಬ ಕುರಿತು ಗೊಂದಲಗಳಿದ್ದಲ್ಲಿ ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ನಗರ ಪಾಲಿಕೆ ಕಂದಾಯ ವಿಭಾಗದ ಡಿಸಿ ಸೋಮಶೇಖರ್, ಎಸ್.ಇ.ಸಿಂಧು, ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್, ವಾಣಿ ವಿಲಾಸ್ ನೀರು ಸರಬರಾಜು ಮೋಹನ್ ಕುಮಾರ್, ಎಇಇ ಮುಸ್ತಫಾ, ವಲಯ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ವಲಯ ಆಯುಕ್ತ ಸಂದೀಪ್, ಎಂಜಿನಿಯರ್ ಮಧುಸೂದನ್, ತೇಜಸ್ವಿನಿ ಸೇರಿದಂತೆ ಸೆಕ್‌, ಕಂದಾಯ ಇಲಾಖೆ, ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.

ಪಾದಯಾತ್ರೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ದೇವರಾಜ ಬ್ಲಾಕ್ ಅಧ್ಯಕ್ಷ ಡಿ. ನಾಗಭೂಷಣ್, ವಾರ್ಡ್ ಅಧ್ಯಕ್ಷರಾದ ಹರೀಶ್, ಮುಖಂಡರಾದ ರಾಜಣ್ಣ, ಭಾಸ್ಕರ್, ಬಸವರಾಜು, ಬರಕ್ಕಿ ಮಾದೇವಣ್ಣ, ಚೆನ್ನಪ್ಪ, ನಾಗಣ್ಣ, ಬಂದೀಗೌಡ್ರು ಕುಮಾರಣ್ಣ ಶ್ರೀನಿವಾಸ್, ಪ್ರದೀಪ್, ದೀಪು, ಗಿರೀಶ್, ಮಹೇಶ್, ಚಂದ್ರು ಸೇರಿದಂತೆ ಸ್ಥಳೀಯ ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.