ಬರಿದಾದ ಕೆರೆ-ಕಟ್ಟೆಗಳು; ಕುಡಿಯುವ ನೀರಿಗೆ ಪಕ್ಷಿಗಳ ಪರದಾಟ..!

| Published : May 15 2024, 01:30 AM IST

ಬರಿದಾದ ಕೆರೆ-ಕಟ್ಟೆಗಳು; ಕುಡಿಯುವ ನೀರಿಗೆ ಪಕ್ಷಿಗಳ ಪರದಾಟ..!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಕೆಲ ತಿಂಗಳಿಂದ ಮಳೆ ಇಲ್ಲದೇ, ಬಿಸಿಲಿನ ತಾಪಕ್ಕೆ ಬಹುತೇಕ ಕೆರೆ ಕಟ್ಟೆಗಳು ಬರಿದಾಗಿದ್ದವು. ಇದರಿಂದ ಕಡಿಮೆ ಪ್ರಮಾಣದಲ್ಲಿ ಬಿದ್ದ ಮಳೆ ನೀರನ್ನು ಭೂಮಿ ನೀರು ಕುಡಿದಿದೆ. ಮತ್ತೆ ಮಳೆಯಾದರೆ ಕೆರೆ ಕಟ್ಟೆಗಳಲ್ಲಿ ನೀರು ಬರುತ್ತದೆ ಎಂಬುದು ರೈತರ ಅನಿಸಿಕೆಯಾಗಿದೆ.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ಬರಗಾಲದಿಂದಾಗಿ ಹೋಬಳಿಯ ಬಹುತೇಕ ಕೆರೆ, ಕಟ್ಟೆಗಳು ಬರಿದಾಗಿರುವುದರಿಂದ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪರದಾಟ ನಡೆಸುತ್ತಿವೆ.

ಬಿಸಿಲಿನ ತಾಪಕ್ಕೆ ಕಂಗೆಟ್ಟಿರುವ ಪಕ್ಷಿಗಳು ಹಳ್ಳಿಗಳ ಕೆಲವೆಡೆ ಇರುವ ಕೆರೆಗಳಲ್ಲಿನ ಅಲ್ಪಸ್ವಲ್ಪ ನೀರನ್ನು ಹುಡುಕಿಕೊಂಡು ಹೋಗಿ ತಮ್ಮ ದಾಹ ನೀಗಿಸಿಕೊಳ್ಳುತ್ತಿವೆ. ಕಳೆದ ಕೆಲ ದಿನಗಳಿಂದ ಹೋಬಳಿಯ ಸುತ್ತಮುತ್ತ ಮಳೆಯಾಗದೇ ಗುಡುಗು ಸಿಡಿಲು ಮಾತ್ರ ಸೀಮಿತವಾಗಿದೆ.

ಮಳೆ ರಾಯಣ್ಣನ ಕೃಪೆ ಇಲ್ಲದೆ ಮಳೆಗಾಗಿ ಕಾಯುತ್ತಿದ್ದ ರೈತ ಬಾಂಧವರಿಗೆ ಸೋಮವಾರ ಸಂಜೆ ಪ್ರಾರಂಭವಾದ ಮಳೆ ಮಧ್ಯರಾತ್ರಿ ತುಂಬಾ ಜೋರಾಗಿ ಮಳೆ ಸುರಿದು ಭೂಮಿಗೆ ತಂಪೇರೆಯಿತು. ಆದರೆ, ಕೆರೆ ಕಟ್ಟೆಗಳಿಗೆ ಮಾತ್ರ ನೀರು ಬಂದಿಲ್ಲ.

ಕಳೆದ ಕೆಲ ತಿಂಗಳಿಂದ ಮಳೆ ಇಲ್ಲದೇ, ಬಿಸಿಲಿನ ತಾಪಕ್ಕೆ ಬಹುತೇಕ ಕೆರೆ ಕಟ್ಟೆಗಳು ಬರಿದಾಗಿದ್ದವು. ಇದರಿಂದ ಕಡಿಮೆ ಪ್ರಮಾಣದಲ್ಲಿ ಬಿದ್ದ ಮಳೆ ನೀರನ್ನು ಭೂಮಿ ನೀರು ಕುಡಿದಿದೆ. ಮತ್ತೆ ಮಳೆಯಾದರೆ ಕೆರೆ ಕಟ್ಟೆಗಳಲ್ಲಿ ನೀರು ಬರುತ್ತದೆ ಎಂಬುದು ರೈತರ ಅನಿಸಿಕೆಯಾಗಿದೆ.

ಹಲಗೂರು ಕೆರೆಗೆ ದಿನನಿತ್ಯ ವಿವಿಧ ಸ್ಥಳಗಳಿಂದ ಸಹ ಪಕ್ಷಿಗಳು ಬರುತ್ತವೆ. ಇರುವ ಅಲ್ಪಸ್ವಲ್ಪ ನೀರನ್ನು ಕುಡಿದು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿವೆ. ಸಮೀಪದ ಭೀಮನ ಕಿಂಡಿ ಬೆಟ್ಟಕ್ಕೆ ಮಳೆ ಆದರೆ ಅಲ್ಲಿ ಹರಿದು ಬರುವ ನೀರು ನಮ್ಮ ಹಲಗೂರು ಕೆರೆ ತುಂಬುತ್ತದೆ ಎಂಬುದು ವಾಡಿಕೆ ಇದೆ.

ಆದರೆ, ಅಲ್ಲಿಂದ ಬರುವ ಹಳ್ಳ ಕೊಳ್ಳಗಳು ಮುಚ್ಚಿ ಹೋಗಿರುವುದರಿಂದ ಕೆರೆ ತುಂಬುವುದು ತಡವಾಗುತ್ತಿದೆ. ಮುಚ್ಚು ಹೋಗಿರೋ ಕಾಲುವೆಗಳ ಉಳುತೆಗೆದರೆ ಕೆರೆ ತುಂಬಿಕೊಳ್ಳುತ್ತದೆ. ಅಂತರ್ಜಲ ಜಾಸ್ತಿಯಾಗಿ ಬೋರ್ ವೆಲ್ ಗಳಲ್ಲಿ ಸಹ ನೀರು ಸಮೃದ್ಧಿಯಾಗಿ ಬರುತ್ತದೆ.

ಕೆರೆಯಲ್ಲಿ ಗಿಡ ಬೆಳೆದುಕೊಂಡು ಹಾಗೂ ಹಲಗೂರುನಿಂದ ತ್ಯಾಜ್ಯ ವಸ್ತುಗಳನ್ನು ಅಲ್ಲೇ ಹಾಕುವುದರಿಂದ ನೀರು ಕುಲುಷಿತ ಗೊಳ್ಳುತ್ತದೆ. ಕೆರೆಯಿಂದ ಹೂಳೆತ್ತಿ ನೀರು ಹೊರಹೋಗದಂತೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಂಡರೆ ಕೆರೆಯಲ್ಲಿ ನೀರು ನಿರಂತರವಾಗಿ ತುಂಬಿರುತ್ತದೆ.

ಕಳೆದ ವರ್ಷ ಮುಂಗಾರು ಮಳೆಯಿಂದ 20 ವರ್ಷಗಳ ನಂತರ ಹಲಗೂರು ಕೆರೆ ತುಂಬಿತ್ತು. ಈ ಬಾರಿ ಮುಂಗಾರು ಮಳೆ ಇಲ್ಲದೆ ನೀರು ಸಹ ಬಂದಿಲ್ಲ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿ ಪ್ರಾಣಿ ಪಕ್ಷಿಗಳಿಗೆ ನೀರು ಸಿಗಬೇಕು. ಮುಂದಿನ ದಿನಗಳಲ್ಲಿ ಜನ, ಜಾನುವಾರು, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತಾಗಲಿ ಎಂಬುದು ಈ ಭಾಗದ ಜನರು ಪ್ರಾರ್ಥಿಸಿದ್ದಾರೆ.